
ಅದು 1992. ಇನ್ನೂ 22 ವರ್ಷದ ಚಿಗುರು ಮೀಸೆ ಯುವಕನೊಬ್ಬ ನಾಗ್ಪುರ ಮಹಾನಗರ ಪಾಲಿಕೆ ಚುನಾನವಣೆಯಲ್ಲಿ ಗೆದ್ದು ಕಾರ್ಪೋರೇಟರ್ ಆಗಿ ಆಯ್ಕೆಯಾದಾಗ ಸ್ವತಃ ಬಿಜೆಪಿಯ ಹಿರಿಯ ನಾಯಕರೆಲ್ಲ ಮೂಗಿನ ಮೇಲೆ ಬೆರಳಿಟ್ಟಿದ್ದರು. ಮರಾಠ ನೆಲದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಯಾವುದೇ ರಾಜಕೀಯ ಹಿನ್ನಲೆ ಇಲ್ಲದೇ ಮೊದಲ ಚುನಾವಣೆಯಲ್ಲಿ ಗೆದ್ದಾಗಲೇ ಮುಂದೊಂದು ದಿನ ದೊಡ್ಡ ನಾಯಕನಾಗುವ ಸುಳಿವು ಸಿಕ್ಕಿತ್ತು.
1997 ರಲ್ಲಿ ಮತ್ತೆ ಎರಡನೇ ಬಾರಿಗೆ ಪಾಲಿಕೆ ಚುನಾವಣೆಯಲ್ಲಿ ಗೆದ್ದಾಗ ಎಲ್ಲಾ ಹಿರಿತಲೆಗಳನ್ನು ಮೀರಿಸಿ ಮೇಯರ್ ಆಗಿ ಆಯ್ಕೆಗೊಂಡಾಗ ಸಂಘಪರಿವಾದರ ಭದ್ರಕೋಟೆ ನಾಗ್ಪುರವೇ ಅಚ್ಚರಿಗೆ ಬಿದ್ದಿತ್ತು. ನಗರದ ಅತೀ ಕಿರಿಯ ಹಾಗೂ ದೇಶದ ಎರಡನೇ ಅತೀ ಕಿರಿಯ ಮೇಯರ್ ಎಂಬ ಕೀರ್ತಿಗೆ ಪಾತ್ರವಾದ ಆ ಯುವಕನ ಹೆಸರು ದೇವೇಂದ್ರ ಗಂಗಾಧರ್ ರಾವ್ ಫಡ್ನ್ನವೀಸ್. ಸದ್ಯ ಎರಡನೇ ಬಾರಿಗೆ ದೇಶದ ಅತೀ ದೊಡ್ಡ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿ ನಿಂತಿದ್ದಾರೆ.
'ಮಹಾ' ನೆರೆ ಸಂತ್ರಸ್ತರ ಮರೆತ ನಾಯಕರಿಗೆ ಸೋಲಿನ ಪಾಠ
1970 ಜುಲೈ 22 ರಂದು ನಾಗ್ಪುರದಲ್ಲಿ ಹುಟ್ಟಿಬೆಳೆದ ಫಡ್ನವೀಸ್ ಬೆಳೆದಿದ್ದು, ಓದಿದ್ದು ಎಲ್ಲವೂ ಹುಟ್ಟೂರಲ್ಲೇ. ನಾಗ್ಪುರ ವಿವಿಯಿಂದ ವ್ಯವಹಾರ ನಿರ್ವಹಣೆಯಲ್ಲಿ ಉನ್ನತ ಶಿಕ್ಷಣ ಮುಗಿಸಿದ ಫಡ್ನವೀಸ್, ರಾಜಕೀಯ ಪ್ರವೇಶಿಸಿದ್ದು 1990ರಲ್ಲಿ. ತಂದೆ ಗಂಗಾಧರ್ ಫಡ್ನವೀಸ್ ಆರೆಸ್ಸೆಸ್ ವಿಚಾರಧಾರೆಯುಳ್ಳ ವ್ಯಕ್ತಿಯಾಗಿದ್ದರಿಂದ ಫಡ್ನವೀಸ್ ಕೂಡ ಅದೇ ಸಿದ್ದಾಂತದತ್ತ ಆಕರ್ಷಿತರಾಗಿದ್ದರು.
1999 ರಲ್ಲಿ ನಾಗ್ಪುರ ನೈರುತ್ಯ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಫಡ್ನವೀಸ್ ಈವರೆಗೂ ಆ ಕ್ಷೇತ್ರದಲ್ಲಿ ಸತತ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಫಡ್ನವೀಸ್ ಶಿವಸೇನೆ ಜತೆಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಗಾದಿಗೇರಿದ್ದರು. ಮುಖ್ಯಮಂತ್ರಿಯಾಗಿ ಪೂರ್ಣವಧಿ ಪೂರೈಸಿದ ಮಹಾರಾಷ್ಟ್ರದ ಎರಡನೇ ಮುಖ್ಯಮಂತ್ರಿ ಹಾಗೂ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಮೊದಲ ಕಾಂಗ್ರೆಸ್ಸೇತರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಗೋವಾದಿಂದ ಮಹದಾಯಿ ಖ್ಯಾತೆ: ಕೇಂದ್ರದ ವಿರುದ್ಧ ಸಮರ
ಮೈತ್ರಿ ಪಕ್ಷ ಶಿವಸೇನೆ ಸತತವಾಗಿ ತಿವಿಯುತ್ತಿದ್ದರೂ ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸುವುದರ ಜತೆಗೆ 2014 ಹಾಗೂ 19ರ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ತಂದು ಕೊಡಲು ಸಫಲವಾದ ಫಡ್ನವೀಸ್‌ಗೆ ಈಗ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದಿದೆ. ಜತೆಗೆ ಸಂಘ ಪರಿವಾರದ ಮುಖ್ಯ ಕಚೇರಿಯೇ ತನ್ನ ಬೆನ್ನ ಹಿಂದಿರುವುದು ಫಡ್ನವೀಸ್ ಪ್ಲಸ್ ಪಾಯಿಂಟ್. ಇದೇ ಕಾರಣದಿಂದಾಗಿಯೇ ಅತೀ ಕಡಿಮೆ ವಯಸ್ಸಿನಲ್ಲಿ ಮೇಯರ್ ಹಾಗೂ ಮುಖ್ಯಮಂತ್ರಿಯಾಗುವ ಅವಕಾಶ ಒಲಿದು ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ