
ನವದೆಹಲಿ (ಜನವರಿ 2, 2024): 1993ರಲ್ಲಿ ಮುಂಬೈ ಷೇರು ಮಾರುಕಟ್ಟೆ ಮೇಲೆ ದಾಳಿ ನಡೆದ ಮಾ.12ರ ವೇಳೆಗೆ ಭಾರತದ ಅರ್ಥವ್ಯವಸ್ಥೆಯನ್ನು ‘ಧ್ವಂಸ’ ಮಾಡಬೇಕು. ಭಾರತದ ಷೇರು ಖರೀದಿ ನಿಲ್ಲಿಸಿ, ಅಮೆರಿಕ ಷೇರುಗಳನ್ನು ಹೂಡಿಕೆದಾರರು ಖರೀದಿಸಿ, ಭಾರತೀಯ ಅರ್ಥವ್ಯವಸ್ಥೆಗೆ ಹೊಡೆತ ನೀಡಬೇಕು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಕರೆ ನೀಡಿದ್ದಾನೆ.
ಈ ಕುರಿತು ಸಂದೇಶ ನೀಡಿರುವ ಪನ್ನು, ‘ಮಾರ್ಚ್ 12ರಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಯಾವ ವ್ಯವಹಾರವೂ ಇರದಂತೆ ಎಲ್ಲ ಅಂತಾರಾಷ್ಟ್ರೀಯ ಸಂಸ್ಥೆಗಳು ಅಮೆರಿಕನ್ ಷೇರು ಮಾರುಕಟ್ಟೆಗೆ ತಮ್ಮ ಹೂಡಿಕೆಗಳನ್ನು ವರ್ಗಗೊಳಿಸಬೇಕು. ಆ ದಿನದ ನಂತರ ಭಾರತೀಯ ಅರ್ಥವ್ಯವಸ್ಥೆಯ ಅಧಃಪತನ ಆರಂಭವಾಗಲಿದೆ‘ ಎಂದಿದ್ದಾನೆ.
ಕಾಶ್ಮೀರಿ ಉಗ್ರರ ಜೊತೆ ಸೇರಿ ಪನ್ನು ಹೊಸ ಉಗ್ರ ಸಂಘಟನೆ! ಕಾಶ್ಮೀರ್ - ಖಲಿಸ್ತಾನ್ ರೆಫರೆಂಡಮ್ ಫ್ರಂಟ್ ಘೋಷಣೆ
1993ರ ಮಾರ್ಚ್ 12ರಂದು ಬಾಂಬೆ ಷೇರುಪೇಟೆ ಕಟ್ಟಡದ ಮೇಲೆ ಉಗ್ರರು ದಾಳಿ ಮಾಡಿದ್ದರು. ಆದರೆ ಪನ್ನು ಈ ರೀತಿ ಕಟ್ಟಡದ ಮೇಲೆ ದಾಳಿಗೆ ಕರೆ ಕೊಡದೆ, ಬೇರೆ ವಿಧಾನದ ‘ಯುದ್ಧ’ಕ್ಕೆ (ಆರ್ಥಿಕ ಸಮರ) ಕರೆ ನೀಡಿದ್ದಾನೆ.
ಭಾರತ ತಿರುಗೇಟು:
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಗುಪ್ತಚರ ಸಂಸ್ಥೆಯ ಅಧಿಕಾರಿಗಳು, ‘ನರೇಂದ್ರ ಮೋದಿಯನ್ನು ಅಯೋಧ್ಯೆಯಲ್ಲಿ ಗುರಿ ಮಾಡಿ ದಾಳಿ ಮಾಡಬೇಕು ಎಂದು ಪನ್ನು ನೀಡಿದ ಕರೆ ಹುಸಿಯಾದ ಬಳಿಕ ಹೊಸ ಅಭಿಯಾನ ಆರಂಭಿಸಿದ್ದಾನೆ. ಆತ ಅಮೆರಿಕ ಸಂಜಾತನಾಗಿರುವ ಕಾರಣ ಇಂಥ ಕರೆಗಳ ಮೂಲಕ ಅಮೆರಿಕ ಕಂಪನಿಗಳಿಂದ ಹಣ ಸಂಪಾದಿಸಲು ಹೊರಟಿದ್ದಾನೆ. ಈತನನ್ನು ಅಂತಾರಾಷ್ಟ್ರೀಯ ಸಂಸ್ಥೆಗಳೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಂರಕ್ಷಿಸುತ್ತಿವೆ. ಈತ ಜಾಗತಿಕ ಉಗ್ರನಾಗಿದ್ದು, ಶೀಘ್ರದಲ್ಲೇ ವಿಚಾರಣೆಯನ್ನು ಎದುರಿಸಲಿದ್ದಾನೆ’ ಎಂಬುದಾಗಿ ತಿಳಿಸಿದ್ದಾರೆ.
ಪನ್ನುನ್ ಕೊಲೆ ಯತ್ನ, ಅಮೆರಿಕ ಆರೋಪದ ಬಗ್ಗೆ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿ!
ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹಲವು ಬಾರಿ ಭಾರತದ ಮೇಲೆ ಹುಸಿ ದಾಳಿಯ ಬೆದರಿಕೆ ಒಡ್ಡುತ್ತಿರುತ್ತಾನೆ. ಇತ್ತೀಚೆಗೆ ನರೇಂದ್ರ ಮೋದಿಯನ್ನು ಕೊಲ್ಲುವುದರಿಂದ ಹಿಡಿದು, ವಿಶ್ವಕಪ್, ನೂತನ ಸಂಸತ್ ಭವನ ಮುಂತಾದ ಸ್ಥಳಗಳಲ್ಲಿ ಐತಿಹಾಸಿಕ ದಿನಗಳಂದು ದಾಳಿ ಮಾಡಬೇಕೆಂದು ಕರೆ ನೀಡುತ್ತಿದ್ದಾನೆ. ಈತನನ್ನು ಭಾರತ ಸರ್ಕಾರ 2020ರಲ್ಲಿ ಒಂಟಿ ಉಗ್ರನೆಂದು ಘೋಷಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ