
ಡೆಲ್ಲಿ ಮಂಜು
ನವದೆಹಲಿ( ಸೆ 12 ) ಅಚ್ಚರಿಯ ಆಯ್ಕೆಯ ಮೂಲಕ ಗುಜರಾತ್ ರಾಜಕೀಯ ಪಾಳಯಕ್ಕೆ ಮೋದಿ-ಶಾ ಜೋಡಿ ಶಾಕ್ ಕೊಟ್ಟಿದೆ. ಪಕ್ಷದ ಶಿಸ್ತಿನ ಸಿಪಾಯಿ, ಸಂಘ ಮೆಚ್ಚುವ ವ್ಯಕ್ತಿ ಅನ್ನೋ ಮಾನದಂಡಗಳನ್ನು ಮುಂದುರಿಸಿಕೊಂಡ ಬಿಜೆಪಿ ಹೈಕಮಾಂಡ್, ಜಾತಿಯ ದಾಳವನ್ನು ಉರುಳಿಸುತ್ತಾ ಮೊದಲ ಬಾರಿಯ ಆಯ್ಕೆಯಾಗಿದ್ದ ಶಾಸಕ ಭೂಪೇಂದ್ರ ಪಟೇಲ್ ರನ್ನು ಆಯ್ಕೆಗೆ ಸಹಮತ ತೋರುತ್ತಾ, ಗುಜರಾತ್ 17 ನೇ ಮುಖ್ಯಮಂತ್ರಿ ಅನ್ನೋ ತೀರ್ಮಾನ ಹೊರಬೀಳುವಂತೆ ನೋಡಿಕೊಂಡಿದೆ.
ಸರ್ಕಾರ ನಡೆಸಿರುವ ಅನುಭವ ಇದ್ಯಾ?, ಪಕ್ಷ ಕಟ್ಟಿದ ಅನುಭವ ಇದ್ಯಾ ?ಇವೆಲ್ಲಾ ಪ್ರಶ್ನೆಗಳನ್ನು ಪಕ್ಕಕ್ಕೆ ತಳ್ಳಿ 2022ರ ಚುನಾವಣೆಯಲ್ಲಿ ಪಾಟೀದಾರ್ (ಪಟೇಲ್ ಸಮುದಾಯ) ಮತಗಳನ್ನು ಸೆಳೆಯುವ ಏಕೈಕ ಉದ್ದೇಶ ಮಾತ್ರ ಇರಿಸಿಕೊಂಡು ಭೂಪೇಂದ್ರ ಪಟೇಲ್ ಆಯ್ಕೆಮಾಡಲಾಗಿದೆ ಅನ್ನೋದು ಸ್ಪಷ್ಟವಾಗಿದೆ.
ಭೂಪೇಂದ್ರ ಪಟೇಲ್, ಮಾಜಿ ಸಿಎಂ ಆನಂದಿ ಬೆನ್ ಪಟೇಲ್ ( ರಾಜ್ಯಪಾಲರಾಗಿ ಹೋದ ನಂತರ) ಅವರಿಂದ ಕ್ಷೇತ್ರ ತೆರವಾದ ಬಳಿಕ ಅದೇ ಘಾಟ್ ಲೋಡಿಯಾ ಕ್ಷೇತ್ರದಲ್ಲಿ ನಿಂತು ಒಂದೂವರೆ ಲಕ್ಷಕ್ಕೂ ಅಧಿಕ ಮತಗಳೊಂದಿಗೆ ವಿಜಯದ ನಗೆ ಬೀರಿದ್ದರು. ಸಾಲದಕ್ಕೆ ಅಹಮದಾಬಾದ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ಪಟೇಲ್ ಅಚ್ಚರಿ ಆಯ್ಕೆಯಾ? ಏನು ಹೇಳುತ್ತದೆ ವಿಶ್ಲೇಷಣೆ
ಪಟೇಲ್, ಓದಿರುವುದು ಎಂಜಿನಿಯರಿಂಗ್ ಪದವಿ, ವಯಸ್ಸು 59 ವರ್ಷ . ಮಾಜಿ ಸಿಎಂ ಆನಂದಿಬೆನ್ ಪಟೇಲ್ ಅವರ ಅನುಯಾಯಿ. ಇಷ್ಟರ ಜೊತೆಗೆ ಹೆಚ್ಚು ಕಡಿಮೆ ನಾಲ್ಕು ವರ್ಷಗಳ ಕಾಲ ಶಾಸಕರಾಗಿರುವ ಅನುಭವ ಸಿಎಂ ಆಯ್ಕೆಯಲ್ಲಿ ಪಾತ್ರ ವಹಿಸಿವೆ. ಅಲ್ಲದೇ ವಿವಾದೇತರ ಮತ್ತು ಲೋ ಪ್ರಫೈಲ್ ವ್ಯಕ್ತಿ ಕೂಡ.
ಬಿಜೆಪಿಯಲ್ಲಿ ಇಂದಿರಾ ಯುಗ ಶುರುವಾಯ್ತಾ? : ದೆಹಲಿ ರಾಜಕೀಯ ಕಟ್ಟೆಯಲ್ಲಿ ಇದು ಬಹುಚರ್ಚಿತ ವಿಷಯವಾಗಿದೆ. ಬಿಜೆಪಿ ಯಲ್ಲಿ ಶುರುವಾಯ್ತಾ ಇಂದಿರಾಗಾಂಧಿ ಯುಗದ ಆದೇಶಗಳು. ಭೂಪೇಂದ್ರ ಪಟೇಲ್ ಆಯ್ಕೆಯಲ್ಲಿ ಈ ಮಾತು ನಿಜವಾಗಿದೆ. ಪಟೇಲ್ ಸಮುದಾಯದ ಬೆಂಬಲ, ಪಕ್ಷದ ಸಂಘಟನೆ, ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಯಾವ ಅನುಭವಿಗಳಿಗೂ ಮಣೆ ಹಾಕದೇ ಯಾವುದೋ ಕಾರಣಕ್ಕೆ ತಮಗೆ ಬೇಕಾದವರನ್ನು ಮುಖ್ಯಮಂತ್ರಿಯಾಗಿ ಹೆಸರು ಘೋಷಣೆಯಾಗುವಂತೆ ನೋಡಿಕೊಳ್ಳಲಾಗಿದೆ. ಇದೇ ರೀತಿ ಇಂದಿರಾಗಾಂಧಿ ಕಾಲದಲ್ಲೂ ನಡೆಯುತ್ತಿತ್ತು ಎನ್ನುತ್ತವೆ ಇತಿಹಾಸದ ಪುಟಗಳು.
ಮೋದಿ ಮ್ಯಾಜಿಕ್ ಗೆ ಹಿನ್ನಡೆಯಾಗಿತ್ತು ; ಮೋದಿ ಅವರು ಪ್ರಧಾನಿಯಾದ ಬಳಿಕ ಗುಜರಾತ್ ನಲ್ಲಿ ಬಿಜೆಪಿಯ ಸ್ಥಾನಗಳು ಇಳಿಮುಖದತ್ತ ಸಾಗಿದ್ದವು ಅಂಥ ಕಳೆದ ಬಾರಿಯ ಚುನಾವಣಾ ಅಂಕಿ ಅಂಶಗಳು ಹೇಳುತ್ತವೆ. ತ್ರಿಬಲ್ ಡಿಜಿಟ್ ನಿಂದ ಡಬಲ್ ಡಿಜಿಟ್ ಅಂದರೆ 99 ಸ್ಥಾನಗಳಿಗೆ ಬಂದಿದ್ದು, ಇದಕ್ಕೆ ಪಾಟಿದಾರ್ ಸಮುದಾಯ ಬಿಜೆಪಿ ಗೆ ಕೈಕೊಟ್ಟಿದ್ದು ಕಾರಣ ಎನ್ನಲಾಗಿತ್ತು. ಮೀಸಲಾತಿ ಹೋರಾಟದ ಕಾರಣ ಬಿಜೆಪಿ ಹೆಚ್ಚು ಸ್ಥಾನಗಳು ಪಡೆಯುವಲ್ಲಿ ವಿಫಲವಾಗಿತ್ತು. ಗ್ರಾಮೀಣ ಗುಜರಾತ್ ನಲ್ಲಿ ಪಾಟೀದಾರ್ ಸಮುದಾಯ ಬಿಜೆಪಿ ಗೆ ವಿರುದ್ಧ ಮತ ಹಾಕಿತ್ತು ಎಂದಿವೆ ಚುನಾವಣಾ ವಿಶ್ಲೇಷಣೆಗಳು.
ಇನ್ನು ವಿಜಯ್ ರೂಪಾನಿ ಅವರ ನಾಯಕತ್ವದ ವಿರುದ್ಧ ಅಪಸ್ವರಗಳು ಕೇಳಿಬರುತ್ತಿದ್ದವು. ಸಾಲದ್ದಕ್ಕೆ ಕೊರೊನಾ ಕಾಲದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಅನ್ನೋ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಸಿಎಂ ಬದಲಾವಣೆ ಮಾಡುವ ಕೆಲಸ ಮಾಡಿದೆ. ಆದರೆ ಭೂಪೇಂದ್ರ ಪಟೇಲ್ ನಾಯಕತ್ವ ಎಷ್ಟರ ಮಟ್ಟಿಗೆ 2022 ರ ಚುನಾವಣೆಯಲ್ಲಿ ಮತಗಳು ತಂದು ಕೊಡುತ್ತೆ ಅನ್ನೋ ಪ್ರಶ್ನೆಗೆ ಮೋದಿ-ಶಾ ಜೋಡಿ ಉತ್ತರಿಸಬೇಕಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ