
ನವದೆಹಲಿ (ಆ.15): ಜನಪ್ರಿಯ 'ಲೊಟ್ಟೆ ಚೊಕೊ ಪೈ' (Lotte Choco Pie) ಚಾಕೋಲೆಟ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ರಾಸಾಯನಿಕ ಸಂರಕ್ಷಕಗಳು (Preservatives) ಕಂಡುಬಂದ ಹಿನ್ನೆಲೆಯಲ್ಲಿ, ಇದನ್ನು ಸೇವಿಸದಂತೆ ಆಹಾರ ಸುರಕ್ಷತಾ ಇಲಾಖೆಯು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಪ್ರಮುಖವಾಗಿ 2026ರ ಏಪ್ರಿಲ್ 10 ರಂದು ತಯಾರಾದ 'NM10DC2' ಬ್ಯಾಚ್‌ನ ಉತ್ಪನ್ನಗಳನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸೂಚಿಸಲಾಗಿದೆ.
ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದ್ದ ಚೊಕೊ ಪೈ ಮಾದರಿಯನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ, ಮಾನವ ಬಳಕೆಗೆ ಅನುಮತಿಸಲಾದ ಪ್ರಮಾಣಕ್ಕಿಂತಲೂ ಅಪಾಯಕಾರಿ ಮಟ್ಟದಲ್ಲಿ ಪ್ರಿಸರ್ವೇಟಿವ್ಸ್ ಸೇರಿಸಿರುವುದು ಪತ್ತೆಯಾಗಿದೆ. ದುರ್ಗ್‌ನಲ್ಲಿ ಸಂಗ್ರಹಿಸಿದ ಈ ಮಾದರಿಯನ್ನು ಭೋಪಾಲ್‌ನಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
"ಪರೀಕ್ಷಾ ವರದಿಯಲ್ಲಿ ಅನುಮತಿಸಿದ್ದಕ್ಕಿಂತ ಅತ್ಯಂತ ಹೆಚ್ಚಿನ ಪ್ರಮಾಣದ ಪ್ರಿಸರ್ವೇಟಿವ್ಸ್ ಇರುವುದು ದೃಢಪಟ್ಟಿದೆ. ಇದು ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ. ಹೀಗಾಗಿ ದೇಶಾದ್ಯಂತ ವಿತರಿಸಲಾಗಿರುವ ಈ ನಿರ್ದಿಷ್ಟ ಬ್ಯಾಚ್‌ನ ಎಲ್ಲ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ತಕ್ಷಣವೇ ವಾಪಸ್ ಪಡೆಯುವಂತೆ ಕಂಪನಿಗೆ ಸೂಚಿಸಲಾಗಿದೆ" ಎಂದು ದುರ್ಗ್ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಜುಲೈ 21 ರಂದು ಪರೀಕ್ಷೆಗೆ ಕಳುಹಿಸಲಾಗಿದ್ದ ಮಾದರಿಯ ಫಲಿತಾಂಶವು ಹೊರಬಿದ್ದಿದ್ದು, ಪರೀಕ್ಷಾ ವರದಿಯಲ್ಲಿ ಆಹಾರ ಸುರಕ್ಷತಾ ಕಾಯ್ದೆಯಡಿ ಇದು ಮಾನವ ಆರೋಗ್ಯಕ್ಕೆ ಅಪಾಯಕಾರಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಲ್ಯಾಬ್ ಪರೀಕ್ಷೆಯ ವರದಿ ಬಂದ ತಕ್ಷಣವೇ ಕಾರ್ಯಪ್ರವೃತ್ತವಾಗಿರುವ ದುರ್ಗ್ ಜಿಲ್ಲಾಡಳಿತವು, ಜಿಲ್ಲೆಯಾದ್ಯಂತ ಈ ಬ್ಯಾಚ್‌ನ ಲೊಟ್ಟೆ ಚೊಕೊ ಪೈ ಮಾರಾಟ, ಸಂಗ್ರಹಣೆ ಹಾಗೂ ವಿತರಣೆಯನ್ನು ತುರ್ತಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಬ್ಯಾಚ್‌ನ ಉತ್ಪನ್ನಗಳನ್ನು ಮಾರಾಟ ಮಾಡದಂತೆ ವಿತರಕರು, ಸಾಗಣೆದಾರರು ಹಾಗೂ ಸಣ್ಣ-ದೊಡ್ಡ ಚಿಲ್ಲರೆ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ 2011 ರ ನಿಯಮಾವಳಿಗಳ ಪ್ರಕಾರ ಈ 'NM10DC2' ಬ್ಯಾಚ್ ಅನ್ನು ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹಿಂಪಡೆಯುವಂತೆ ಚೆನ್ನೈನಲ್ಲಿರುವ ಕಂಪನಿಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಈ ಬ್ಯಾಚ್‌ನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಇನ್ಮುಂದೆಯೂ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ