* 2020ರಲ್ಲಿ 21 ಜನರ ಬಲಿ ಪಡೆದ ದುರಂತದ ತನಿಖಾ ವರದಿ ಬಿಡುಗಡೆ
* ವರ್ಷದ ಬಳಿಕ ಬಯಲಾಯ್ತು ಕಲ್ಲಿಕೋಟೆ ವಿಮಾನ ದುರಂತದ ಹಿಂದಿನ ಕಾರಣ
* ತನಿಖಾ ವರದಿಯಲ್ಲಿ ಉಲ್ಲೇಖಿಸಲಾದ ಅಂಧಶಗಳಿವು
ತಿರುವನಂತಪುರ(ಸೆ.13): 2020ರ ಆಗಸ್ಟ್ ತಿಂಗಳಲ್ಲಿ 21 ಮಂದಿಯನ್ನು ಬಲಿಪಡೆದ ವಿಮಾನ ದುರಂತದ ಕಾರಣವಾದ ಅಂಶಗಳ ಕುರಿತಾದ 257 ಪುಟಗಳ ತನಿಖಾ ವರದಿಯನ್ನು ವಿಮಾನ ಅಪಘಾತದ ತನಿಖಾ ದಳ(ಎಎಐಬಿ) ಭಾನುವಾರ ಬಿಡುಗಡೆ ಮಾಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ವೈಪರ್‌ನ ದೋಷ ಸೇರಿದಂತೆ ಹಲವು ಕಾರಣಗಳಿಂದಾಗಿ ದುರಂತ ಸಂಭವಿಸಿತ್ತು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವುಗಳು ಹೀಗಿದೆ.
ಅಂದು ಏನಾಗಿತ್ತು?
2020ರ ಆ.7ರಂದು ದುಬೈನಿಂದ 186 ಪ್ರಯಾಣಿಕರ ಹೊತ್ತು ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬಿ 737-800 ವಿಮಾನವು ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ 21 ಮಂದಿ ಗಾಯಗೊಂಡಿದ್ದರು. ಇತರೆ 165 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು.
ವರದಿಯಲ್ಲೇನಿದೆ?
1. ಪೈಲಟ್ ಸೂಚಿತ ಕಾರ್ಯನಿರ್ವಹಣಾ ವಿಧಾನ ಪಾಲಿಸಿಲ್ಲ. ಪ್ರತಿಕೂಲ ವಾತಾವರಣದಲ್ಲಿ ವಿಮಾನ ಇಳಿಸುವ ಯತ್ನ ಮಾಡಿದ್ದಾರೆ. ವಿಮಾನ ಇಳಿಯಲು ನಿಗದಿಪಡಿಸಲಾದ ಜಾಗ ಬಿಟ್ಟು ಇನ್ನೂ ಮುಂದೆ ಹೋಗಿ ಲ್ಯಾಂಡಿಂಗ್ ಮಾಡಿದ್ದಾರೆ. ವಿಮಾನವನ್ನು ಇನ್ನಷ್ಟುಸಮಯದಲ್ಲಿ ಆಗಸದಲ್ಲಿ ಹಾರಿಸುವಂತೆ ಪಿಎಂ (ಪೈಲಟ್ ಮಾನಿಟರಿಂಗ್) ನೀಡಿದ ಸೂಚನೆಯನ್ನು ಪೈಲಟ್ ಪಾಲಿಸಿಲ್ಲ
2. ತಾಂತ್ರಿಕ ತೊಂದರೆಯ ಯಾವುದೇ ಅಂಶ ಬೆಳಕಿಗೆ ಬಂದಿಲ್ಲ. ಆದರೆ ಒಟ್ಟಾರೆ ವ್ಯವಸ್ಥೆಯಲ್ಲಿನ ಲೋಪದೋಷ ಕೂಡಾ ಅವಘಡಕ್ಕೆ ಪೂರಕವಾಗಿರಬಹುದು.
3. ವಿಮಾನ ಚಲಾಯಿಸುತ್ತಿದ್ದ ಪೈಲಟ್ ಕುಳಿತಿದ್ದ ಗಾಜಿನ ವೈಪರ್ ದೋಷಪೂರಿತವಾಗಿತ್ತು. ವಿಮಾನ ಇಳಿಯುವ ವೇಳೆ ಅದು ನಿಗದಿತ ಪ್ರಮಾಣದಲ್ಲಿ ಗಾಜಿನ ಮೇಲಿನ ನೀರನ್ನು ಒರೆಸುತ್ತಿರಲಿಲ್ಲ. ಈ ದೋಷದ ಬಗ್ಗೆ ಪೈಲಟ್‌ಗಳಿಗೆ ಮೊದಲೇ ಅರಿವಿದ್ದ ವಿಷಯ ಕಾಕ್‌ಪೀಟ್ ವಾಯ್‌್ಸ ರೆಕಾರ್ಡರ್‌ನಿಂದ ಬೆಳಕಿಗೆ ಬಂದಿದೆ.
4. ವಿಮಾನ ಚಲಾಯಿಸುತ್ತಿದ್ದ ಪೈಲಟ್ ಕ್ಯಾಪ್ಟನ್ ಡಿ.ವಿ.ಸಾಥೆ, ವಿಮಾನ ಇಳಿಸಲು ಲಭ್ಯವಿರುವ ದೂರ ಮೊದಲಾದ ವಿಷಯಗಳ ಕುರಿತು ಮೊದಲೇ ಚರ್ಚೆ ನಡೆಸಿರಲಿಲ್ಲ. ಭಾರೀ ಮಳೆ ಮತ್ತು ಪ್ರತಿಕೂಲ ವಾತಾವರಣದ ಹೊರತಾಗಿಯೂ ಅವರ ಈ ವರ್ತನೆ ನಿಯಮಗಳ ಉಲ್ಲಂಘನೆ.
5. ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಸಮೀಪದ ನಿಲ್ದಾಣಕ್ಕೆ ತೆರಳಬೇಕಾದ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ.
6. ಮೊದಲ ಸಲ ಇಳಿಸಲು ನಡೆದ ವಿಫಲದ ಯತ್ನದ ಬಳಿಕವೂ ವಿಮಾನ ಸಿಬ್ಬಂದಿಗೆ ನೀಡಬೇಕಾಗಿದ್ದ ಕಡ್ಡಾಯ ಸೂಚನೆಗಳನ್ನು ಪೈಲಟ್ ನೀಡಿರಲಿಲ್ಲ.