ಸೋತ ಅಮೇಥಿ ಕ್ಷೇತ್ರದಿಂದಲೇ ಮತ್ತೆ ರಾಹುಲ್ ಗಾಂಧಿ ಸ್ಪರ್ಧೆ?

Published : Apr 09, 2024, 09:55 PM IST
ಸೋತ ಅಮೇಥಿ ಕ್ಷೇತ್ರದಿಂದಲೇ ಮತ್ತೆ ರಾಹುಲ್ ಗಾಂಧಿ ಸ್ಪರ್ಧೆ?

ಸಾರಾಂಶ

ಕೇರಳದ ವಯನಾಡಿನಿಂದ ಲೋಕಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿರುವ ರಾಹುಲ್‌ ಗಾಂಧಿ ಈಗ ಉತ್ತರ ಪ್ರದೇಶದ ಅಮೇಥಿಯಿಂದಲೂ ಸ್ಪರ್ಧೆ ಮಾಡ್ತಾರೆ ಎನ್ನುವ ಚರ್ಚೆಗಳು ಹೆಚ್ಚಾಗಿದೆ.  

ಶಿವರಾಜ್‌, ಬುಲೆಟಿನ್‌ ಪ್ರೊಡ್ಯೂಸರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ಬೆಂಗಳೂರು (ಏ.9): 2019ರಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋತು ಕೇರಳದ ವಯನಾಡಿನಲ್ಲಿ ನೆಲೆ ಕಂಡುಕೊಂಡಿದ್ದ ರಾಹುಲ್ ಗಾಂಧಿ, ಇದೀಗ ಮತ್ತೆ ಅಮೇಥಿಯಿಂದಲೇ ಸ್ಪರ್ಧೆ ಮಾಡ್ತಾರೆ ಎಂಬ ಗುಸುಗುಸು ಪ್ರಾರಂಭವಾಗಿದೆ. ಇದಕ್ಕಾಗಿ ಕಾಂಗ್ರೆಸ್ ಭದ್ರಕೋಟೆ ಅಮೇಥಿ ಟಿಕೆಟ್ ಘೋಷಿಸದೇ ರಾಹುಲ್‌ಗಾಗಿ ಮೀಸಲು ಇಟ್ಟಿದ್ಯಂತೆ ಕಾಂಗ್ರೆಸ್ ಹೈಕಮಾಂಡ್..!
ಈಗಾಗಲೇ ಕೇರಳದ ವಯನಾಡಿನಿಂದ ನಾಮಪತ್ರ ಸಲ್ಲಿಸಿರುವ ರಾಹುಲ್ ಗಾಂಧಿ, ಮತ್ತೊಂದು ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನಲಾಗ್ತಿದೆ, ಅದು ಕೂಡ ಕಳೆದ ಬಾರಿ ಸೋತಿದ್ದ ಅಮೇಥಿ ಕ್ಷೇತ್ರದಿಂದಲೇ ಸ್ಪರ್ಧಿಸ್ತಾರೆ ಎನ್ನಲಾಗ್ತಿದೆ. 2019ರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸುಮಾರು 50 ಸಾವಿರ ಮತಗಳ ಅಂತರದಿಂದ ರಾಹುಲ್‌ ಇಲ್ಲಿ ಸೋಲು ಕಂಡಿದ್ದರು. ಇದೀಗ ಸೋತ ಕ್ಷೇತ್ರದಲ್ಲೇ ಗೆಲುವು ಸಾಧಿಸಬೇಕೆಂದು ರಾಹುಲ್ ಗಾಂಧಿ ಪಣತೊಟ್ಟಂತೆ ಕಾಣಿಸುತ್ತಿದೆ.. ಇದಕ್ಕಾಗಿಯೇ ಕಾಂಗ್ರೆಸ್ ಹೈಕಮಾಂಡ್ ಅಮೇಥಿ ಟಿಕೆಟ್ ಜೊತೆಗೆ ರಾಯ್ ಬರೇಲಿ ಟಿಕೆಟ್ ಸಹ ಯಾರಿಗೂ ನೀಡದೇ ಬಾಕಿ ಉಳಿಸಿಕೊಂಡಿದೆ. 

ಕೇರಳದ ವಯನಾಡಿಗೆ ಇದೇ ಏಪ್ರಿಲ್ 26ರಂದು ಮತದಾನ ನಡೆಯಲಿದೆ.. ಅತ್ತ ಅಮೇಥಿ ಹಾಗೂ ರಾಯ್ ಬರೇಲಿಗೆ ನಾಮಪತ್ರ ಸಲ್ಲಿಸಲು ಮೇ.03 ಕಡೆ ದಿನವಾಗಿದ್ದು, ಮೇ 20ಕ್ಕೆ ಮತದಾನ ನಡೆಯಲಿದೆ. ವಯನಾಡು ಚುನಾವಣೆ ಬಳಿಕ ರಾಹುಲ್ ಗಾಂಧಿ ತಮ್ಮ ಎರಡನೇ ಕ್ಷೇತ್ರದ ಸ್ಪರ್ಧೆ ಬಗ್ಗೆ ನಿರ್ಧರಿಸಬಹುದು ಎನ್ನಲಾಗಿದೆ.. 

ಅಮೇಥಿ, ರಾಯ್ ಬರೇಲಿ ಗಾಂಧಿ ಕುಟುಂಬದ ಭದ್ರಕೋಟೆ: ಉತ್ತರ ಪ್ರದೇಶದ ಅಮೇಥಿ, ರಾಯ್ ಬರೇಲಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದು, ಈ 2 ಕ್ಷೇತ್ರಗಳಿಂದ ಗಾಂಧಿ ಕುಟುಂಬದ ಒಟ್ಟು ಆರು ಮಂದಿ 21 ಬಾರಿ ಸ್ಪರ್ಧೆ ಮಾಡಿ, 02 ಬಾರಿ ಸೋಲು ಕಂಡಿದ್ದಾರೆ. ಕಳೆದ ಬಾರಿ ಅಮೇಥಿಯಿಂದ ರಾಹುಲ್ ಸೋಲು ಕಂಡಿದ್ರೆ, ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ ಗೆಲುವು ಸಾಧಿಸಿದ್ದರು. ಈ ಬಾರಿ ಅವರು ರಾಜ್ಯಸಭೆಗೆ ಆಯ್ಕೆ ಆಗಿರುವ ಕಾರಣ ರಾಯ್ ಬರೇಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಬಾರಿ ಏನಾದರೂ ಈ 2 ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡದೇ ಹೋದರೆ ಹೊಸ ಇತಿಹಾಸವೊಂದು ನಿರ್ಮಾಣವಾಗಲಿದ್ದು, ಸೋಲಿನ ಭೀತಿಯಿಂದ ಗಾಂಧಿ ಕುಟುಂಬ ಪಲಾಯನ ಮಾಡಿದೆ ಎನ್ನುವ ಅಪವಾದ ಸಹ ನಿರ್ಮಾಣವಾಗಬಹುದು, ಹೀಗಾಗಿ ಇದನ್ನ ತಪ್ಪಿಸಿಕೊಳ್ಳಲು ರಾಹುಲ್ ಗಾಂಧಿ ಸೋತರೂ ಸರಿಯೇ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ.

ರಾಹುಲ್ ಗಾಂಧಿ ಎರಡು ಕಡೆ ಸ್ಪರ್ಧೆ ಮಾಡಬಹುದು ಎಂದು ಮುನ್ಸೂಚನೆ ಸಿಗುತ್ತಿದ್ದಂತೆ ಸಿಡಿದೆದ್ದ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ‘ಅಮೇಥಿಯಿಂದ ಸ್ಪರ್ಧೆ ಮಾಡೋದಾದರೆ, ವಯನಾಡು ಜನರಿಗೆ ಇದೇ ನನ್ನ ಮನೆ ಎಂದು ಹೇಳಿದ್ದರು. ಅದು ಹೇಗೆ ಒಬ್ಬ ವ್ಯಕ್ತಿ ಪ್ರತಿದಿನ ತನ್ನ ಮನೆ ಬದಲಾಯಿಸ್ತಾನೆ. ವಯನಾಡು ಜನಕ್ಕೆ ನೀವು ಮೋಸ ಮಾಡ್ತಿದ್ದೀರಿ ಎಂದು ವಯನಾಡು ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಕಿಡಿ ಕಾರಿದ್ದಾರೆ.

ಮೂರು ಪಕ್ಷಗಳಿಗೂ ಒಳ ಏಟಿನ ಭೀತಿ- ಈ ಕ್ಷೇತ್ರಗಳ ಫಲಿತಾಂಶವೇ ಬದಲಾಗುತ್ತಾ?

ಇನ್ನೂ ಅಮೇಥಿ ಹಾಗೂ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ತಲಾ 5 ವಿಧಾನಸಭಾ ಕ್ಷೇತ್ರಗಳಿದ್ದು, ಒಂದರಲ್ಲೂ ಸಹ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ, ಅಮೇಥಿಯಲ್ಲಿ ಮೂವರು ಬಿಜೆಪಿ ಶಾಸಕರು ಹಾಗೂ ಇಬ್ಬರು ಸಮಾಜವಾದಿ ಶಾಸಕರಿದ್ದರೆ, ರಾಯ್ ಬರೇಲಿಯಲ್ಲಿ ಇಬ್ಬರು ಬಿಜೆಪಿ ಶಾಸಕರು ಹಾಗೂ ಮೂವರು ಸಮಾಜವಾದಿ ಶಾಸಕರಿದ್ದಾರೆ.  ಸದ್ಯ ಅಮೇಥಿಗೆ ಹೋಲಿಸಿದ್ರೆ ಕಾಂಗ್ರೆಸ್ ರಾಯ್ ಬರೇಲಿಯಲ್ಲೇ ಸ್ವಲ್ಪ ಹೆಚ್ಚು ಪ್ರಬಲವಾಗಿದ್ದು, ರಾಹುಲ್ ಗಾಂಧಿ ತಮ್ಮ ತಾಯಿಯ ಕ್ಷೇತ್ರ ರಾಯ್ ಬರೇಲಿಯಲ್ಲೇ ಸ್ಪರ್ಧೆಗೆ ಇಳಿಯಬಹುದು ಎಂದು ಸಹ ಹೇಳಲಾಗುತ್ತಿದೆ.

ಬಡವರು ಸೇನೆಗೆ ಸೇರುತ್ತಿದ್ದರು, ಬಿಜೆಪಿ ಟಾರ್ಗೆಟ್ ಮಾಡಿ ಯೋಧರ ಅವಮಾನಿಸಿದ್ರಾ ರಾಹುಲ್?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು