ಸಾಲ ತೀರಿಸಲು ಸಾಧ್ಯವಾಗದೇ ಸಂಕಷ್ಟಕ್ಕೀಡಾದ ರೈತನೋರ್ವ ತನ್ನ ಕಿಡ್ನಿ ಹಾಗೂ ಲಿವರ್‌ನ್ನು ಮಾರಾಟಕ್ಕಿಟ್ಟ ಮನಕಲುಕುವ ಘಟನೆ ಮಹಾರಾಷ್ಟ್ರದ ವಾಶಿಂನಲ್ಲಿ ನಡೆದಿದೆ.
ವಾಶಿಂ(ಮಹಾರಾಷ್ಟ್ರ): ಸಾಲ ತೀರಿಸಲು ಸಾಧ್ಯವಾಗದೇ ಸಂಕಷ್ಟಕ್ಕೀಡಾದ ರೈತನೋರ್ವ ತನ್ನ ಕಿಡ್ನಿ ಹಾಗೂ ಲಿವರ್‌ನ್ನು ಮಾರಾಟಕ್ಕಿಟ್ಟ ಮನಕಲುಕುವ ಘಟನೆ ಮಹಾರಾಷ್ಟ್ರದ ವಾಶಿಂನಲ್ಲಿ ನಡೆದಿದೆ. ರಾಜ್ಯ ಸರ್ಕಾರ ಚುನಾವಣೆ ವೇಳೆ ಸಾಲ ಮನ್ನಾ ಭರವಸೆ ನೀಡಿದ್ದು, ಅದನ್ನು ಸರ್ಕಾರ ಪೂರೈಸದ ಹಿನ್ನೆಲೆ ಸತೀಶ್ ಐಡೊಲೆ ಎಂಬ ರೈತ ತಮ್ಮ ಕಿಡ್ನಿ ಹಾಗೂ ಲಿವರ್‌ನ್ನು ಮಾರುವುದಾಗಿ ಹೇಳಿ ರಾಜ್ಯ ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಳಿ ಬಣ್ಣದ ಬ್ಯಾನರ್ ಮೇಲೆ ಅವರು ಕಿಡ್ನಿಗೆ 75 ಸಾವಿರ ಲಿವರ್‌ಗೆ 90 ಸಾವಿರ ಎಂದು ಬರೆದುಕೊಂಡಿದ್ದು, ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ. ಅಡೊಲಿ ಗ್ರಾಮದ ನಿವಾಸಿಯಾದ ಸತೀಶ್ ಐಡೊಲೆ ಎಂಬುವವರೇ ಹೀಗೆ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ. ಮಹಾಯುತಿ ಸರ್ಕಾರವೂ ಚುನಾವಣೆ ಸಮಯದಲ್ಲಿ ಸಾಲ ಮನ್ನಾ ಮಾಡುವ ಭರವಸೆ ನೀಡಿತ್ತು. ಆದರೆ ಚುನಾವಣೆಯ ನಂತರ ಸಾಲವನ್ನು ರೈತರೇ ಪಾವತಿ ಮಾಡಬೇಕು ಎಂದು ಹೇಳಿದೆ.
ಸರ್ಕಾರದ ಈ ನಿರ್ಧಾರದ ವಿರುದ್ಧ ರೈತ ಸತೀಶ್ ಐಡೊಲೆ ಪ್ರತಿಭಟನೆ ಮಾಡುತ್ತಿದ್ದು, ಅವರ ವಿಭಿನ್ನ ಪ್ರತಿಭಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೈನ್‌ಬೋರ್ಡೊಂದನ್ನು ಹಿಡಿದು ರೈತ ಸತೀಶ್ ಅವರು ವಾಸಿಂನ ಜನನಿಬಿಡ ರಸ್ತೆಯಲ್ಲಿ ಸಾಗುತ್ತಿದ್ದು,ಅವರು ಹಿಡಿದ ಸೈನ್‌ಬೋರ್ಡ್‌ನಲ್ಲಿ ಹೀಗಿದೆ. ರೈತರಿಂದ ಅಂಗಾಂಗಗಳನ್ನು ಖರೀದಿಸಿ, ಕಿಡ್ನಿಗೆ 75 ಸಾವಿರ ರೂಪಾಯಿ,90 ಸಾವಿರ ರೂಪಾಯಿಗೆ ಲಿವರ್ ಹಾಗೂ 25 ಸಾವಿರ ರೂಪಾಯಿಗೆ ಕಣ್ಣನ್ನು ನೀಡಲಾಗುವುದು ಎಂದು ಬರೆಯಲಾಗಿದೆ. ಇವರ ಈ ವಿಭಿನ್ನ ಪ್ರತಿಭಟನೆ ಕೂಡಲೇ ಜನರನ್ನು ಸೆಳೆದಿದ್ದು, ಎಲ್ಲರೂ ಇವರು ಬೋರ್ಡ್‌ನಲ್ಲಿ ಏನು ಬರೆದಿದ್ದಾರೆ ಎಂಬುದನ್ನು ನೋಡಲು ಕುತೂಹಲದಿಂದ ಅಲ್ಲಿ ಸೇರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್, ಚುನಾವಣೆಗೆ ಮೊದಲು, ದೇವೇಂದ್ರ ಫಡ್ನವೀಸ್ ರೈತರ ಸಾಲಗಳನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಈಗ, ನಮ್ಮನ್ನೇ ಮರುಪಾವತಿಸಲು ಹೇಳುತ್ತಿದ್ದಾರೆ. ನಮ್ಮಲ್ಲಿ ಏನೂ ಉಳಿದಿಲ್ಲದಿದ್ದಾಗ ನಾವು ಅದನ್ನು ಹೇಗೆ ಮಾಡಲು ಸಾಧ್ಯ? ನನ್ನ ಅಂಗಗಳನ್ನು ಮಾರಾಟ ಮಾಡುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ"ಎಂದು ಅವರು ವಿಷಾದಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಕುಟುಂಬದವ ಅಂಗಾಂಗಗಳಿಗೂ ದರ ನಿಗದಿ ಮಾಡಿದ್ದಾರೆ. ತಮ್ಮ ಪತ್ನಿಯ ಮೂತ್ರಪಿಂಡವನ್ನು 40,000 ರೂ.ಗೆ, ತಮ್ಮ ಮಗನ ಮೂತ್ರಪಿಂಡವನ್ನು 20,000 ರೂ.ಗೆ ಮತ್ತು ತಮ್ಮ ಕಿರಿಯ ಮಗುವಿನ ಅಂಗಗಳನ್ನು 10,000 ರೂ.ಗೆ ನೀಡುವುದಾಗಿ ಹೇಳಿದ್ದಾರೆ. ತಮ್ಮ ದೇಹದ ಅಂಗಾಂಗಗಳು ತಮ್ಮ 1 ಲಕ್ಷ ರೂ. ಸಾಲವನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಅಂಗ್ಲ ಮಾಧ್ಯಮ ಇಂಡಿಯಾ ಟುಡೇ ವರದಿ ಮಾಡಿದೆ.
ಸರ್ಕಾರ ತನ್ನ ಭರವಸೆಯನ್ನು ಈಡೇರಿಸುವಂತೆ ಒತ್ತಾಯಿಸಿ ಸತೀಶ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಜಿಲ್ಲಾ ಕಲೆಕ್ಟರ್ ಕಚೇರಿಯ ಮೂಲಕ ಪತ್ರವೊಂದನ್ನು ಸಲ್ಲಿಸಿದರು. ಸಾಲ ಮರುಪಾವತಿಸಲು ತನಗೆ ದಾರಿ ಇಲ್ಲದ ಕಾರಣ ಆತ್ಮಹತ್ಯೆಯನ್ನು ಬಿಟ್ಟು ಬೇರೆ ದಾರಿ ಕಾಣುತ್ತಿಲ್ಲ ಎಂದು ಅವರು ಹೇಳಿದರು. ಕೇವಲ ಎರಡು ಎಕರೆ ಭೂಮಿಯನ್ನು ಹೊಂದಿದ್ದ ಅವರು ಮಹಾರಾಷ್ಟ್ರ ಬ್ಯಾಂಕಿನಿಂದ ಸಾಲ ಪಡೆದಿದ್ದರು ಆದರೆ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಸಾಲ ತೀರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇತ್ತೀಚೆಗೆ, ರೈತರು ತಮ್ಮ ಸಾಲಗಳಿಗೆ ತಾವೇ ಜವಾಬ್ದಾರರಾಗಿರಬೇಕು ಮತ್ತು ಸರ್ಕಾರವು ಅವುಗಳನ್ನು ಮನ್ನಾ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು. ಸತೀಶ್ ಅವರು ಈ ನಿಲುವನ್ನು ಟೀಕಿಸುತ್ತಾ, ಸರ್ಕಾರವು 7/12 ದಾಖಲೆಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿತು, ಆದರೆ ಈಗ ಅವರು ಮರುಪಾವತಿಯನ್ನು ಒತ್ತಾಯಿಸುತ್ತಿದ್ದಾರೆ. ಸೋಯಾಬೀನ್ ಕ್ವಿಂಟಲ್‌ಗೆ ಕೇವಲ 3,000 ರೂ.ಗಳಿಗೆ ಮಾರಾಟವಾಗುತ್ತದೆ. ರೈತರನ್ನು ವಂಚಿಸಲಾಗುತ್ತಿದೆ ಮತ್ತು ಕೃಷಿ ಉತ್ಪನ್ನಗಳಿಗೆ ಇನ್ನೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.