
ನಾಗಾಂವ್: ಅಸ್ಸಾಂನ ಲೇಡಿ ಸಿಂಗಂ, ದಬಾಂಗ್ ಕಾಪ್ ಎಂದೆಲ್ಲಾ ಖ್ಯಾತಿ ಗಳಿಸಿರುವುದರ, ಜೊತೆಗೆ ವಿವಾದಗಳ ಕಾರಣಕ್ಕೂ ಸುದ್ದಿಯಾಗಿದ್ದ ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅಪಘಾತಕ್ಕೆ ಬಲಿಯಾಗಿದ್ದಾರೆ. ಇಂದು ಮುಂಜಾನೆ ನಾಗಾವ್ ಜಿಲ್ಲೆಯಲ್ಲಿಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಿವುಡ್ ಸಿನಿಮಾಗಳ ನಂತರ ಜುನ್ಮೋನಿ ರಾಭಾ ಅವರು ಲೇಡಿ ಸಿಂಗಂ ದಬಾಂಗ್ ಕಾಪ್ ಎಂದೆಲ್ಲಾ ಜನಪ್ರಿಯತೆ ಗಳಿಸಿದ್ದರು. ಇನ್ನು ಅಪಘಾತ ಸಂಭವಿಸಿದ ವೇಳೆ ಜುನ್ಮೋನಿ ರಾಭಾ ತನ್ನ ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿದ್ದರು ಮತ್ತು ಪೊಲೀಸ್ ಸಮವಸ್ತ್ರದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ನಾಗಾವ್ ಜಿಲ್ಲೆಯ ಕಲಿಯಾಬೋರ್ (Kaliabor) ಉಪ ವಿಭಾಗದ ಜಖಲಬಂಧ (Jakhalabandha) ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಮಧ್ಯರಾತ್ರಿ 2:30 ರ ಸುಮಾರಿಗೆ ಈ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ಗಸ್ತು ತಂಡವು ಸ್ಥಳಕ್ಕೆ ತಲುಪಿ ಜುನ್ಮೋನಿ ರಾಭಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿನ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಜಖಲಬಂಧ ಪೊಲೀಸ್ ಠಾಣಾಧಿಕಾರಿ ಪವನ್ ಕಲಿತಾ (Pawan Kalita) ತಿಳಿಸಿದ್ದಾರೆ.
ಭಾವಿ ಪತಿಯನ್ನೇ ಬಂಧಿಸಿದ್ದ 'ಲೇಡಿ ಸಿಂಗಂ' ಕೂಡ ಈಗ ಆರೆಸ್ಟ್
ಕಾರಿಗೆ ಡಿಕ್ಕಿ ಹೊಡೆದ ಈ ಕಂಟೈನರ್ ಟ್ರಕ್ ಉತ್ತರ ಪ್ರದೇಶದಿಂದ ಬರುತ್ತಿತ್ತು. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು. ನಾಗಾಂವ್ ಪೊಲೀಸ್ ಅಧೀಕ್ಷಕಿ ಲೀನಾ ಡೋಲಿ ಅವರು ಬೆಳಗ್ಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಆದರೆ ಎಸ್‌ಐ ಜುನ್ಮೋನಿ ರಾಭಾ ತನ್ನ ಖಾಸಗಿ ಕಾರಿನಲ್ಲಿ ಅಪ್ಪರ್ ಅಸ್ಸಾಂ (Upper Assam) ಕಡೆಗೆ ಯಾವುದೇ ಭದ್ರತೆಯಿಲ್ಲದೆ ಸಮವಸ್ತ್ರವಿಲ್ಲದೇ ನಾಗರಿಕ ಧಿರಿಸಿನಲ್ಲಿ ಏಕಾಂಗಿಯಾಗಿ ಏಕೆ ಹೋಗುತ್ತಿದ್ದರು ಎಂಬುದು ಪೊಲೀಸರಿಗೂ ತಿಳಿದಿಲ್ಲ. ಆಕೆಯ ಕುಟುಂಬದ ಸದಸ್ಯರಿಗೂ ಆಕೆಯ ಚಲನವಲನದ ಬಗ್ಗೆ ಅರಿವಿಲ್ಲ. ಮೊರಿಕೊಲಾಂಗ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವಾರಿಯಾಗಿದ್ದ ಜುನ್ಮೋನಿ ರಾಭಾ ಅವರು ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹಾಗೂ ಕೆಲವು ಹಣಕಾಸಿನ ಅಕ್ರಮಗಳ ಕಾರಣಕ್ಕೆ ಸುದ್ದಿಯಲ್ಲಿದ್ದರು.
ಸೈಕಲ್ ಏರಿ ಬಂದ ಲೇಡಿ ಸಿಂಗಂ: ವ್ಯಾಪಾರಿಗಳಿಗೆ ಖಡಕ್ ವಾರ್ನಿಂಗ್
ಆದರೆ ಕಳೆದ ವರ್ಷ ಜೂನ್‌ನಲ್ಲಿ ಜುನ್ಮೋನಿ ಅವರನ್ನು ತನ್ನ ಮಾಜಿ ಗೆಳೆಯನ ಜೊತೆ ಸೇರಿ ಅಕ್ರಮವೆಸಗಿದ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿತ್ತು. ನಂತರ ಮಜುಲಿ ಜಿಲ್ಲಾ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದಾ ಬಳಿಕ ಆಕೆಯನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು. ನಂತರ ಅಮಾನತು ಹಿಂತೆಗೆದುಕೊಳ್ಳಲಾಯಿತು. ಹೀಗಾಗಿ ಆಕೆ ಮತ್ತೆ ಸೇವೆಗೆ ಸೇರಿದರು. ಇದಕ್ಕೂ ಮೊದಲು 2022 ರ ಜನವರಿಯಲ್ಲಿ ಬಿಹ್ಪುರಿಯಾ ಕ್ಷೇತ್ರದ ಬಿಜೆಪಿ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರೊಂದಿಗಿನ ದೂರವಾಣಿ ಸಂಭಾಷಣೆ ಸೋರಿಕೆಯಾದಾಗ ಅವರು ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ