Covid 19 Crisis: ಕೊರೋನಾ ನಿರ್ಬಂಧ ತೆರವು ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ!

By Kannadaprabha NewsFirst Published Feb 18, 2022, 7:57 AM IST
Highlights

ಕೋವಿಡ್‌ ಪ್ರಕರಣ ಇಳಿಕೆ ಆಗಿದ್ದರೂ ಅನೇಕ ರಾಜ್ಯಗಳಲ್ಲಿ ಹೊರರಾಜ್ಯದಿಂದ ಬಂದವರಿಗೆ ಕೋವಿಡ್‌ ಪರೀಕ್ಷೆ, ಮದುವೆ-ಸಮಾರಂಭಗಳ ಅತಿಥಿಗಳಿಗೆ ಮಿತಿ, ಪ್ರತಿಭಟನೆಗಳಿಗೆ ನಿರ್ಬಂಧ- ಇತ್ಯಾದಿ ಕಟ್ಟಳೆಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಸೂಚನೆಗೆ ಮಹತ್ವ ಬಂದಿದೆ.

ನವದೆಹಲಿ (ಫೆ. 18): ದೇಶದಲ್ಲಿ ಕೋವಿಡ್‌ (Covid 19) ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ, ಬಾಕಿ ಉಳಿದಿರುವ ಕೋವಿಡ್‌ ನಿರ್ಬಂಧಗಳನ್ನು ಹಿಂಪಡೆದುಕೊಳ್ಳಲು ನಿರ್ದೇಶನ ನೀಡಿದೆ. ದೇಶದಲ್ಲಿ ಫೆ. 15 ರಂದು ಕೇವಲ 27,409 ಹೊಸ ಕೇಸುಗಳು ಮಾತ್ರ ದಾಖಲಾಗಿವೆ. ಪಾಸಿಟಿವಿಟಿ ದರ ಶೇ. 3.63ಕ್ಕೆ ಇಳಿದಿದೆ. ಹೀಗಾಗಿ ರಾಜ್ಯಗಳಲ್ಲಿನ ಕೋವಿಡ್‌ ಪರಿಸ್ಥಿತಿಯನ್ನು ಮರುಪರಿಶೀಲಿಸಿ ಬಾಕಿ ಇರುವ ಹೆಚ್ಚುವರಿ ನಿರ್ಬಂಧಗಳನ್ನು ತೆಗೆದು ಹಾಕಬೇಕೆಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ ಭೂಷಣ್‌ ಸೂಚನೆ ನೀಡಿದ್ದಾರೆ.

ನಿರ್ಬಂಧ ಹಿಂಪಡೆದ ನಂತರವೂ ರಾಜ್ಯಗಳು ಪ್ರತಿದಿನದ ಕೋವಿಡ್‌ ಕೇಸುಗಳ ಮೇಲೆ ನಿಗಾ ವಹಿಸಬೇಕು. ಕೋವಿಡ್‌ ಪರೀಕ್ಷೆ, ಚಿಕಿತ್ಸೆ, ಲಸಿಕೆ, ಸಾಮಾಜಿಕ ಅಂತರ ಪಾಲನೆ, ಮಾಸ್ಕ್‌ ಧರಿಸುವಿಕೆಯಂತಹ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

Latest Videos

ಇದನ್ನೂ ಓದಿ: Coronavirus In Karnataka :  20 ಸಾವಿರಕ್ಕಿಂತ ಕೆಳಗಿಳಿದ ಸಕ್ರಿಯ ಕೇಸು,   ಮೂರನೇ ಅಲೆ ಮುಕ್ತಾಯ!

ಕೋವಿಡ್‌ ಪ್ರಕರಣ ಇಳಿಕೆ ಆಗಿದ್ದರೂ ಅನೇಕ ರಾಜ್ಯಗಳಲ್ಲಿ ಹೊರರಾಜ್ಯದಿಂದ ಬಂದವರಿಗೆ ಕೋವಿಡ್‌ ಪರೀಕ್ಷೆ, ಮದುವೆ-ಸಮಾರಂಭಗಳ ಅತಿಥಿಗಳಿಗೆ ಮಿತಿ, ಪ್ರತಿಭಟನೆಗಳಿಗೆ ನಿರ್ಬಂಧ- ಇತ್ಯಾದಿ ಕಟ್ಟಳೆಗಳಿವೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಸೂಚನೆಗೆ ಮಹತ್ವ ಬಂದಿದೆ.

30757 ಕೇಸು, 541ಸಾವು: ಸಕ್ರಿಯ ಕೇಸು 3.32 ಲಕ್ಷಕ್ಕೆ ಇಳಿಕೆ:  ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 30,757 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 541 ಸೋಂಕಿತರು ಸಾವೀಗೀಡಾಗಿದ್ದಾರೆ. ಸತತ 11 ದಿನಗಳಿಂದ ದೈನಂದಿನ ಪ್ರಕರಣ 1 ಲಕ್ಷಕ್ಕಿಂತ ಕಡಿಮೆ ದಾಖಲಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ 37,322 ಕೇಸುಗಳು ಇಳಿಕೆಯಾಗುವುದರೊಂದಿಗೆ ಸಕ್ರಿಯ ಪ್ರಕರಣಗಳು 3.32 ಲಕ್ಷಕ್ಕೆ ಇಳಿಕೆಯಾಗಿದೆ. ಗುಣಮುಖದರ ಶೇ.98.03ಕ್ಕೆ ಏರಿಕೆಯಾಗಿದ್ದು, ಇದು ಜ.5ರ ನಂತರದ ಗರಿಷ್ಠ. ದೈನಂದಿನ ಪಾಸಿಟಿವಿಟಿ ದರ ಶೇ.2.61ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.3.04ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳು 4.27 ಕೋಟಿಗೆ ಮತ್ತು ಒಟ್ಟು ಸಾವು 5.1 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 172.24 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ.

ಇದನ್ನೂ ಓದಿ: Covid Crisis: ಬೆಂಗ್ಳೂರಲ್ಲಿ ಕೋವಿಡ್‌ ಪರೀಕ್ಷೆ ಅರ್ಧದಷ್ಟು ಇಳಿಕೆ: 7 ಸಾವು

ಕೊರೋನಾದಿಂದ 32-37 ಲಕ್ಷ ಸಾವು ಎಂಬ ವರದಿ ಸುಳ್ಳು: ಕೇಂದ್ರ: ಕೊರೋನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ಕೇಂದ್ರ ಸರ್ಕಾರದ ಅಧಿಕೃತ ಅಂಕಿಅಂಶಗಳಿಗಿಂತ 6 ಪಟ್ಟು ಹೆಚ್ಚಿದೆ ಎಂಬ ವಿದೇಶಿ ಸಂಶೋಧನಾ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ಫ್ರೆಂಚ್‌ ಜನಸಂಖ್ಯಾಶಾಸ್ತ್ರಜ್ಞ ಕ್ರಿಸ್ಟೋಫ್‌ ಗಿಲ್ಮೊಟೊ ಅವರು ಪ್ರಕಟಿಸಿದ ಸಂಶೋಧನಾ ಪ್ರಬಂಧದಲ್ಲಿ ಭಾರತದಲ್ಲಿ ನವೆಂಬರ್‌ 2021ರ ವರೆಗೆ 32-37 ಲಕ್ಷ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ.

ಆದರೆ ಸರ್ಕಾರದ ಅಂದಾಜಿನ ಪ್ರಕಾರ ಆ ಅವಧಿಯಲ್ಲಿ ಸಾವಿನ ಪ್ರಮಾಣ 4.6 ಲಕ್ಷ ಇತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರ, ‘ಸಂಶೋಧನಾ ವರದಿಯ ಅಂಕಿಅಂಶಗಳು ನಿಖರವಾಗಿಲ್ಲ. ಕೋವಿಡ್‌-19 ಸಾವುಗಳನ್ನು ನಿಖರವಾಗಿ ವರದಿ ಮಾಡುವ ದೃಢವಾದ ವ್ಯವಸ್ಥೆಯನ್ನು ಭಾರತ ಹೊಂದಿದೆ’ ಎಂದು ಹೇಳಿದೆ.

click me!