ಫೆಂಗಲ್ ಚಂಡಮಾರುತದಿಂದ ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆ ಮತ್ತು ಜನಜೀವನ ಅಸ್ತವ್ಯಸ್ತಗೊಂಡಿದೆ. 4 ಜನರು ಸಾವನ್ನಪ್ಪಿದ್ದು, ಪುದುಚೇರಿಯಲ್ಲಿ 3 ದಶಕಗಳಲ್ಲಿಯೇ ದಾಖಲೆಯ ಮಳೆಯಾಗಿದೆ. ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ.
ಪುದುಚೇರಿ/ಚೆನ್ನೈ: ಪುದುಚೇರಿ ಕರಾವಳಿಗೆ ಶನಿವಾರ ಅಪ್ಪಳಿಸಿದ್ದ ‘ಫೆಂಗಲ್’ ಚಂಡಮಾರುತ ಭಾನುವಾರ ದುರ್ಬಲಗೊಂಡಿದ್ದರೂ ಭಾರೀ ಮಳೆಯಿಂದಾಗಿ ಈ ಪುಟ್ಟ ಕೇಂದ್ರಾಡಳಿತ ಪ್ರದೇಶ ಹಾಗೂ ನೆರೆಯ ತಮಿಳುನಾಡಿನ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಹಾಗೂ 4 ಜನರ ಬಲಿ ಪಡೆದಿದೆ. 3 ದಶಕದಲ್ಲಿ ಇದೇ ಮೊದಲ ಬಾರಿಗೆ ಪುದುಚೇರಿಯಲ್ಲಿ ದಾಖಲೆಯ ಮಳೆಯಾಗಿದೆ.
ಅಪಾರ ಪ್ರಮಾಣದ ಬೆಳೆ ಹಾನಿ, ಆಸ್ತಿ ಹಾನಿಯ ವರದಿಯಾಗಿದ್ದು, ಸಮೀಕ್ಷೆ ನಂತರ ನಿಖರ ಅಂಕಿ-ಅಂಶ ಲಭಿಸಲಿವೆ. ಪ್ರವಾಹದಿಂದ ಸಂತ್ರಸ್ತರಾಗಿರುವವರ ಸ್ಥಳಾಂತರಕ್ಕೆ ಇದೀಗ ಸೇನೆ ಕೂಡ ಕೈಜೋಡಿಸಿದೆ.
ಪುದುಚೇರಿ ತತ್ತರ
ಭಾನುವಾರದ ಅಂಕಿ-ಅಂಶ ಪ್ರಕಾರ ಭಾನುವಾರ 24 ಗಂಟೆ ಅವಧಿಯಲ್ಲಿ ಪುದುಚೇರಿಯಲ್ಲಿ 46 ಸೆ.ಮೀ.ನಷ್ಟು ಮಳೆಯಾಗಿದೆ. ಅಕ್ಟೋಬರ್ 31, 2004ರಂದು ಪುದುಚೇರಿ ದಾಖಲೆಯ 21 ಸೆ.ಮೀ. ಮಳೆ ಕಂಡಿತ್ತು. ಆ ಬಳಿಕ ಈ ಪ್ರಮಾಣದಲ್ಲಿ ಮಳೆಯಾಗಿದ್ದು 3 ದಶಕದಲ್ಲಿ ಇದೇ ಮೊದಲು. ಪುದುಚೇರಿಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಹಲವು ಜನವಸತಿ, ವಾಣಿಜ್ಯ ಪ್ರದೇಶಗಳು ಜಲಾವೃತವಾಗಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸೇನೆ ಕೈಜೋಡಿಸಿದ್ದು, ಪ್ರವಾಹದಲ್ಲಿ ಕ್ಕಿಹಾಕಿಕೊಂಡಿದ್ದ 200ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.
ತಮಿಳ್ನಾಡಲ್ಲೂ ಅಸ್ತವ್ಯಸ್ತ
ಚಂಡಮಾರುತದ ಪರಿಣಾಮ ನೆರೆಯ ತಮಿಳುನಾಡು ಜಿಲ್ಲೆಯ ವಿಲ್ಲುಪುರಂ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಮೈಲಾಂ ಪ್ರದೇಶದಲ್ಲಿ 50 ಸೆ.ಮೀ. ಮಳೆ ದಾಖಲಾಗಿದೆ. ಚಂಡಮಾರುತದಿಂದಾಗಿ ಶನಿವಾರ ಸ್ಥಗಿತಗೊಂಡಿದ್ದ ಚೆನ್ನೈ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನರ್ ಆರಂಭಗೊಂಡಿದ್ದು, ಭಾನುವಾರ ಬೆಳಗ್ಗೆಯಿಂದ ಹಲವು ವಿಮಾನಗಳ ಹಾರಾಟ ವಿಳಂಬ ಮತ್ತು ರದ್ದಾಗಿದ್ದು, ಬೆಂಗಳೂರಿಗೆ ಅನೇಕ ವಿಮಾನ ತಿರುಗಿಸಲಾಗಿತ್ತು. ಮಧ್ಯಾಹ್ನದ ಬಳಿಕ ವಿಮಾನ ಸಂಚಾರ ಸಹಜ ಸ್ಥಿತಿಗೆ ಮರಳಿದೆ.
ಚಂಡಮಾರುತ ದುರ್ಬಲಗೊಂಡಿದ್ದರೂ ಮುಂದಿನ 24 ಗಂಟೆಗಳಲ್ಲಿ ಪುದುಚೇರಿ, ತಮಿಳುನಾಡು ಮಾತ್ರವಲ್ಲದೆ ಆಂಧ್ರದ ತಿರುಪತಿ, ನೆಲ್ಲೂರು ಮತ್ತು ಚಿತ್ತೂರಿನಲ್ಲೂ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇದನ್ನೂ ಓದಿ: 23 ಗಂಟೆ ಕುವೈತ್ನಲ್ಲಿ ಅನ್ನಾಹಾರವಿಲ್ಲದೇ ಪರದಾಟ; ಭಾರತೀಯರು ಊಟ, ತಿಂಡಿ ಸೌಲಭ್ಯಕ್ಕೆ ಅರ್ಹರಲ್ಲ ಎಂದ ಗೋ ಏರ್
ತಪ್ಪಿದ ಭಾರಿ ವಿಮಾನ ದುರಂತ
ಫೆಂಗಲ್ ಚಂಡಮಾರುತದಿಂದ ತತ್ತರಿಸಿರುವ ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ಕೂದಲೆಳೆಯ ಅಂತರದಲ್ಲಿ ಭಾರಿ ವಿಮಾನ ದುರಂತ ತಪ್ಪಿದೆ. ಮುಂಬೈನಿಂದ ಬರುತ್ತಿದ್ದ ಇಂಡಿಗೋ ವಿಮಾನ ಚಂಡಮಾರುತದ ಪ್ರಕೋಪದ ಮಧ್ಯೆಯೇ ರನ್‌ವೇನಲ್ಲಿ ಇಳಿಯಲು ಯತ್ನ ಮಾಡಿದೆ. ವಿಮಾನವು ಇನ್ನೇನು ಭೂಸ್ಪರ್ಶ ಮಾಡುವ ವೇಳೆ ಗಾಳಿಗೆ ಸಿಲುಕಿ ಒಂದು ಬದಿ ವಾಲಿದೆ. ಕೂಡಲೇ ಆಪತ್ತು ಅರಿತ ಪೈಲಟ್ ವಿಮಾನ ಭೂಸ್ಪರ್ಶ ರದ್ದುಪಡಿಸಿ ಟೇಕ್‌ಆಫ್ ಮಾಡಿದ್ದಾರೆ.
ಪೈಲಟ್‌ನ ಈ ಸಾಹಸಮಯ ಮತ್ತು ಸಮಯಪ್ರಜ್ಞೆಯನ್ನು ಇಂಡಿಗೋ ಕೊಂಡಾಡಿದೆ. ನಮ್ಮ ಪೈಲಟ್‌ಗಳು ಎಲ್ಲಾ ರೀತಿಯ ಪ್ರಕ್ಷುಬ್ಧ ವಾತಾವರಣಗಳಲ್ಲಿಯೂ ಸುರಕ್ಷತೆಯನ್ನು ಕಾಪಾಡುತ್ತಾರೆ ಎಂದು ಹೇಳಿದೆ.
ಇದನ್ನೂ ಓದಿ: ಸಂಭಲ್ ಮಸೀದಿ ನಿಯಂತ್ರಣಕ್ಕೆ ಮನವಿ ಸಲ್ಲಿಸಿದ ASI; ಭಾರತದ ಮುಸ್ಲಿಮರ ಸ್ಥಿತಿ ಬಾಂಗ್ಲಾ ಹಿಂದೂಗಳ ರೀತಿ ಎಂದ ಮುಫ್ತಿ