2011ರ 362 ಕೆಎಎಸ್ ಅಧಿಕಾರಿಗಳ ನೇಮಕಾತಿ ಸಿಂಧುತ್ವ ಕಾಯ್ದೆ ರದ್ದು: ಸುಪ್ರೀಂ ಮಹತ್ವದ ತೀರ್ಪು

Kannadaprabha News   | Kannada Prabha
Published : Oct 30, 2026, 06:41 AM IST
KPSC recruitment row SC verdict

ಸಾರಾಂಶ

2011ನೇ ಸಾಲಿನ 362 ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಸಿಂಧುಗೊಳಿಸಲು ಕರ್ನಾಟಕ ಸರ್ಕಾರ 2022ರಲ್ಲಿ ತಂದಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಪರೀಕ್ಷೆ ಮತ್ತು ಸಂದರ್ಶನದಲ್ಲಿ ನಡೆದ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ನವದೆಹಲಿ (ಅ.30): 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಊರ್ಜಿತಗೊಳಿಸಲು ಕರ್ನಾಟಕ ಸರ್ಕಾರ 2022ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯನ್ನೇ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಅಂದು ನೇಮಕಗೊಂಡು ಪ್ರಸ್ತುತ ವಿವಿಧ ಇಲಾಖೆಗಳ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 2011ನೇ ಬ್ಯಾಚ್‌ನ 362 ಕೆಎಎಸ್ ಅಧಿಕಾರಿಗಳ ನೌಕರಿಗೆ ಕುತ್ತು ಬಂದಿದೆ.

ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಹಾಗೂ ನ್ಯಾ.ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಗುರುವಾರ ಈ ಮಹತ್ವದ ತೀರ್ಪು ನೀಡಿದೆ.

362 KAS ಅಧಿಕಾರಿಗಳ ಭವಿಷ್ಯಕ್ಕೆ ಕುತ್ತು, ಪ್ರಕರಣವೇನು?:

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2011ರ ನವೆಂಬರ್‌ನಲ್ಲಿ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆಗಳನ್ನು ನಡೆಸಿ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ಬಳಿಕ, ನೇಮಕಾತಿಯ ಸಂದರ್ಶನ ಮತ್ತು ಅಂಕ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು.

ಈ ಕುರಿತು ಅಭ್ಯರ್ಥಿಯೊಬ್ಬರು ಅಂದಿನ ಅಡ್ವೋಕೇಟ್‌ ಜನರಲ್‌ಗೆ ದೂರು ನೀಡಿದ್ದರು. ಅವರ ಶಿಫಾರಸ್ಸಿನ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. 2014ರ ಜೂನ್ 27ರಂದು ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಸಿಐಡಿಯ ಮಧ್ಯಂತರ ವರದಿಯ ಆಧಾರದಲ್ಲಿ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕೆಎಟಿ (ಕರ್ನಾಟಕ ಆಡಳಿತ ನ್ಯಾಯಮಂಡಳಿ) ಮೊರೆ ಹೋಗಿದ್ದರು. ಅಭ್ಯರ್ಥಿಗಳ ಪರ ತೀರ್ಪು ನೀಡಿದ್ದ ಕೆಎಟಿ, ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.

ಆದರೆ, ಕೆಎಟಿ(KAT)ಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿತ್ತು. ಬಳಿಕ, ಹೈಕೋರ್ಟ್‌ ತೀರ್ಪನ್ನು ಸುಪ್ರೀಂಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ 362 ಅಭ್ಯರ್ಥಿಗಳ ಆಯ್ಕೆ ಮತ್ತು ನೇಮಕಾತಿಯನ್ನು ಊರ್ಜಿತಗೊಳಿಸಲು 2022ರಲ್ಲಿ ರಾಜ್ಯ ಸರ್ಕಾರ ‘ಕರ್ನಾಟಕ ಸಿವಿಲ್‌ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ’ ಯನ್ನು ಜಾರಿಗೆ ತಂದಿತ್ತು.

ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಶ್ರೀನಿವಾಸ ಟಿ.ಮತ್ತಿತರರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು. ಕಾಯ್ದೆ ಪ್ರಶ್ನಿಸಿದ್ದ ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿತ್ತು. ಅರ್ಜಿದಾರರು ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಈಗ ಸರ್ಕಾರದ ಕಾಯ್ದೆಯನ್ನು ಸಂಪೂರ್ಣವಾಗಿ ಅಸಿಂಧುಗೊಳಿಸಿ ರದ್ದುಪಡಿಸಿದೆ.

ದಶಕದ ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ಹಿನ್ನೆಡೆ

ಇದರಿಂದಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಶಕಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಈ ವಿವಾದದ ನಡುವೆಯೂ ನೇಮಕಗೊಂಡು ಪ್ರಸ್ತುತ ವಿವಿಧ ಇಲಾಖೆಗಳ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 362 ಕೆಎಎಸ್‌ ಅಧಿಕಾರಿಗಳ ಭವಿಷ್ಯ ಅತಂತ್ರವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜನರ ಭವಿಷ್ಯ ಹೇಳುತ್ತಿದ್ದ ಜ್ಯೋತಿಷಿಗೆ ಶಾಕ್: MLC ಚುನಾವಣೆಯಲ್ಲಿ ಖ್ಯಾತ ಜ್ಯೋತಿಷಿ ಪತ್ನಿಗೆ ಹೀನಾಯ ಸೋಲು!
ಕ್ಯಾಲ್ಕುಲೇಟರ್‌ಗೆ ಸವಾಲ್: 16ರ ಹರೆಯದಲ್ಲೇ 9 ಗಿನ್ನೆಸ್ ದಾಖಲೆ ಮುರಿದ ಭಾರತದ 'ಹ್ಯೂಮನ್ ಕಂಪ್ಯೂಟರ್'!