ಮಹಾರಾಷ್ಟ್ರ ಬಿಕ್ಕಟ್ಟು ಇದೀಗ ಸುಪ್ರೀಂಕೋರ್ಟ್‌ ಅಂಗಳಕ್ಕೆ

By Govindaraj SFirst Published Jun 27, 2022, 5:10 AM IST
Highlights

ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದೊಳಗಿನ ಬಂಡಾಯ ಮತ್ತು ಬಂಡಾಯ ಪರಿಣಾಮ ಮಹಾ ಅಘಾಡಿ ಸರ್ಕಾರದಲ್ಲಿ ಕಾಣಿಸಿಕೊಂಡ ಬಿಕ್ಕಟ್ಟು ನಿರೀಕ್ಷೆಯಂತೆಯೇ ಇದೀಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

ನವದೆಹಲಿ (ಜೂ.27): ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದೊಳಗಿನ ಬಂಡಾಯ ಮತ್ತು ಬಂಡಾಯ ಪರಿಣಾಮ ಮಹಾ ಅಘಾಡಿ ಸರ್ಕಾರದಲ್ಲಿ ಕಾಣಿಸಿಕೊಂಡ ಬಿಕ್ಕಟ್ಟು ನಿರೀಕ್ಷೆಯಂತೆಯೇ ಇದೀಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಬಂಡಾಯ ಶಾಸಕರ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯ ಉಪಸ್ಪೀಕರ್‌ ನರಹರಿ ಅವರು ಕೈಗೊಂಡ ಇತ್ತೀಚಿನ ಕೆಲ ನಿರ್ಧಾರಗಳನ್ನು ಪ್ರಶ್ನಿಸಿ ಬಂಡಾಯ ನಾಯಕ ಏಕನಾಥ್‌ ಶಿಂಧೆ ಸುಪ್ರೀಂಕೋರ್ಟ್‌ಗೆ ಭಾನುವಾರ ಅರ್ಜಿ ಸಲ್ಲಿಸಿದ್ದಾರೆ. 

ಈ ಅರ್ಜಿ ಸೋಮವಾರ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿರುವ ಕಾರಣ ಎಲ್ಲರ ಗಮನ ಇದೀಗ ಮುಂಬೈ ಮತ್ತು ಗುವಾಹಟಿಯಿಂದ ನವದೆಹಲಿಯತ್ತ ಹೊರಳಿದೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ 35ಕ್ಕೂ ಹೆಚ್ಚು ಶಾಸಕರು ಬಂಡೆದ್ದು ಸೂರತ್‌, ಬಳಿಕ ಗುವಾಹಟಿಗೆ ತೆರಳಿದ ಬೆನ್ನಲ್ಲೇ, ಶಿವಸೇನೆ ವಿಧಾನಸಭೆಯಲ್ಲಿನ ತನ್ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಏಕನಾಥ್‌ ಶಿಂಧೆ ಅವರನ್ನು ತೆಗೆದು ಹಾಕಿತ್ತು. ಜೊತೆಗೆ ಶಿಂಧೆ ಜಾಗಕ್ಕೆ ಅಜಯ್‌ ಚೌಧರಿ ಅವರನ್ನು ನೇಮಿಸಿತ್ತು. 

ಗುವಾಹಟಿಯಿಂದ 40 ಶಾಸಕರ ಶವ ತಲುಪುತ್ತೆ: ಬಂಡಾಯವೆದ್ದವರಿಗೆ ಶಿವಸೇನೆ ನಾಯಕನ ಬಹಿರಂಗ ಬೆದರಿಕೆ!

ಪಕ್ಷದ ಈ ಎರಡೂ ನಿರ್ಧಾರವನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್‌ ಆಗಿರುವ ಉಪ ಸ್ಪೀಕರ್‌ ನರಹರಿ ಅವರು ಅಂಗೀಕರಿಸಿದ್ದರು. ಆದರೆ ಶಿವಸೇನೆಯಲ್ಲಿ ತಮಗೇ ಬಹುಮತ ಇರುವ ಕಾರಣ ತಮ್ಮದೇ ನಿಜವಾದ ಬಣ. ಪಕ್ಷ ತಮ್ಮನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಚೌಧರಿ ನೇಮಕ ಅಸಿಂಧುಗೊಳಿಸಬೇಕು ಎಂದು ಶಿಂಧೆ ಬಣ ಕೋರಿದೆ. ಜೊತೆಗೆ ಶಾಸಕಾಂಗ ಸಭೆಗೆ ಗೈರಾದ ಕಾರಣ ನೀಡಿ 16 ಜನರನ್ನು ಅನರ್ಹಗೊಳಿಸಬೇಕು ಎಂದು ಪಕ್ಷದ ಸಚೇತಕ ಸುನಿಲ್‌ ಪ್ರಭು ಮಾಡಿದ್ದ ಶಿಫಾರಸಿನ ಅನ್ವಯ ಉಪಸ್ಪೀಕರ್‌ ಶಿವಸೇನೆಯ 16 ಶಾಸಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. 

ಆದರೆ ಮುಖ್ಯ ಸಚೇತಕ ಸ್ಥಾನದಿಂದ ಸುನಿಲ್‌ ಪ್ರಭು ಅವರನ್ನು ತೆಗೆದುಹಾಕಿ ಭರತ್‌ ಅವರನ್ನು ನೇಮಿಸಲಾಗಿದೆ. ಹೀಗಾಗಿ ಸುನಿಲ್‌ ಹೊರಡಿಸಿದ ವಿಪ್‌ ಕಾನೂನು ಬಾಹಿರ. ಹೀಗಾಗಿ ಈ ಪ್ರಕ್ರಿಯೆಗೂ ತಡೆ ನೀಡಬೇಕು ಎಂದು ಶಿಂಧೆ ಬಣ ಕೋರಿದೆ. ಜೊತೆಗೆ ಬಂಡಾಯ ಶಾಸಕರ ಕಚೇರಿಗಳ ಮೇಲೆ ಹಲವೆಡೆ ದಾಳಿ ನಡೆದಿರುವ ಕಾರಣ ಮಹಾರಾಷ್ಟ್ರದಲ್ಲಿ ಶಾಸಕರ ಕುಟುಂಬಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಶಿಂಧೆ ಬಣ ಕೋರಿಕೆ ಸಲ್ಲಿಸಿದೆ.

‘ಕಾಯ್ತಾ ಇರಿ.. ಬಂದೆ', ಭದ್ರತಾ ಸಿಬ್ಬಂದಿಗೇ ಚಳ್ಳೆಹಣ್ಣು ತಿನ್ನಿಸಿದ ಶಿವಸೇನೆ ಶಾಸಕರು!

ಇಂದು ವಿಚಾರಣೆ: ಈ ಅರ್ಜಿಗಳನ್ನು ಭಾನುವಾರ ತಡರಾತ್ರಿಯೇ ವಿಚಾರಣೆ ನಡೆಸಬೇಕೆಂದು ಕೋರಿಕೆ ಸಲ್ಲಿಸಲಾಗಿತ್ತಾದರೂ, ಅದನ್ನು ಸೋಮವಾರ ವಿಚಾರಣೆಗೆ ನಿಗದಿಪಡಿಸಲಾಗಿದೆ. ನ್ಯಾ.ಸೂರ್ಯಕಾಂತ್‌ ಮತ್ತು ನ್ಯಾ. ಜೆ.ಬಿ.ಪರ್ಡಿವಾಲಾ ಅವರನ್ನೊಳಗೊಂಡ ರಜಾಕಾಲದ ದ್ವಿಸದಸ್ಯ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ.

click me!