
ಹೈದರಾಬಾದ್: ಬಿಸಿಲಿನ ಬೇಗೆಯಿಂದ ಪಾರಾಗಲು ವ್ಯಕ್ತಿಯೊಬ್ಬರು ಬಿಯರ್ ಖರೀದಿಸಿದ್ದಾರೆ. ಆದರೆ ಸೀಲ್ ತೆಗೆಯದ ಬಾಟಲಿಯೊಳಗೆ ಜೀವಂತ ಮೀನು ಕಂಡು ಅವರಿಗೆ ಶಾಕ್ ಆಗಿದೆ. ಹೈದರಾಬಾದ್‌ನ ಮಲ್ಲಾಪುರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗುತ್ತಿದೆ.
ನಾಚಾರಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ವೈನ್ ಶಾಪ್ ಒಂದರಲ್ಲಿ ಈ ವ್ಯಕ್ತಿ ತಣ್ಣಗಿನ ಬಿಯರ್ ಖರೀದಿಸಿದ್ದರು. ಬೇಸಿಗೆಯ ಬಿಸಿಲಿಗೆ ಬಿಯರ್ ಕುಡಿದು ರಿಲ್ಯಾಕ್ಸ್ ಆಗೋಣ ಎಂದುಕೊಂಡಿದ್ದರು. ಆದರೆ, ಬಾಟಲಿ ಓಪನ್ ಮಾಡುವ ಮುನ್ನವೇ ಅದರೊಳಗೆ ಏನೋ ಅಲುಗಾಡುತ್ತಿರುವುದನ್ನು ಗಮನಿಸಿದ್ದಾರೆ. ಹತ್ತಿರದಿಂದ ನೋಡಿದಾಗ, ಸೀಲ್ ಆಗಿದ್ದ ಬಿಯರ್ ಬಾಟಲಿಯೊಳಗೆ ಪುಟ್ಟ ಮೀನೊಂದು ಈಜುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಆತ ಬಿಯರ್ ಬಾಟಲಿ ಸಮೇತ ಅಂಗಡಿಗೆ ವಾಪಸ್ ಹೋಗಿ, ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ, 'ನಾವು ಬಿಯರ್ ತಯಾರಿಸುವುದಿಲ್ಲ, ಕಂಪನಿಯಿಂದ ಬಂದಿದ್ದನ್ನು ಮಾರಾಟ ಮಾಡುತ್ತೇವೆ ಅಷ್ಟೇ' ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ. ಇದರಿಂದಾಗಿ ಗ್ರಾಹಕ ಮತ್ತು ಅಂಗಡಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಘಟನೆಯ ದೃಶ್ಯಗಳು ವೈರಲ್ ಆದ ನಂತರ, ಸೀಲ್ ಮಾಡಿದ ಬಾಟಲಿಯೊಳಗೆ ಮೀನು ಹೇಗೆ ಬಂತು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. ಫ್ಯಾಕ್ಟರಿಯಲ್ಲಿ ಬಾಟಲಿಗಳನ್ನು ಸ್ವಚ್ಛಗೊಳಿಸುವಾಗ ಅಥವಾ ಬಿಯರ್ ತುಂಬುವಾಗ ಈ ತಪ್ಪಾಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವರು, ಬಿಯರ್ ತಯಾರಿಕೆಗೆ ಬಳಸಿದ ನೀರು ಯಾವುದಾದರೂ ಕೆರೆಯಿಂದ ತಂದಿರಬಹುದು ಎಂದು ಊಹಿಸಿದ್ದಾರೆ. ಆದರೆ, ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. "ಕುಡಿಯುವ ಮುನ್ನ ಯಾವಾಗಲೂ ಬಾಟಲಿಯನ್ನು ಪರೀಕ್ಷಿಸುವುದು ಒಳ್ಳೆಯದು" ಎಂದು ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಘಟನೆಯು ಮದ್ಯ ತಯಾರಿಕಾ ಕಂಪನಿಗಳ ಗುಣಮಟ್ಟ ಪರಿಶೀಲನೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಇದನ್ನೂ ಓದಿ: Tamilnadu Election : ಸ್ತ್ರೀಯರಿಗೆ ₹2500, ಮದ್ವೆಗೆ ಚಿನ್ನ, ಫ್ರೀ ಎಲ್‌ಪಿಜಿ: ವಿಜಯ್ ಘೋಷಣೆ
ಇದನ್ನೂ ಓದಿ: ವರ್ಷದ 365 ದಿನದಲ್ಲಿ 8 ದಿನ ಬಿಟ್ಟು ಉಳಿದೆಲ್ಲಾ ದಿನ ಸಾಲ ಮಾಡಿದ ಆಂಧ್ರ ಪ್ರದೇಶ ಸರ್ಕಾರ: CAG ವರದಿಯಲ್ಲಿ ಬಹಿರಂಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ