ನಾನು ಲಾಯಕ್ಕಿಲ್ಲ ಮಮ್ಮಿ, ಸಾಯೋಕೂ ಭಯವಾಗ್ತಿದೆ.. IIT ದೆಹಲಿ ವಿದ್ಯಾರ್ಥಿ ಕೇಸ್‌ಗೆ ರೋಚಕ ಟ್ವಿಸ್ಟ್.. ಸಾವಿಗೂ ಮುನ್ನ ಹೇಳಿದ್ದೇನು?

Published : Aug 26, 2026, 07:25 PM IST
IIT Student

ಸಾರಾಂಶ

ಐಐಟಿ ದೆಹಲಿಯ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಆತ್ಮ*ತ್ಯೆಗೂ ಮುನ್ನ ತನ್ನ ವೈಫಲ್ಯದ ಬಗ್ಗೆ ತಾಯಿಯ ಮುಂದೆ ಅತ್ತು ನೋವು ತೋಡಿಕೊಂಡಿದ್ದ ಆಘಾತಕಾರಿ ವಿಷಯ ಹೊರಬಂದಿದೆ. ಕಾಲೇಜು ಆಡಳಿತ ಮಂಡಳಿಯು ಹಾಸ್ಟೆಲ್ ನೀಡದೆ ಮತ್ತು ವೈದ್ಯಕೀಯ ವರದಿಗಳನ್ನು ಒಪ್ಪದೆ ಆತನಿಗೆ ಮಾನಸಿಕ ಕಿರುಕುಳ ನೀಡಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ನವದೆಹಲಿ: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಐಐಟಿ ದೆಹಲಿಯ (IIT Delhi) ಎಂಎಸ್‌ಸಿ ಫಿಸಿಕ್ಸ್ ವಿದ್ಯಾರ್ಥಿ ರಿಷಿಕೇಶ್ ಕುಮಾರ್ (31) ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಕೇವಲ ಒಂದು ಆತ್ಮ*ತ್ಯೆಯಾಗಿ ಕಂಡ ಈ ಪ್ರಕರಣದ ಹಿಂದೆ ಆತ ಅನುಭವಿಸಿದ ಮಾನಸಿಕ ಯಾತನೆ, ಕಾಲೇಜು ಆಡಳಿತ ಮಂಡಳಿಯ ಅಸಹಕಾರ ಮತ್ತು ಆತ ಸಾವಿಗೂ ಮುನ್ನ ತಾಯಿಯ ಮುಂದೆ ಸುರಿಸಿದ ಕಣ್ಣೀರಿನ ಕಥೆ ಹೊರಬಂದಿದೆ. ಇದು ಕೇವಲ ಸಾವಲ್ಲ, ವ್ಯವಸ್ಥಿತ ಕಿರುಕುಳ ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ಸಾವಿಗೂ ಮುನ್ನ ತಾಯಿಯ ಮುಂದೆ ಬಿಚ್ಚಿಟ್ಟಿದ್ದ ನೋವು..

ಆಗಸ್ಟ್ 22ರಂದು ರಿಷಿಕೇಶ್ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಕೆಲವೇ ಗಂಟೆಗಳ ಮೊದಲು ತನ್ನ ತಾಯಿಯ ಮುಂದೆ ಮನಸು ಬಿಚ್ಚಿ ಅತ್ತಿದ್ದ. ಆ ರೋಚಕ ಮತ್ತು ಹೃದಯವಿದ್ರಾವಕ ಮಾತುಗಳನ್ನು ಆತನ ತಾಯಿ ಆಶಾ ಪೊದ್ದಾರ್ ನೆನಪಿಸಿಕೊಂಡಿದ್ದಾರೆ.

ಮಮ್ಮಿ, ನನಗೆ ತುಂಬಾ ನೋವಾಗುತ್ತಿದೆ. ನನಗೆ ಸಾಯುವುದಕ್ಕೂ ಭಯವಾಗುತ್ತಿದೆ, ಅಷ್ಟು ಧೈರ್ಯ ನನಗಿಲ್ಲ. ನಾನು ಯಾವುದಕ್ಕೂ ಲಾಯಕ್ಕಿಲ್ಲದವನು. ಎಷ್ಟೇ ಪ್ರತಿಭೆ ಇದ್ದರೂ ಈ ಜಗತ್ತಿನಲ್ಲಿ ನನಗೇನೂ ಸಾಧಿಸಲು ಸಾಧ್ಯವಾಗುತ್ತಿಲ್ಲ. ಬಹುಶಃ ಇದು ನನ್ನ ಹಿಂದಿನ ಜನ್ಮದ ಪಾಪವಿರಬಹುದು. ಯಾವುದೇ ಪರೀಕ್ಷೆ ಎದುರಿಸುವ ಶಕ್ತಿ ನನಗಿದೆ, ಆದರೆ ಓದಿನಲ್ಲಿ ಒಂದಲ್ಲ ಒಂದು ಅಡೆತಡೆಗಳು ಬರುತ್ತಲೇ ಇವೆ. ಈಗ ನಾನು ಏನು ಮಾಡಲಿ ಎಂದು ರಿಷಿಕೇಶ್ ಕಿರುಚಾಡಿ ಅತ್ತಿದ್ದ ಎನ್ನುತ್ತಾರೆ ತಾಯಿ ಆಶಾ.

ಪ್ರತಿಭಾನ್ವಿತನಾಗಿದ್ದರೂ ಹಿಂಬಾಲಿಸಿದ ದುರಾದೃಷ್ಟ

ರಿಷಿಕೇಶ್ ಬದುಕು ಹೋರಾಟದಿಂದಲೇ ಕೂಡಿತ್ತು. 2014ರಲ್ಲಿ ತಂದೆಯ ನಿಧನದಿಂದಾಗಿ ಎನ್ಐಟಿ ರೂರ್ಕೆಲಾದಿಂದ ಹೊರಬರಬೇಕಾಯಿತು. ಬಳಿಕ ಮಗಧ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿ, ತನ್ನ ಏಕೈಕ ಕನಸಾಗಿದ್ದ ಐಐಟಿ ದೆಹಲಿಗೆ ಪ್ರವೇಶ ಪಡೆದಿದ್ದ. ಮೊದಲ ಸೆಮಿಸ್ಟರ್‌ನಲ್ಲಿ 10ಕ್ಕೆ 8 ಸಿಜಿಪಿಎ (CGPA) ಪಡೆಯುವ ಮೂಲಕ ತನ್ನ ಬುದ್ಧಿವಂತಿಕೆಯನ್ನು ಸಾಬೀತುಪಡಿಸಿದ್ದ. ಎರಡನೇ ಸೆಮಿಸ್ಟರ್‌ನಿಂದ ಸಮಸ್ಯೆಗಳು ಶುರುವಾದವು.

ರಿಷಿಕೇಶ್ ಸಹೋದರ ಅಭಿಷೇಕ್ ಕುಮಾರ್, ಐಐಟಿ ದೆಹಲಿಯ ವಿರುದ್ಧ ಕೆಂಡ ಕಾರಿದ್ದಾರೆ. ಐಐಟಿಗೆ ಸೇರುವುದು ಆತನ ಹುಚ್ಚು ಕನಸಾಗಿತ್ತು. ಆದರೆ ಅಲ್ಲಿಗೆ ಹೋದ ಮೇಲೆ ಆತನ ಕನಸು ನುಚ್ಚುನೂರಾಯಿತು. ಕಾಲೇಜು ಆತನಿಗೆ ಪದೇ ಪದೇ ಅವಮಾನ ಮಾಡಿತು ಎಂದು ಅವರು ಆರೋಪಿಸಿದ್ದಾರೆ. ಮಾನಸಿಕ ಆರೋಗ್ಯ ಹದಗೆಟ್ಟಾಗ ಚಿಕಿತ್ಸೆ ಕೊಡಿಸಲಾಗಿತ್ತು. ಖಾಸಗಿ ಆಸ್ಪತ್ರೆಯ ವೈದ್ಯರು ಆತ ಗುಣಮುಖನಾಗಿದ್ದಾನೆ, ಹಾಸ್ಟೆಲ್‌ನಲ್ಲಿ ಉಳಿಯಬಹುದು ಎಂದು ಎನ್‌ಒಸಿ (NOC) ನೀಡಿದ್ದರೂ, ಕಾಲೇಜು ಅದನ್ನು ಒಪ್ಪಲಿಲ್ಲ. ತಮ್ಮದೇ ತಂಡದಿಂದ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿ ಆತನನ್ನು ಹೈರಾಣಾಗಿಸಿದ್ದರು.

ವೈದ್ಯಕೀಯ ಕಾರಣ ನೀಡಿ ಆತನಿಗೆ ಹಾಸ್ಟೆಲ್ ಕೊಠಡಿ ನೀಡಲು ಕಾಲೇಜು ನಿರಾಕರಿಸಿತು. ಇದರಿಂದ ರಿಷಿಕೇಶ್ ಕಾಲೇಜಿನ ಹೊರಗೆ ಒಂದು ಸಣ್ಣ 10x10 ಕೊಠಡಿಯಲ್ಲಿ ತಾಯಿಯೊಂದಿಗೆ ವಾಸವಿದ್ದ. ಆ ಸಣ್ಣ ರೂಮಿನಲ್ಲಿ ತಾಯಿ ಕಷ್ಟಪಡುತ್ತಿರುವುದನ್ನು ಕಂಡು ಆತ ತೀವ್ರ ಅಪರಾಧಿ ಭಾವನೆಗೆ ಒಳಗಾಗಿದ್ದ. ರಿಸರ್ಚ್ ಪ್ರಾಜೆಕ್ಟ್‌ನಲ್ಲಿ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ತಂಡಗಳನ್ನು ಮಾಡಲಾಗಿತ್ತು, ಆದರೆ ರಿಷಿಕೇಶ್‌ಗೆ ಮಾತ್ರ ಯಾರೂ ಸಹಕಾರ ನೀಡದೆ ಆತ ಒಬ್ಬನೇ ಕೆಲಸ ಮಾಡುವಂತೆ ಬಿಡಲಾಗಿತ್ತು.

ಈ ಹಿಂದೆಯೇ ಎರಡು ಬಾರಿ ಯತ್ನಿಸಿದ್ದ

ರಿಷಿಕೇಶ್ ತನಗಾಗುತ್ತಿರುವ ಅವಮಾನ ಸಹಿಸಲಾರದೆ ಈ ಹಿಂದೆಯೇ ಎರಡು ಬಾರಿ ಆತ್ಮ*ತ್ಯೆಗೆ ಯತ್ನಿಸಿದ್ದ ಎಂಬ ಭೀಕರ ಸತ್ಯವನ್ನೂ ಸಹೋದರ ಬಿಚ್ಚಿಟ್ಟಿದ್ದಾರೆ. ನಾನು ಕಾಲೇಜು ಕಟ್ಟಡದ ಒಂಬತ್ತನೇ ಮಹಡಿಯವರೆಗೆ ಹೋಗಿದ್ದೆ ಎಂದು ಆತ ತಾಯಿಯ ಬಳಿ ಹೇಳಿಕೊಂಡಿದ್ದ. ಹಾಸ್ಟೆಲ್ ಕೊಠಡಿ ಸಿಗದಿರುವುದೇ ಆತನನ್ನು ಹೆಚ್ಚು ಕುಗ್ಗಿಸಿತ್ತು. ಐಐಟಿ ದೆಹಲಿಯಲ್ಲಿ ಕಳೆದ 30 ತಿಂಗಳಲ್ಲಿ ಒಟ್ಟು 8 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಶಿಕ್ಷಣ ಸಂಸ್ಥೆಯ "ವ್ಯವಸ್ಥಿತ ಸಮಸ್ಯೆ" ಎಂದು ವಿದ್ಯಾರ್ಥಿಗಳು ಸೋಮವಾರದಿಂದ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಒತ್ತಡಕ್ಕೆ ಮಣಿದಿರುವ ಐಐಟಿ ದೆಹಲಿ, ರಿಷಿಕೇಶ್ ಸಾವು ಪ್ರಕರಣದ ತನಿಖೆಗೆ ಐದು ಸದಸ್ಯರ ಬಾಹ್ಯ ತನಿಖಾ ಸಮಿತಿಯನ್ನು ರಚಿಸಿದೆ.

ಸುಂದರವಾಗಿ ಹಾಡುತ್ತಿದ್ದ ಕವನಗಳನ್ನು ಬರೆಯುತ್ತಿದ್ದ ಪ್ರತಿಭಾನ್ವಿತ ಮಗನನ್ನು ಕಳೆದುಕೊಂಡ ತಾಯಿ ಆಶಾ ಪೊದ್ದಾರ್ ಈಗ ಶೋಕ ಸಾಗರದಲ್ಲಿದ್ದಾರೆ. ನನಗೆ ಯಾವುದೇ ಬೇಡಿಕೆಗಳಿಲ್ಲ, ನನ್ನ ಮಗನ ಸ್ನೇಹಿತರು ಏನು ನಿರ್ಧರಿಸುತ್ತಾರೋ ಅದೇ ಸರಿ. ಅಷ್ಟು ಅದ್ಭುತವಾಗಿದ್ದ ಮಗ ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ವ್ಯವಸ್ಥೆಯ ಅಸಹಕಾರ ಮತ್ತು ಮಾನಸಿಕ ಒತ್ತಡಕ್ಕೆ ಬಲಿಯಾಗಿರುವುದು ಶಿಕ್ಷಣ ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ 1 ಕೋಟಿ ರೂ ಚಿನ್ನಾಭರಣ ಲೂಟಿ.. ನೇಪಾಳ ಗಡಿಯಲ್ಲಿ ಆರೋಪಿಗಳು ಲಾಕ್ ಆಗಿದ್ದು ಹೇಗೆ?
ಲಡಾಖ್ ಆಗಸದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ ಕಾವ್ಯ, ಓಡೋಡಿ ಬಂದ ವಿಜ್ಞಾನಿಗಳ ತಂಡ