
ಸಂಭಲ್ (ಉ.ಪ್ರ.): ಮೊಘಲರ ಕಾಲದ ಸಂಭಲ್‌ನ ಶಾಹಿ ಮಸೀದಿಯ ನಿಯಂತ್ರಣ ಮತ್ತು ನಿರ್ವಹಣೆ ಹೊಣೆಯನ್ನು ತನಗೆ ನೀಡಬೇಕು ಎಂದು ಮಸೀದಿಯ ಸಮೀಕ್ಷೆಗೆ ಆದೇಶಿಸಿದ್ದ ನ್ಯಾಯಾಲಯಕ್ಕೆ ಭಾರತೀಯ ಪುರಾತತ್ವ (ಎಎಸ್‌ಐ) ಇಲಾಖೆ ಕೋರಿದೆ. ಮಸೀದಿಯ ಸಮೀಕ್ಷೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸುತ್ತಿರುವ ಕೋರ್ಟ್‌ಗೆ ತನ್ನ ಪ್ರತಿಕ್ರಿಯೆ ಸಲ್ಲಿಸಿರುವ ಎಸ್‌ಎಐ, ಇದು ಸಂರಕ್ಷಿತ ಪಾರಂಪರಿಕ ಸ್ಮಾರಕವಾಗಿದೆ. ಹೀಗಾಗಿ ಇದರ ನಿಯಂತ್ರಣ ಹಾಗೂ ನಿರ್ಣಯದ ಹೊಣೆಯನ್ನು ತನಗೆ ವಹಿಸಬೇಕು ಎಂದು ಮನವಿ ಮಾಡಿದೆ.
ಈ ನಡುವೆ, ಸಮೀಕ್ಷೆಗೆ ಮಸೀದಿಯ ಆಡಳಿತ ಸಮಿತಿ ಮತ್ತು ಸ್ಥಳೀಯರಿಂದ ಪ್ರತಿರೋಧ ಬರುತ್ತಿದೆ ಎಂದು ಎಎಸ್‌ಐ ಪರ ವಕೀಲ ವಿಷ್ಣುಶರ್ಮಾ ಕೋರ್ಟಿಗೆ ತಿಳಿಸಿದ್ದಾರೆ.
‘1920ರಲ್ಲಿ ಎಎಸ್‌ಐ ರಕ್ಷಿತ ಸ್ಮಾರಕವೆಂದು ಮಸೀದಿಯನ್ನು ಘೋಷಿಸಲಾಗಿತ್ತು.ಇದು ತನ್ನ ವ್ಯಾಪ್ತಿಯಲ್ಲಿದೆ. ಎಎಸ್‌ಐ ನಿಯಮಗಳಿಗೆ ಒಳಪಟ್ಟು ಮಸೀದಿಗೆ ಸಾರ್ವಜನಿಕ ಪ್ರವೇಶಕ್ಕೆ ಅನುಮತಿಸಬೇಕು. ಮಸೀದಿ ತನ್ನ ನಿಯಂತ್ರಣದಲ್ಲಿರಬೇಕು. ರಚನಾತ್ಮಕ ಮಾರ್ಪಾಡು ಅಧಿಕಾರವೂ ತನ್ನ ಬಳಿ ಇರಬೇಕು. ಆದರೆ ಮಸೀದಿ ಸಮಿತಿ ತನ್ನ ಅನುಮತಿ ಇಲ್ಲದೇ ಕಟ್ಟಡದಲ್ಲಿ ಬದಲಾವಣೆ ಮಾಡಿದೆ. ಇದನ್ನು ನಿರ್ಬಂಧಿಸಬೇಕು ಎಂದು ಪುರಾತತ್ವ ಇಲಾಖೆ ವಾದಿಸಿದೆ.
ನ್ಯಾಯಾಂಗ ಸಮಿತಿ ಭೇಟಿ
ಸಂಭಲ್‌ನ ಶಾಹಿ ಜಾಮಾ ಮಸೀದಿ ಈ ಹಿಂದೆ ಶಿವ ದೇಗುಲವಾಗಿತ್ತೇ ಎಂಬುದರ ಬಗ್ಗೆ ಸಮೀಕ್ಷೆ ನಡೆಸುವ ವೇಳೆ ಉಂಟಾದ ಹಿಂಸಾಚಾರದ ಬಗ್ಗೆ ಪರಿಶೀಲನೆ ನಡೆಸಲು ಭಾನುವಾರ ನ್ಯಾಯಾಂಗ ಸಮಿತಿ ಭೇಟಿ ನೀಡಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮೂರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.
ಭಾರತದ ಮುಸ್ಲಿಮರ ಸ್ಥಿತಿ ಬಾಂಗ್ಲಾ ಹಿಂದೂಗಳ ರೀತಿ: ಮೆಹಬೂಬಾ
‘ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ರೀತಿ ಭಾರತದ ಮುಸ್ಲಿಮರ ಪರಿಸ್ಥಿತಿ ಇದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈ ವಿಚಾರದಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ’ ಎಂದು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭಾರತದ ಬಸ್ ಮೇಲೆ ಉದ್ದೇಶಪೂರ್ವಕ ದಾಳಿ: ಭಾರತೀಯರಿಗೆ ಜೀವ ಬೆದರಿಕೆ
ಇತ್ತೀಚಿನ ಸಂಭಲ್ ಮಸೀದಿ ಹಾಗೂ ಅಜ್ಮೇರ್ ದರ್ಗಾ ವಿವಾದಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡದರೆ ಹಾಗೂ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆದರೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯತ್ಯಾಸವೇನು? ಭಾರತ ಮತ್ತು ಬಾಂಗ್ಲಾದೇಶದ ನಡುವೆ ನನಗೆ ಯಾವುದೇ ವ್ಯತ್ಯಾಸವಿಲ್ಲ’ ಎಂದರು.
‘ಎಲ್ಲಾ ಧರ್ಮದ ಜನರು ಪ್ರಾರ್ಥನೆ ಸಲ್ಲಿಸುವ ಅ ಜ್ಮೇರ್ ಶರೀಫ್ ದರ್ಗಾ ಸಹೋದರತ್ವದ ದೊಡ್ಡ ಉದಾಹರಣೆ. ಈಗ ಅವರು (ಹಿಂದೂ ಸಂಘಟನೆಗಳು) ದೇವಾಲಯವನ್ನು ಹುಡುಕಲು ಹಾಗೂ ಅದನ್ನು ಅಗೆಯಲು ಪ್ರಯತ್ನಿಸುತ್ತಿದ್ದಾರೆ. ಸಂಭಲ್ ಘಟನೆಯು ತುಂಬಾ ದುರದೃಷ್ಟಕರ. ಅಲ್ಲಿ ಅವರ (ಮುಸ್ಲಿಮರ) ಮೇಲೆ ಗುಂಡು ಹಾರಿಸಲಾಗಿದೆ’ ಎಂದರು.
ಇದನ್ನೂ ಓದಿ: ಪ್ರತಿ ದಂಪತಿ ಕನಿಷ್ಠ 3 ಮಕ್ಕಳ ಹೆರಬೇಕು : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ