ಕುನೋ ಪಾರ್ಕ್‌ನಲ್ಲಿ 8ನೇ ಚೀತಾ ಸಾವು, ಗಂಡು ಚೀತಾ ಸೂರಜ್‌ ಮರಣ

By Santosh Naik  |  First Published Jul 14, 2023, 3:57 PM IST

ಭಾರತದಲ್ಲಿ ಚೀತಾ ಸಂತತಿಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಾಜೆಕ್ಟ್‌ಗೆ ಭಾರೀ ಹಿನ್ನಡೆಯಾಗಿದೆ. ಮಧ್ಯಪ್ರದೇಶದ ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿ 8ನೇ ಚೀತಾ ಸೂರಜ್‌ ಶುಕ್ರವಾರ ಸಾವು ಕಂಡಿದೆ.


ಭೋಪಾಲ್‌ (ಜು.14): ಭಾರತದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಚೀತಾ ಶುಕ್ರವಾರ ಗಮನಾರ್ಹ ಹಿನ್ನಡೆಯನ್ನು ಕಂಡಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಮತ್ತೊಂದು ಚಿರತೆ ಶವವಾಗಿ ಪತ್ತೆಯಾಗಿದೆ. ದೇಶದಲ್ಲಿ ಚೀತಾವನ್ನು ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಾಜೆಕ್ಟ್‌ ಆಎಂಭವಾದ ಬಳಿಕ ಇದು 8ನೇ ಸಾವು ಎನಿಸಿದೆ. 2022ರ ಸೆಪ್ಟೆಂಬರ್‌ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ನಿಮಿತ್ತವಾಗಿ ನಮೀಬಿಯಾದಿಂದ ಎಂಟು ಚಿರತೆಗಳನ್ನು ಪ್ರಾಜೆಕ್ಟ್‌ ಚೀತಾ ಅಡಿಯಲ್ಲಿ ಭಾರತಕ್ಕೆ ತರಲಾಗಿತ್ತು. ಇವುಗಳನ್ನು ಕುನೋ ರಾಷ್ಟ್ರೀಯ ಪಾರ್ಕ್‌ನ ಅರಣ್ಯಕ್ಕೆ ಸ್ವತಃ ಪ್ರಧಾನಿ ಮೋದಿಯೇ ಬಿಟ್ಟಿದ್ದರು. ದಕ್ಷಿಣ ಆಫ್ರಿಕಾ ಮೂಲದ ವಯಸ್ಕ ಗಂಡು ಚೀತಾ ಸೂರಜ್‌ನ  ದೇಹವನ್ನು, ಶುಕ್ರವಾರ ಬೆಳಗ್ಗೆ ಗಸ್ತು ತಿರುಗುವ ತಂಡ ಪತ್ತೆ ಮಾಡಿತ್ತು. ಇದರ ಬೆನ್ನಲ್ಲಿಯೇ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ತೇಜಸ್‌ ಎನ್ನುವ ಹೆಸರಿನ ಚೀತಾ ನಿಗೂಢವಾಗಿ ಸಾವು ಕಂಡಿತ್ತು. ಇದರ ಸಾವಿನ ಕುರಿತಾದ ತನಿಖೆ ಪ್ರಗತಿಯಲ್ಲಿ ಇರುವಾಗಲೇ ಸೂರಜ್‌ ಚೀತಾ ಸಾವು ಕಂಡಿದೆ.

ಕಳೆದ ಮಂಗಳವಾರ ತೇಜಸ್  ಚೀತಾ ಸಾವು ಕಂಡಿತ್ತು. ತೇಜಸ್‌ ಚೀತಾ 5 ವರ್ಷವಾಗಿದ್ದಾಗಲೇ ಹೆಣ್ಣು ಚಿರತೆಯೊಂದಿಗಿನ ಹಿಂಸಾತ್ಮಕ ಕಾದಾಟದಿಂದ "ಆಘಾತ" ಕಂಡಿತ್ತು. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತೆಂದರೆ, ತೇಜಸ್‌ನಷ್ಟೇ ವಯಸ್ಸಿನ ಚೀತಾ 55 ರಿಂದ 60 ಕೆಜಿ ತೂಕ ಹೊಂದಿದ್ದರೆ, ತೇಜಸ್‌ ಮಾತ್ರ ಕೇವಲ 43 ಕೆಜಿ ತೂಕ ಹೊಂದಿತ್ತು. ಅದಲ್ಲದೆ, ತೇಜಸ್‌ ಚೀತಾದ ಆಂತರಿಕ ಅಂಗಗಳು ಕೂಡ ತೀರಾ ದುರ್ಬಲವಾಗಿದ್ದವು ಎಂದು ಪರೀಕ್ಷೆಯಲ್ಲಿ ತಿಳಿಸಲಾಗಿದೆ.

Tap to resize

Latest Videos

ಮಾರ್ಚ್ 27 ರಂದು, ಸಾಶಾ ಎಂಬ ಹೆಣ್ಣು ಚಿರತೆ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತು, ಏಪ್ರಿಲ್ 23 ರಂದು, ಉದಯ್ ಚೀತಾ ಹೃದಯ-ಶ್ವಾಸಕೋಶದ ವೈಫಲ್ಯದಿಂದ ಮತ್ತು ಮೇ 9 ರಂದು, ದಕ್ಷ ಎಂಬ ಹೆಣ್ಣು ಚಿರತೆ, ಗಂಡು ಚೀತಾದ ಹಿಂಸಾತ್ಮಕ ಸಂಭೋಗದ ವೇಳೆ ಸಾವು ಕಂಡಿತ್ತು.  ಎರಡು ಚಿರತೆ ಮರಿಗಳು ಮೇ 25 ರಂದು "ತೀವ್ರ ಹವಾಮಾನ ಪರಿಸ್ಥಿತಿ ಮತ್ತು ನಿರ್ಜಲೀಕರಣ" ದಿಂದ ಸಾವು ಕಂಡಿದ್ದವು.

ಕುತ್ತಿಗೆಯ ಬಳಿ ತೀವ್ರ ಗಾಯ, ಕುನೋ ಪಾರ್ಕ್‌ನಲ್ಲಿ ಇನ್ನೊಂದು ಚೀತಾ ತೇಜಸ್‌ ಸಾವು!

ಈ ಹಿಂದೆ ಚೀತಾಗಳ ನಿರಂತರ ಸಾವಿನ ಬಗ್ಗೆ ಕೇಂದ್ರ ಸರ್ಕಾರ ಕೂಡ ಉತ್ತರ ನೀಡಿತ್ತು. ಚೀತಾಗಳ ಸಾವಿನ ಹಿಂದೆ ಯಾವುದೇ ರೀತಿಯ ಲೋಪವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಚೀತಾ ಹಾಗೂ ಚೀತಾದ ಮೂರು ಮರಿಗಳ ಸಾವಿನಲ್ಲಿ ಸರ್ಕಾರದ್ದಾಗಲಿ, ಅಧಿಕಾರಿಗಳದ್ದಾಗಲಿ ಯಾವುದೇ ಲೋಪವಿಲ್ಲ. ಜಾಗತಿಕ ವನ್ಯಜೀವಿ ಟ್ರ್ಯಾಕ್‌ ರೆಕಾರ್ಡ್‌ಗಳನ್ನು ಕೂಡ ನೀವು ಪರಿಶೀಲನೆ ಮಾಡಬಹುದು.  100 ಚೀತಾಗಳ ಪೈಕಿ 90 ಚೀತಾಗಳು ಶಿಶುವಾಗಿದ್ದಾಗಲೇ ಸಾವು ಕಾಣುತ್ತದೆ. ಚೀತಾಗಳಲ್ಲಿ ಶಿಶಿ ಮರಣದ ಪ್ರಮಾಣ ಸಾಕಷ್ಟು ಜಾಸ್ತಿ ಇದೆ. ಅದಕ್ಕಾಗಿ ಅದರ ಸಂತತಿ ಕೂಡ ಕಡಿಮೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

6 ಸಾವಿನ ಬೆನ್ನಲ್ಲೇ ಕುನೋ ಅರಣ್ಯಕ್ಕೆ ನಮೀಬಿಯಾದಿಂದ ಬರುತ್ತಿದೆ ಮತ್ತೆ 7 ಚೀತಾ!

ಕಳೆದ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞ ವಿನ್ಸೆಂಟ್‌ ವಾನ್‌ ಡೆರ್‌ ಮೆರ್ವೆ ಭಾರತದಲ್ಲಿ ಇನ್ನೂ ಹೆಚ್ಚಿನ ಚೀತಾಗಳು ಸಾವು ಕಾಣಬಹುದು ಎಂದು ಅಂದಾಜು ಮಾಡಿದ್ದರು. ಚೀತಾಗಳಲ್ಲಿ ಮರಣ ಪ್ರಮಾಣ ಅಧಿಕವಾಗಿದೆ. ಅದರಲ್ಲೂ ಮರುಸಂತತಿ ಮಾಡುವ ಪ್ರಾಜೆಕ್ಟ್‌ಗಳ ವೇಳೆ ಹೆಚ್ಚಿನ ಚೀತಾಗಳು ಸಾವು ಕಾಣುತ್ತವೆ ಎಂದಿದ್ದರು. ಯಾಕೆಂದರೆ, ಚೀತಾಗಳು ಅರಣ್ಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವ ನಿಟ್ಟಿನಲ್ಲಿ ತನ್ನಂತೆ ಇರುವ ಪ್ರಾಣಿಗಳಾದ ಚಿರತೆ ಹಾಗೂ ಹುಲಿಗಳಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಿಸುತ್ತದೆ. ಇದು ಚೀತಾಗಳ ಸಾವಿಗೆ ಕಾರಣವಾಗುತ್ತದೆ. ಚೀತಾಗಳು ವೇಗದಲ್ಲಿ ನಂ.1 ಆಗಿದ್ದರೂ, ಬಲಿಷ್ಠತೆಯಲ್ಲಿ ಚಿರತೆ ಹಾಗೂ ಹುಲಿಗಳೇ ಮೇಲಿನ ಸ್ಥಾನದಲ್ಲಿವೆ ಎಂದಿದ್ದರು.

click me!