
ಬಾಯ್‌ಫ್ರೆಂಡ್ ಜೊತೆ ಹೊರಗೆ ಹೋಗಿದ್ದ ಸ್ನಾತಕೋತ್ತರ ಪದವಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿದೆ. ಕಾರಿನಲ್ಲಿ ಗೆಳೆಯನ ಜೊತೆ ಸಂಚರಿಸುತ್ತಿದ್ದ ವೇಳೆ ಆಕೆಯ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆಯ ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಸಾಮೂಹಿಕ ಅತ್ಯಾ*ಚಾರವೆಸಗಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಸ್ನಾತಕೋತ್ತರ ಪದವಿ ಓದುತ್ತಿದ್ದ 20 ವರ್ಷದ ವಿದ್ಯಾರ್ಥಿನಿ ತನ್ನ ಗೆಳೆಯನ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಭಾನುವಾರ ರಾತ್ರಿ 10.30ರ ಸುಮಾರಿಗೆ ದುಷ್ಕರ್ಮಿಗಳು ಕೊಯಮತ್ತೂರು ವಿಮಾನ ನಿಲ್ದಾಣದ ಹಿಂಭಾಗ ಇರುವ ಬೃಂದಾವನ ನಗರದಲ್ಲಿ ಕಾರನ್ನು ಪಾರ್ಕಿಂಗ್ ಮಾಡಿದ್ದರು.
ಈ ವೇಳೆ ಮೊಪೆಡ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಕಾರಿನ ವಿಂಡ್‌ಶೀಲ್ಡ್(ಮುಂಭಾಗದ ಗಾಜು)ನ್ನು ಒಡೆದಿದ್ದಾರೆ. ನಂತರ ಯುವತಿಯ ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿದ್ದಾರೆ ಬಳಿಕ ಆಕೆಯನ್ನು ಬೆದರಿಸಿ ತಮ್ಮ ಮೊಪೆಡ್‌ನಲ್ಲಿ ಕೂರಿಸಿಕೊಂಡು ಒಂದು ಕಿಲೋ ಮೀಟರ್ ದೂರದ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮೂವರು ಒಬ್ಬರಾದ ಮೇಲೆ ಒಬ್ಬರು ಆಕೆಯ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕದ್ದ ಮೊಪೆಡ್‌ನಲ್ಲಿ ಬಂದಿದ್ದ ಕಾಮುಕರು
ಈ ಕಾಮುಕರ ದಾಳಿಯಿಂದ ಗಾಯಗೊಂಡಿದ್ದ ಮಹಿಳೆಯ ಬಾಯ್‌ಫ್ರೆಂಡ್ ಪೀಲಮೇಡು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಪೊಲೀಸರು ರಾತ್ರಿ 11 ಗಂಟೆ ಸುಮಾರಿಗೆ ಆ ಯುವತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬೆಳಗ್ಗೆ 4 ಗಂಟೆ ಸುಮಾರಿಗೆ ಯುವತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆ ಹೊತ್ತಿಗೆ ಕಾಮುಕರು ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರು ಹೇಳುವಂತೆ ಅವರು ಕೃತ್ಯವೆಸಗಲು ಬಳಸಿದ ಮೊಪೆಡ್ ಅನ್ನು ಕದ್ದ ವಾಹನವಾಗಿದೆ. ಸಂತ್ರಸ್ತ ಯುವತಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮೂವರು ಶಂಕಿತರ ಬಂಧನ: ಕೂಲಿ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದ ಶಂಕಿತರು
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಸೋಮವಾರ ರಾತ್ರಿ ಗುಂಡು ಹಾರಿಸಿ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸತೀಶ್, ಗುಣ ಮತ್ತು ಕಾರ್ತಿಕ್ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಮಧುರೈ ಜಿಲ್ಲೆಯವರಾಗಿದ್ದು, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೊಯಮತ್ತೂರಿನಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಮೂವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು ಆರೋಪಿಗಳ ಬಗ್ಗೆ ಪೊಲೀಸರು ಯಾವುದೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಬೆಳಕಿನ ಪ್ರಭಾವದಿಂದಾಗಿ ಆ ಪ್ರದೇಶದ ಸಿಸಿ ಕ್ಯಾಮೆರಾಗಳು ಅವರ ಮುಖಗಳನ್ನು ಸೆರೆಹಿಡಿಯಲು ವಿಫಲವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳು, ಸಂತ್ರಸ್ತೆ ಎಲ್ಲರೂ ಮಧುರೈನವರೇ!
ಸಾಮೂಹಿಕ ಅತ್ಯಾ*ಚಾರ ಸಂತ್ರಸ್ತೆ ಕೂಡ ಮಧುರೈ ಮೂಲದವರಾಗಿದ್ದು, ಕೊಯಮತ್ತೂರಿನಲ್ಲಿ ಓದುತ್ತಿದ್ದಳು, ಅಲ್ಲಿ ಅವಳು ಹಾಸ್ಟೆಲ್‌ನಲ್ಲಿ ತಂಗಿದ್ದಳು. ಆಕೆ ಆಘಾತದ ಸ್ಥಿತಿಯಲ್ಲಿದ್ದಾಳೆ ಮತ್ತು ಆಕೆಯ ಸ್ನೇಹಿತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅಪರಾಧಿಗಳನ್ನು ಬಂಧಿಸಲು ನಾವು ಏಳು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎ ಸರವಣ ಸುಂದರ್ ಹೇಳಿದ್ದಾರೆ. ಶಂಕಿತರನ್ನು ಗುರುತಿಸಲು ಪೊಲೀಸರು ಕ್ರಿಮಿನಲ್ ದಾಖಲೆ ಹೊಂದಿರುವ 60 ಕ್ಕೂ ಹೆಚ್ಚು ಜನರ ಛಾಯಾಚಿತ್ರಗಳನ್ನು ಸಂತ್ರಸ್ತೆಗೆ ತೋರಿಸಿದರು. ಆದರೆ ಆಕೆಗೆ ದಾಳಿಕೋರರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಹೇಳಿದರು. ಮಹಿಳೆಯರ ಮೇಲಿನ ಅತ್ಯಾ*ಚಾರ ಮತ್ತು ಹಿಂಸಾಚಾರದ ಘಟನೆಗಳ ವಿರುದ್ಧ ಎಐಎಡಿಎಂಕೆ ಮಹಿಳಾ ವಿಭಾಗ ಪ್ರತಿಭಟನಾ ಕರೆ ನೀಡಿದೆ. ಬಿಜೆಪಿ ಶಾಸಕ ವನತಿ ಶ್ರೀನಿವಾಸನ್ ಸೋಮವಾರ ಸಂಜೆ ಪಕ್ಷದ ಕಾರ್ಯಕರ್ತರೊಂದಿಗೆ ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಕೋಟಿಯೊಡೆಯ ಬೀಡಿ ಸಾಮ್ರಾಜ್ಯದ ಮಾಲೀಕನ ದುರಂತ ಅಂತ್ಯ: ಕುಡಿದ ಮತ್ತಿನಲ್ಲಿ ತಂದೆಗೆ ಗುಂಡಿಕ್ಕಿದ ಮಗ
ಇದನ್ನೂ ಓದಿ: ಬೆಂಗಳೂರಿನಲ್ಲಿ 2BHKಗೆ ಮನೆಯೊಡತಿ ಕೇಳಿದ ಡೆಪಾಸಿಟ್ ಎಷ್ಟು: ಶಾಕ್‌ನಲ್ಲಿ ಬಾಡಿಗೆದಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ