
ಚೆನ್ನೈ (ಮೇ.18): ಮಳೆಯಿಂದಾಗಿ ವಿದ್ಯುತ್ ಕಡಿತವಾಗಿದ್ದ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕಷ್ಟವಾದ ಹಿನ್ನೆಲೆಯಲ್ಲಿ, 2025ರ ನೀಟ್ -ಯುಜಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸದಂತೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಭಾರೀ ಗಾಳಿ ಮಳೆಯಿಂದಾಗಿ ಚೆನ್ನೈನ ಅವದಿಯಲ್ಲಿರುವ ಶ್ರೀ ಕೇಂದ್ರೀಯ ವಿದ್ಯಾಲಯ ಸಿಆರ್‌ಪಿಎಫ್ ಕಾಲೇಜಿನಲ್ಲಿ ಮೇ 4ರಂದು ಮಧ್ಯಾಹ್ನ 3ರಿಂದ 4.15ರ ವರೆಗೆ ವಿದ್ಯುತ್ ಕಡಿತವಾಗಿತ್ತು. ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ 13 ವಿದ್ಯಾರ್ಥಿಗಳು, ‘ಕರೆಂಟ್ ಹೋದಾಗ ಜನರೇಟರ್, ಇನ್ವರ್ಟರ್‌ಗಳಂತಹ ಬದಲಿ ವ್ಯವಸ್ಥೆಗಳು ಇರಲಿಲ್ಲ. ಆದಕಾರಣ, ನಾವು ಮಂದ ಬೆಳಕಿನಲ್ಲೇ ಪರೀಕ್ಷೆ ಬರೆಯಬೇಕಾಯಿತು. ಈ ವೇಳೆ ಮಳೆನೀರು ಪರೀಕ್ಷಾ ಕೊಠಡಿಯೊಳಗೂ ನುಗ್ಗಿದ್ದು, ಎಲ್ಲರೂ ಅತ್ತಿಂದಿತ್ತ ಓಡಾಡಿ ಕೋಲಾಹಲ ಸೃಷ್ಟಿಯಾಗಿತ್ತು. ಇದರ ಹೊರತಾಗಿಯೂ ಪರೀಕ್ಷೆ ಬರೆಯಲು ಹೆಚ್ಚಿಗೆ ಸಮಯ ನೀಡಲಾಗಿಲ್ಲ. ಆದ್ದರಿಂದ ಪೂರ್ಣ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಫಲಿತಾಂಶಕ್ಕೆ ತಡೆ ನೀಡಬೇಕು’ ಎಂದು ಕೋರಿದ್ದರು.
ಅಂತೆಯೇ, ‘ಅನ್ಯ ಕೇಂದ್ರಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ನಾವು ಎಕ್ಸಾಂ ಬರೆದ ಸ್ಥಿತಿ ಸರಿಯಿರಲಿಲ್ಲ. ಇದು ಎಲ್ಲರಿಗೂ ಸಮಾನ ಹಕ್ಕು ನೀಡುವ ಸಂವಿಧಾನದ 14ನೇ ವಿಧಿ ಮತ್ತು ಜೀವನ ರಕ್ಷಣೆ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 21ನೇ ವಿಧಿಯ ಉಲ್ಲಂಘನೆಯಾಗಿದೆ’ ಎಂದೂ ದೂರಿದ್ದರು. ಜತೆಗೆ, ಇದಕ್ಕೆ ಕೇಂದ್ರ ಸರ್ಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಕೂಡಾ ಲಭಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ। ವಿ. ಲಕ್ಷ್ಮೀನಾರಾಯಣನ್, ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದ್ದು, ವಿಚಾರಣೆಯನ್ನು ಜೂ.2ಕ್ಕೆ ಮುಂದೂಡಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ