6 ಸಾವಿನ ಬೆನ್ನಲ್ಲೇ ಕುನೋ ಅರಣ್ಯಕ್ಕೆ ನಮೀಬಿಯಾದಿಂದ ಬರುತ್ತಿದೆ ಮತ್ತೆ 7 ಚೀತಾ!
ನಮೀಬಿಯಾದಿಂದ ಭಾರತಕ್ಕೆ ತಂದ ಚೀತಾಗಳ ಪೈಕಿ 3 ಮರಿ ಸೇರಿದಂತೆ 6 ಚೀತಾ ಮೃತಪಟ್ಟಿದೆ. ಇದರ ಬೆನ್ನಲ್ಲೇ ಜೂನ್ ತಿಂಗಳಲ್ಲಿ ನಮೀಬಿಯಾದಿಂದ ಮತ್ತೆ 7 ಚೀತಾ ಆಮದು ಮಾಡಿಕೊಳ್ಳಲಾಗುತ್ತಿದೆ. ಜೂನ್ 3ನೇ ವಾರದಲ್ಲಿ ಕುನೋ ಅರಣ್ಯಕ್ಕೆ ಬಿಡಲು ತಯಾರಿ ಮಾಡಲಾಗಿದೆ.
ಭೋಪಾಲ್(ಮೇ.31): ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿರುವ ನಮೀಬಿಯಾ ಚೀತಾಗಳ ಮೃೃತಪಟ್ಟ ಘಟನೆ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆ ತಂದಿತ್ತು. ಕುನೋದಲ್ಲಿ ಮರಿ ಹಾಕಿದ ನಾಲ್ಕು ಚೀತಾಗಳ ಪೈಕಿ ಮೂರು ಮೃತಪಟ್ಟಿದೆ. ಇನ್ನು ಆಮದು ಮಾಡಿಕೊಂಡ ಚೀತಾಗಳ ಪೈಕಿ ಮೂರು ಚೀತಾ ಮೃತಪಟ್ಟಿದೆ. ಒಟ್ಟು 6 ಚೀತಾ ಮೃತಪಟ್ಟಿದೆ. ಇದರ ನಡುವೆ ಜೂನ್ ತಿಂಗಳ 3ನೇ ವಾರ ನಮೀಬಿಯಾದಿಂದ ಮತ್ತೆ 7 ಚೀತಾಗಳು ಭಾರತಕ್ಕೆ ಆಗಮಿಸುತ್ತಿದೆ. ಕೇಂದ್ರ ಸರ್ಕಾರದ ಒಪ್ಪಂದ ಪ್ರಕಾರ ಈ ಬಾರಿ 7 ಚೀತಾಗಳನ್ನು ಭಾರತಕ್ಕೆ ತಂದು ಕುನೋ ಅರಣ್ಯಕ್ಕೆ ಬಿಡಲಾಗುತ್ತಿದೆ.
ಮೊದಲ ಹಂತದಲ್ಲಿ ನಮೀಬಿಯಾ ದೇಶದಿಂದ 8 ಚೀತಾ ತರಿಸಿಕೊಳ್ಳಲಾಗಿತ್ತು. ಇದರಲ್ಲಿ 5 ಹೆಣ್ಣು, 3 ಗಂಡು. ಇವುಗಳಲ್ಲಿ ಜೋಡಿಯಲ್ಲೇ ಬೇಟೆಯಾಡುವ 2 ಗಂಡು ಸಹೋದರ ಚೀತಾಗಳು ಹಾಗೂ ಇತ್ತೀಚಿನ ಕಾಡ್ಗಿಚ್ಚಿನಲ್ಲಿ ಸಂರಕ್ಷಿಸಲ್ಪಟ್ಟ ಹೆಣ್ಣು ಚೀತಾ ಮರಿ ಒಳಗೊಂಡಿತ್ತು. ಮಾ.24 ರಂದು ಜ್ವಾಲಾ ಎಂಬ ಚೀತಾ ಕುನೋದಲ್ಲಿ 4 ಮರಿಗಳಿಗೆ ಜನ್ಮ ನೀಡಿತ್ತು. ಈ ಮರಿಗಳ ಪೈಕಿ ಒಂದರ ಬಳಿ ಮತ್ತೊಂದರಂತೆ ಒಟ್ಟು 3 ಮರಿ ಸಾವನ್ನಪ್ಪಿವೆ. ಇನ್ನೊಂದರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಕುನೋ ಪಾರ್ಕ್‌ನಲ್ಲಿ ಮತ್ತೆರಡು ಚೀತಾ ಮರಿ ಸಾವು, ಎರಡು ತಿಂಗಳಲ್ಲಿ 6 ಚೀತಾ ಸಾವು!
ಇದರಿಂದ ಕಳೆದ 2 ತಿಂಗಳಲ್ಲಿ ಆಫ್ರಿಕಾ, ನಮೀಬಿಯಾದಿಂದ ತರಲಾಗಿದ್ದ 3 ಚೀತಾ ಸೇರಿ ಕುನೋದಲ್ಲಿ ಸಾವನ್ನಪ್ಪಿದ ಒಟ್ಟು ಚೀತಾಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಹೀಗಾಗಿ ಚೀತಾಗಳು ಭಾರತಕ್ಕೆ ಹೊಂದಿಕೊಳ್ಳಲು ಸಾಧ್ಯವಿಲ್ಲವೆ ಎಂಬ ಆತಂಕ ಎದುರಾಗಿದೆ. ಈಗ ಉಳಿದ ಮತ್ತೊಂದು ಮರಿ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಮೊದಲು ಸಾವನ್ನಪ್ಪಿದ ಮರಿಯು ಹುಟ್ಟಿನಿಂದಲೇ ದೈಹಿಕವಾಗಿ ದುರ್ಬಲವಾಗಿತ್ತು ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾ ಸಂತತಿಯನ್ನು ಮರುಸ್ಥಾಪಿಸಲು ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು.
ಚೀತಾಗಳು ಸಾವನ್ನಪ್ಪಿದ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾ ಅರಣ್ಯ ಇಲಾಖೆಯು ‘ಇಂತಹ ಅಪಯಕಾರಿ ಸ್ಥಳಾಂತರ ಯೋಜನೆಗಳಲ್ಲಿ ಮರಣ ದರವು ನಿರೀಕ್ಷಿತವಾಗಿದೆ. ಇದು ಅಪಾಯದ ಮುನ್ಸೂಚನೆಯಾಗಿಲ್ಲ ಹಾಗೂ ಇದರಿಂದ ಇತರ ಚೀತಾಗಳಿಗೆ ಯಾವುದೇ ತೊಂದರೆ ಇಲ್ಲ. ಸಾಮಾನ್ಯವಾಗಿ, ಸಂಕೀರ್ಣವಾದ ಮತ್ತೊಂದು ಪ್ರದೇಶಕ್ಕೆ ದೈತ್ಯ ಪ್ರಾಣಿಗಳು ಹೊಂದಿಕೊಳ್ಳುವುದು ಕಷ್ಟಸಾಧ್ಯ’ ಎಂದಿತ್ತು.
ಚಿರತೆ ಆವಾಸಸ್ಥಾನದ ವಿಚಾರದಲ್ಲಿ ರಾಜಕೀಯ ತರಬೇಡಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್
ದಶಕಗಳ ಹಿಂದೆ ಭಾರತದಲ್ಲಿ ಸಾವಿರಾರು ಚೀತಾಗಳು ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸಿಕೊಂಡಿದ್ದವು. ಆದರೆ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯಿತು ಅತಿಯಾದ ಬೇಟೆ, ಅವುಗಳ ನೈಸರ್ಗಿಕ ಆವಾಸಸ್ಥಾನದ ನಾಶದಿಂದ ದೇಶದಲ್ಲಿ ಚೀತಾ ಸಂತತಿ ಅಳಿಯಿತು. ಮಧ್ಯಪ್ರದೇಶದ ಮಹಾರಾಜ ರಾಮಾನುಜ ಪ್ರತಾಪ್ ಸಿಂಗ್ ದೇವ್ ಅವರು 1947ರಲ್ಲಿ ಕೊನೆಯ ಚೀತಾವನ್ನು ಕೊಂದಿದ್ದರು. 1952ರಲ್ಲಿ ಭಾರತದಿಂದ ಚೀತಾ ನಾಮಾವಶೇಷವಾಗಿದೆ ಎಂದು ಘೋಷಿಸಲಾಗಿತ್ತು.