ಗೋವಾದಿಂದ ಮಹದಾಯಿ ಖ್ಯಾತೆ : ಕೇಂದ್ರದ ವಿರುದ್ಧ ಸಮರ

By Kannadaprabha NewsFirst Published Oct 25, 2019, 8:40 AM IST
Highlights

ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಮಹದಾಯಿ ನ್ಯಾಯಾಧಿಕರಣ ಅಥವಾ ನ್ಯಾಯಾಲಯದ ಮೊರೆ ಹೋಗುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಗುಡುಗಿದ್ದಾರೆ.

ಪಣಜಿ [ಅ.25]:  ಕರ್ನಾಟಕ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮೋದನೆ ನೀಡಿರುವುದು ಗೋವಾದಲ್ಲಿ ಆಕ್ರೋಶದ ಅಲೆ ಎಬ್ಬಿಸಿದೆ. ತಮ್ಮ ಪಕ್ಷವೇ ಅಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಮಹದಾಯಿ ನ್ಯಾಯಾಧಿಕರಣ ಅಥವಾ ನ್ಯಾಯಾಲಯದ ಮೊರೆ ಹೋಗುವುದಾಗಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಗುಡುಗಿದ್ದಾರೆ.

ಇದೇ ವೇಳೆ, ಕೇಂದ್ರ ಪರಿಸರ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲು ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ. ಕೃಷ್ಣಮೂರ್ತಿ ನೇತೃತ್ವದ ನಿಯೋಗ ಗುರುವಾರ ದಿಲ್ಲಿಗೆ ತೆರಳಿದೆ. ಪರಿಸರ ಅನುಮೋದನೆಗೆ ಸಂಬಂಧಿಸಿದಂತೆ ನಿಯೋಗ ಚರ್ಚೆ ನಡೆಸಲಿದ್ದು, ಮಾತುಕತೆಯ ವಿವರಗಳನ್ನು ಮುಖ್ಯಮಂತ್ರಿ ಸಾವಂತ್‌ ಅವರಿಗೆ ಸಲ್ಲಿಸಲಿದೆ.

ಇನ್ನು ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್‌ ಛೋಡಂಕರ್‌ ಹೇಳಿದ್ದಾರೆ. ‘ಮಹದಾಯಿ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಗೋವಾ ಸರ್ಕಾರ ವಿಫಲವಾಗಿದ್ದು, ಕೇಂದ್ರ ಪರಿಸರ ಇಲಾಖೆ ಅನುಮೋದನೆ ವಿರುದ್ಧ ನಾವೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮೊರೆ ಹೋಗುತ್ತೇವೆ’ ಎಂದು ಗೋವಾ ಫಾರ್ವರ್ಡ್‌ ಪಕ್ಷದ ಅಧ್ಯಕ್ಷ ವಿಜಯ ಸರದೇಸಾಯಿ ಹೇಳಿದ್ದಾರೆ.

ನಮ್ಮನ್ನು ಕೇಳದೇ ಅನುಮತಿ ಹೇಗೆ?- ಸಿಎಂ: 

‘ನಮ್ಮನ್ನು ಕೇಳದೇ ಇದಕ್ಕೆ ಮಹದಾಯಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದರೆ ಸೂಕ್ತ ನ್ಯಾಯಾಲಯದಲ್ಲಿ ಅಥವಾ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಕೇಂದ್ರದ ನಿರ್ಧಾರ ಪ್ರಶ್ನಿಸುತ್ತೇವೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಟ್ವೀಟ್‌ ಮಾಡಿದ್ದಾರೆ.

‘ಪರಿಸರ ಇಲಾಖೆ ಅನುಮತಿ ನೀಡಿದ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಗೋವಾ ಸರ್ಕಾರವನ್ನು ಕೇಳದೇ ಅನುಮತಿ ನೀಡಲು ಸಾಧ್ಯವಿಲ್ಲ. ಮಹದಾಯಿ ನಮ್ಮ ತಾಯಿಗಿಂತಲೂ ಮಿಗಿಲು. ಅದನ್ನು ನಾವು ರಕ್ಷಿಸುತ್ತೇವೆ’ ಎಂದು ಹೇಳಿದ್ದಾರೆ.

click me!