
ಮಹಾರಾಷ್ಟ್ರದ ಕಡಿದಾದ ಬಂಡೆಯೊಂದರಿಂದ ಹಾರಿ ಜೀವತ್ಯಾಗ ಮಾಡಿದ ಯುವಕ ಕುನಾಲ್ ಚಂದಗುಡೆ ಪ್ರಕರಣವು ಇಡೀ ದೇಶದಲ್ಲೇ ತೀವ್ರ ಆಘಾತ ಮತ್ತು ಅನುಮಾನಗಳನ್ನು ಹುಟ್ಟುಹಾಕಿತ್ತು. ಘಟನೆ ನಡೆದ ಐದು ದಿನಗಳವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್‌ಗಾಗಿ ಜೀವ ತೆತ್ತ, ಆಸ್ತಿ ಮತ್ತು ಹಣದ ಆಸೆಗೆ ಬಲಿಯಾದ ಎಂದೆಲ್ಲಾ ಏನೇನೋ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿದ್ದವು. ಆದರೆ, ರಕ್ಷಾಬಂಧನದ ಹಬ್ಬದ ಹೊಸ್ತಿಲಲ್ಲೇ ತಮ್ಮ ಪ್ರೀತಿಯ ಸಹೋದರನನ್ನು ಕಳೆದುಕೊಂಡ ಕುನಾಲ್ ಅವರ ಸಹೋದರಿ ಈಗ ಕಣ್ಣೀರಿಡುತ್ತಾ ಸಮಾಜದ ಮುಂದೆ ಬಂದು, ಹಬ್ಬಿರುವ ಸುಳ್ಳು ಕಥೆಗಳ ಹಿಂದಿನ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕುನಾಲ್ ಕೇವಲ ಐಫೋನ್ ಅಥವಾ ಹಣಕ್ಕಾಗಿ ಬೆಟ್ಟದಿಂದ ಜಿಗಿದಿದ್ದಾನೆ ಎಂಬ ಮಾತುಗಳು ಕೇಳಿಬಂದಾಗ ಆತನ ಕುಟುಂಬ ತೀವ್ರ ನೊಂದಿತ್ತು. ಈ ಕುರಿತು ಆಕ್ರೋಶ ಹಾಗೂ ದುಃಖ ವ್ಯಕ್ತಪಡಿಸಿದ ಸಹೋದರಿ, ನನ್ನ ಸಹೋದರನ ಬಳಿ ಈಗಾಗಲೇ ಐಫೋನ್ 15 ಪ್ರೊ (iPhone 15 Pro) ಇತ್ತು. ನಮ್ಮ ತಂದೆ-ತಾಯಿ ಬಾಲ್ಯದಿಂದಲೂ ನಮಗೆ ಯಾವುದೇ ಕೊರತೆಯಾಗದಂತೆ, ಕೇಳಿದ್ದನ್ನೆಲ್ಲಾ ಕೊಟ್ಟು ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿದ್ದಾರೆ. ಹೀಗಿರುವಾಗ ಆತ ಕೇವಲ ಒಂದು ಫೋನ್ ಅಥವಾ ಹಣಕ್ಕಾಗಿ ಈ ಹೆಜ್ಜೆ ಇಟ್ಟ ಎನ್ನುವುದು ಸಂಪೂರ್ಣ ಸುಳ್ಳು ಮತ್ತು ಕಲ್ಪಿತ ಕಥೆ" ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ತಿ ವಿಭಜನೆ ಅಥವಾ ಭೂಮಿ ಸಹೋದರಿಯ ಹೆಸರಿನಲ್ಲಿದೆ ಎಂಬ ಕಾರಣಕ್ಕೆ ಕುನಾಲ್ ಅಸಮಾಧಾನಗೊಂಡಿದ್ದ ಎಂಬ ಆರೋಪಗಳನ್ನೂ ಆಕೆ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಕುನಾಲ್ ಆಸ್ತಿ-ಪಾಸ್ತಿಯ ಬೆನ್ನತ್ತಿದ ಯುವಕನಾಗಿರಲಿಲ್ಲ, ಆತನಿಗೆ ಆಸ್ತಿಗಿಂತ ತಂದೆಯ ಪ್ರೀತಿಯೇ ಹೆಚ್ಚಾಗಿತ್ತು ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.
ಈ ದುರಂತದ ಹಿಂದಿನ ನೈಜ ಕೌಟುಂಬಿಕ ನೋವನ್ನು ಹಂಚಿಕೊಂಡ ಸಹೋದರಿ, ಕುನಾಲ್ ಅವರ ನಿಜವಾದ ಚಿಂತೆ ಮತ್ತು ಭಯವೇನಿದ್ದರೂ ಅವರ ತಂದೆ ಮುರಳೀಧರ್ ಅವರನ್ನು ಕಳೆದುಕೊಳ್ಳುವುದಾಗಿತ್ತು ಎಂದು ತಿಳಿಸಿದ್ದಾರೆ. ತಂದೆ ಮುರಳೀಧರ್ ಅವರು ಕಳೆದ 20 ವರ್ಷಗಳಿಂದ ತಮ್ಮ ಹೆತ್ತವರು ಮತ್ತು ಹತ್ತಿರದ ಸಂಬಂಧಿಗಳಿಂದ ದೂರವಿದ್ದರು. ಆದರೆ, ಈ ಘಟನೆ ನಡೆಯುವ ಕೆಲವೇ ತಿಂಗಳುಗಳ ಮೊದಲು ಸಂಬಂಧಿಕರೊಬ್ಬರು ಹಠಾತ್ತನೆ ತಂದೆಯವರ ಜೊತೆ ತೀರಾ ಹತ್ತಿರವಾಗತೊಡಗಿದರು.
ತಂದೆ ಮುರಳೀಧರ್ ಅವರು ಅತ್ಯಂತ ಸರಳ ಮನಸ್ಸಿನವರಾಗಿದ್ದು, ಸಿಹಿಯಾಗಿ ಮಾತನಾಡುವ ಜನರನ್ನು ತಕ್ಷಣವೇ ನಂಬುವ ಸ್ವಭಾವದವರಾಗಿದ್ದರು. 'ಯಾರೋ ಬಂದವರು ನಮ್ಮ ತಂದೆಯ ನಿರಪರಾಧಿತ್ವವನ್ನು ದುರುಪಯೋಗಪಡಿಸಿಕೊಂಡು, ಅವರನ್ನು ನಮ್ಮಿಂದ ಹಾಗೂ ನಮ್ಮ ತಾಯಿಯಿಂದ ಸಂಪೂರ್ಣವಾಗಿ ದೂರ ಮಾಡಬಹುದು' ಎಂಬ ತೀವ್ರ ಭಯ ಕುನಾಲ್ ಮತ್ತು ಆತನ ತಾಯಿ ಸಂಗೀತಾ ಅವರನ್ನು ಕಾಡ ತೊಡಗಿತ್ತು. ತಂದೆಯ ಬಾಂಧವ್ಯ ಹರಿದುಹೋಗುತ್ತದೆ ಎಂಬ ತೀವ್ರ ಮಾನಸಿಕ ಒತ್ತಡವೇ ಕುನಾಲ್‌ನನ್ನು ಈ ದುರಂತದ ಅಂಚಿಗೆ ತಳ್ಳಿತ್ತು.
ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಿಗೆ ವಿನಂತಿಸಿಕೊಂಡಿರುವ ಸಹೋದರಿ, "ನಾವು ಈಗಾಗಲೇ ನಿಕಟ ಬಂಧುವನ್ನು ಹಾಗೂ ಪ್ರೀತಿಯ ಸಹೋದರನನ್ನು ಕಳೆದುಕೊಂಡು ದುಃಖದ ಸಾಗರದಲ್ಲಿದ್ದೇವೆ. ದಯವಿಟ್ಟು ಯಾವುದೇ ಪರಿಶೀಲನೆ ಇಲ್ಲದೆ ಸುಳ್ಳು ಸುದ್ದಿಗಿಳನ್ನು ಹರಡಿ ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ" ಎಂದು ಕೇಳಿಕೊಂಡಿದ್ದಾರೆ.
ದೇಶದಾದ್ಯಂತ ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿಗೆ ಪ್ರೀತಿಯ ರಾಖಿ ಕಟ್ಟಲು ಸಂಭ್ರಮದಿಂದ ಕಾಯುತ್ತಿರುವ ಈ ವೇಳೆಯಲ್ಲಿ, ಕುನಾಲ್ ಅವರ ಸಹೋದರಿ ಮಾತ್ರ ತನ್ನ ಅಣ್ಣನ ನೆನಪಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. "ಈ ವರ್ಷ ನನ್ನ ರಾಖಿ ಕಟ್ಟಿಸಿಕೊಳ್ಳಲು ನನ್ನ ಸಹೋದರ ನನ್ನೊಂದಿಗಿಲ್ಲ, ಈ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ" ಎಂದು ಕಣ್ಣೀರಿಡುತ್ತಿರುವ ಆಕೆಯ ಮಾತುಗಳು ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ