
ನವದೆಹಲಿ (ನ.20): ನನ್ನ ವಿರುದ್ಧ ಪದೇ ಪದೇ ಪಾಕಿಸ್ತಾನದ ಜೊತೆಗೆ ಕೈಜೋಡಿಸಿದ ವ್ಯಕ್ತಿ ಎಂದು ಆರೋಪ ಮಾಡುತ್ತಾರೆ. ಆದರೆ, ನಾನು ಎಂದೂ ಪಾಕಿಸ್ತಾನದ ಜೊತೆ ಕೈ ಜೋಡಿಸಿರಲಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸುಪ್ರೀಮೋ ಫಾರುಕ್ ಅಬ್ದುಲ್ಲಾ ಹೇಳಿದ್ದಾರೆ. ಚುನಾವಣೆಯ ಸಮಯದಲ್ಲಿ ಇವರೆಲ್ಲರೂ ಹಿಂದೂ ಖತ್ರೆ ಮೇ ಹೇ (ಹಿಂದುಗಳು ಅಪಾಯದಲ್ಲಿದ್ದಾರೆ) ಎನ್ನುವ ಮಾತನ್ನು ತುಂಬಾ ಆಡುತ್ತಾರೆ. ಆದರೆ, ನಿಮ್ಮಲ್ಲಿ ನನ್ನ ಮನವಿ ಏನೆಂದರೆ, ಅವರ ಈ ತಂತ್ರಕ್ಕೆ ಬಲಿಯಾಗಬೇಡಿ ಎನ್ನುವುದು ಎಂದು ಫಾರುಕ್ ಅಬ್ದುಲ್ಲಾ ಹೇಳಿದ್ದಾರೆ. ಇದನ್ನು ಬಿಜೆಪಿ ವಿರುದ್ಧ ಅವರು ಮಾಡಿರುವ ವಾಗ್ದಾಳಿ ಎಂದೇ ಕರೆಯಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಫಾರುಖ್ ಅಬ್ದುಲ್ಲಾ, 'ಯಾವ ಧರ್ಮಗಳೂ ಕೂಡ ಕೆಟ್ಟದಲ್ಲ. ಮನುಷ್ಯ ಎನ್ನುವವನೇ ಭ್ರಷ್ಟ. ಧರ್ಮ ಎಂದಗೂ ಭ್ರಷ್ಟವಲ್ಲ' ಎಂದು ಹೇಳಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಒಂದು ದಿನದ ಬಳಿಕ ಫಾರುಕ್ ಅಬ್ದುಲ್ಲಾ ಈ ಹೇಳಿಕೆ ನೀಡಿದ್ದಾರೆ. ಪ್ರತಿ ಬಾರಿಯೂ ನನ್ನ ವಿರುದ್ಧದ ಆರೋಪ ಏನೆಂದರೆ, ಪಾಕಿಸ್ತಾನದ ಜೊತೆ ಕೈಜೋಡಿಸಿದ ವ್ಯಕ್ತಿ ಎನ್ನುತ್ತಾರೆ. ಆದರೆ, ತಾವೆಂದೂ ಪಾಕಿಸ್ತಾನದ ಜೊತೆ ಕೈಜೋಡಿಸಿಲ್ಲ ಎಂದು ಎನ್‌ಸಿ ಸುಪ್ರೀಮೋ ಹೇಳಿದ್ದಾರೆ.
ನಾನಾಗಲಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷವಾಗಲಿ ಎಂದೂ ಪಾಕಿಸ್ತಾನದ ಜೊತೆ ಕೈಜೋಡಿಸಿಲ್ಲ. ಹೌದು ಜಿನ್ನಾ ನಮ್ಮ ತಂದೆಯನ್ನು ಭೇಟಿಯಾಗಲು ಬರುತ್ತಿದ್ದರು. ಆದರೆ, ಅವರೂ ಕೂಡ ಪಾಕಿಸ್ತಾನದ ಜೊತೆ ಹೋಗುವುದನ್ನು ನಿರಾಕರಿಸಿದ್ದರು ಎಂದರು. ಮಾತು ಮುಂದುವರಿಸುತ್ತಾ, 'ಭಗವಾನ್ ರಾಮ ಎಲ್ಲರಿಗೂ ಸೇರಿದವನು. ಕೇವಲ ಹಿಂದು ಧರ್ಮದವರಿಗಲ್ಲ' ಎಂದು ಹೇಳಿಕೆ ನೀಡಿದ್ದಾರೆ.
“ನಾವು ಪಾಕಿಸ್ತಾನದೊಂದಿಗೆ ಎಂದಿಗೂ ಕೈಕುಲುಕಲಿಲ್ಲ ಅಥವಾ ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಎತ್ತಲಿಲ್ಲ. ನಾವು ಮಹಾತ್ಮಾ ಗಾಂಧಿಯವರ ಭಾರತದೊಂದಿಗೆ ಹೊಂದಿಕೊಂಡಿದ್ದೇವೆ ಮತ್ತು ಭಾರತವು ನಮ್ಮ ತವರು ಎಂದು ಹೆಮ್ಮೆಪಡುತ್ತೇವೆ. ನಮ್ಮ ದೇಶದೊಳಗಿನ ಶತ್ರುಗಳು ಸುಳ್ಳನ್ನು ಹರಡುವ ಮೂಲಕ ನಮ್ಮನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಜಮ್ಮ-ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ನಿಟ್ಟಿನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪಾತ್ರ ಬಹಳ ಪ್ರಮುಖವಾದದ್ದು' ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಫಾರುಖ್ ಅಬ್ದುಲ್ಲಾ, ಕೇಂದ್ರಾಡಳಿತ ಪ್ರದೇಶದ ಕುರಿತಾಗಿ ಕೇಂದ್ರ ಸರ್ಕಾರ ತನ್ನ ಮಾತನ್ನು ಎಂದೂ ಉಳಿಸಿಕೊಂಡಿಲ್ಲ ಎಂದಿದ್ದಾರೆ. 'ಇಲ್ಲಿ 50 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಲಾಗಿತ್ತು. ಅವುಗಳು ಎಲ್ಲಿದೆ? ನಮ್ಮ ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ನಮ್ಮ ಮಕ್ಕಳು ಕೂಡ ಎಲ್ಲರೂ ನಿರುದ್ಯೋಗಿಗಳಾಗಿದ್ದಾರೆ. ಇದನ್ನು ರಾಜ್ಯಪಾಲದ ಮೂಲಕ ಮಾಡಲು ಸಾಧ್ಯವಿಲ್ಲ. ಅವರನ್ನು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಚುನಾವಣೆ ಅನ್ನೋದು ಪ್ರಮುಖ ಎಂದು ಹೇಳಿದ್ದಾರೆ.
ರೈತರ ಸಮಸ್ಯೆ ಇತ್ಯರ್ಥಕ್ಕೆ ಸ್ವರ್ಗದಿಂದ ರಾಮ ಬರ್ತಾನಾ?: ಫರೂಕ್
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮತ್ತೊಮ್ಮೆ ಒಂದೇ ರಾಜ್ಯವಾಗಲು ದಿನಗಳು ದೂರವಿಲ್ಲ ಎಂದು ಜಮ್ಮು ಕಾಶ್ಮೀರದ ರಾಜ್ಯಾಧಿಕಾರವನ್ನು ಮರುಸ್ಥಾಪಿಸುವ ಮಾತನಾಡುವ ವೇಳೆ ಅಬ್ದುಲ್ಲಾ ಹೇಳಿದರು. 2019 ರ ಆಗಸ್ಟ್‌ನಲ್ಲಿ, ಕೇಂದ್ರ ಸರ್ಕಾರವು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ರದ್ದುಗೊಳಿಸಿತು. ಅದರೊಂದಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಲಡಾಖ್ ಅನ್ನು ಬೇರ್ಪಡಿಸಿ ಎರಡೂ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.
ಸರ್ಕಾರ ಕಾಶ್ಮೀರಿ ಜನರ ಹೃದಯ ಗೆಲ್ಲುವವರೆಗೂ ಉಗ್ರವಾದ ನಿಲ್ಲೋದಿಲ್ಲ: ಫಾರುಖ್ ಅಬ್ದುಲ್ಲಾ
ಆರ್ಟಿಕಲ್ 370 ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರವು ಮೊದಲ ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ಫಾರುಖ್ ಅಬ್ದುಲ್ಲಾ ಅವರ ಹೇಳಿಕೆಗಳು ಬಂದಿವೆ. ಮುಂದಿನ ವರ್ಷದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಚುನಾವಣೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ