
ಶ್ರೀನಗರ: ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಬಲಿ ಪಡೆದ ಮಾರಕ ಭಯೋತ್ಪಾದಕ ದಾಳಿಗೆ ಕಾರಣೀಕರ್ತರಾದ ಇಬ್ಬರು ಉಗ್ರರ ಕಾಶ್ಮೀರದಲ್ಲಿರುವ ಮನೆಯನ್ನು ಸೇನೆ ಧ್ವಂಸಗೊಳಿಸಿದೆ. ಲಷ್ಕರ್ ಟೆರರಿಸ್ಟ್ ಅಸಿಫ್ ಶೇಕ್‌ನ ಕಾಶ್ಮೀರದಲ್ಲಿರುವ ನಿವಾಸವನ್ನು ಹೊಡೆದುರುಳಿಸಲಾಗಿದೆ. ಹಾಗೆಯೇ ಜಮ್ಮು ಕಾಶ್ಮೀರದ ವಿವಿಧೆಡೆ ಭಾರತೀಯ ಸೇನೆ ಉಗ್ರರ ಬೇಟೆಗೆ ಇಳಿದಿದ್ದು, ಹಲವು ಕಡೆ ಗುಂಡಿನ ದಾಳಿಗಳು ನಡೆದಿವೆ. ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಭಾರತೀಯ ಠಾಣೆಗಳ ಮೇಲೆ ಗುಂಡು ಹಾರಿಸಿದ್ದು, ಇದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿದೆ ಎಂದು ವರದಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಗಡಿಯಾಚೆಗಿನ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನದ ಜೊತೆಗಿನ ಎಲ್ಲಾ ಸಂಬಂಧಗಳನನ್ನು ಕಡಿತಗೊಳಿಸುವುದು, ಆರು ದಶಕಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಮತ್ತು ಅಟ್ಟಾರಿ ಭೂ ಸಾರಿಗೆ ಪೋಸ್ಟ್ ಅನ್ನು ತಕ್ಷಣವೇ ಮುಚ್ಚುವುದು ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ಭಾರತ ಕೈಗೊಂಡಿದೆ.
ಪಾಕ್‌ನ ಕಂಠ ನಾಳವನ್ನೇ ಕತ್ತರಿಸಿ: ಪೆಂಟಗನ್ ಮಾಜಿ ಅಧಿಕಾರಿ ಸಲಹೆ
ನವದೆಹಲಿ: ಪಹಲ್ಲಾಮ್ ದಾಳಿಗೂ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೂ ಸಾಮ್ಯತೆಗಳಿವೆ. ಹಮಾಸ್ ದುಸ್ಸಾಹಸಕ್ಕೆ ಇಸ್ರೇಲ್ ಯಾವ ರೀತಿಯ ಪಾಠ ಕಲಿಸಿತೋ ಅದೇ ರೀತಿಯ ಪಾಠವನ್ನು ಭಾರತ ಐಎಸ್‌ಐಗೆ ಕಲಿಸಬೇಕು. ಕಾಶ್ಮೀರವನ್ನು ಪಾಕಿಸ್ತಾನದ ಕಂಠನಾಳ ಎಂದು ಪಾಕ್ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಹೇಳಿದ್ದಾರೆ. ಈಗ ಅದರ ಕಂಠನಾಳವನ್ನೇ ಕತ್ತರಿಸಬೇಕು! ಪಹಲ್ಟಾಮ್ ದಾಳಿ ಹಿನ್ನೆಲೆಯಲ್ಲಿ ಉಗ್ರ ದಾಳಿಯನ್ನು ಹೇಗೆ ನಿಯಂತ್ರಿಸಬೇಕೆಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಮಾಜಿ ಅಧಿಕಾರಿ ಮೈಕಲ್ ರುಬಿನ್ ಅವರು ಭಾರತಕ್ಕೆ ನೀಡಿದ ಸಲಹೆ ಇದು. ಪ್ರವಾಸಕ್ಕೆ ಹೋಗಿದ್ದ ಹಿಂದೂ ಮಧ್ಯಮ ವರ್ಗದವರನ್ನೇ ಗುರಿಯಾಗಿಸಿ ಪಾಕಿಸ್ತಾನ ದಾಳಿ ನಡೆಸಿದೆ. ಅ.7ರ ದಾಳಿ ಬಳಿಕ ಹಮಾಸ್ ನಾಯಕತ್ವವನ್ನೇ ಇಸ್ರೇಲ್ ಚೆಂಡಾಡಿತು. ಈಗ ಭಾರತ ಕೂಡ ಐಎಸ್‌ಐ ನಾಯಕತ್ವವನ್ನೇ ನಿರ್ವಂಶ ಮಾಡಬೇಕು. ಐಎಸ್‌ಐ ಅನ್ನು ಘೋಷಿತ ಉಗ್ರ ಸಂಘಟನೆಯ ರೀತಿಯಲ್ಲೇ ನೋಡಬೇಕು. ಭಾರತದ ಎಲ್ಲ ಮಿತ್ರ ರಾಷ್ಟ್ರಗಳೂ ಇದೇ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಟ್ಕಳದಲ್ಲಿ ಇದ್ದಾರೆ 14 ಪಾಕಿಸ್ತಾನಿಗಳು, ಆದರೆ ದೇಶ ತೊರೆಯಬೇಕಾಗಿಲ್ಲ
ಕಾಶ್ಮೀರದ ಪ್ರವಾಸಿ ತಾಣಗಳಲ್ಲಿ ಸ್ಮಶಾನ ಮೌನ
ನವದೆಹಲಿ: ಭಾರತದ ಮುಕುಟದಂತಿರುವ ಪ್ರಾಕೃತಿಕ ಸೌಂದರ್ಯದ ಗಣಿ ಕಾಶ್ಮೀರದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತಾಣಗಳು ಕಳೆದ 2 ದಿನಗಳಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ. ಏ.22ರಂದು ನಡೆದ ಭೀಕರ ಉಗ್ರದಾಳಿಯಿಂದಾಗಿ, ಕೇವಲ ಎರಡು ದಿನಗಳಲ್ಲಿ ಕಾಶ್ಮೀರದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅದರಲ್ಲೂ, ಮಿನಿ ಸ್ವಿಜರ್ಲೆಂಡ್ ಎಂದೇ ಖ್ಯಾತವಾಗಿದ್ದ ಪಹಲ್ಗಾಂ ಕಣಿವೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ದಾಲ್ ಸರೋವರದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಪ್ರವಾಸಿಗರನ್ನು ಹೊತ್ತೊಯ್ಯಬೇಕಿದ್ದ ವಿಮಾನಗಳು ಖಾಲಿಯಾಗಿ ಹಾರುತ್ತಿದ್ದು, ಜೀವಭಯದಿಂದ ಕಾಶ್ಮೀರ ತೊರೆಯುತ್ತಿರುವ ಕುಟುಂಬಗಳನ್ನು ಹೊತ್ತುಬರುತ್ತಿವೆ. ಅನುದಿನ ಆಜಾನ್ ಮೊಳಗುತ್ತಿದ್ದ ಮಸೀದಿಗಳ ಧ್ವನಿವರ್ಧಕಗಳು ಇದೀಗ ಬಂದ್‌ಗೆ ಕರೆ ಕೊಡುತ್ತಿವೆ. ಜನರು, ವರ್ತಕರು, ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ಖಾಲಿತನ ಆವರಿಸಿದೆ. ಜನರ ಓಡಾಟ ಕಂಡರೂ, ಅದು ಉಗ್ರದಾಳಿ ಖಂಡಿಸಿ, 'ಹಿಂದೂಸ್ತಾನ್ ಜಿಂದಾಬಾದ್' ಘೋಷಣೆಯೊಂದಿಗೆ, ಉಗ್ರರ ಸೆದೆಬಡಿವ ಆಗ್ರಹದೊಂದಿಗೆ ನಡೆಯುತ್ತಿರುವ ಪ್ರತಿಭಟನೆಯಾಗಿದೆ.
ಇದನ್ನೂ ಓದಿ: ಪಾಕ್ ಪ್ರಜೆಗಳ ಎಲ್ಲಾ ವೀಸಾಗಳೂ ಈಗ ರದ್ದು: ದೇಶ ಬಿಟ್ಟು ತೊಲಗಲು ನಾಳೆಯ ...
ಪ್ರವಾಸಿಗರನ್ನೇ ನಂಬಿಕೊಂಡಿದ್ದ ಕಾಶ್ಮೀರದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಪದ್ಮಶ್ರೀ ವಿಜೇತ ಕುಶಲಕರ್ಮಿ ಗುಲಾಂ ರಸೂಲ್ ಖಾನ್, ಇಲ್ಲಿನ ವಾತಾವರಣವನ್ನು ಕೆಡಿಸುತ್ತಿರುವವರನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಬೇಕು. ಇಲ್ಲಿನ ಜನ ಪ್ರವಾಸೋದ್ಯಮದ ಮೇಲೆಯೇ ಅವಲಂಬಿತರಾಗಿದ್ದಾರೆ' ಎಂದು ದುಃಖದಿಂದ ನುಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ