
ಆನೆಮರಿಗಳಿಗೆ ತಾಯಿ ಆನೆ ಹಾಗೂ ಅವುಗಳ ಹಿಂಡು ಭಾರಿ ಭದ್ರತೆಯನ್ನು ನೀಡುತ್ತವೆ. ಹಿಂಡಿನಲ್ಲೊಂದು ಆನೆ ಮರಿ ಇದೆ ಎಂದಾದರೆ ಆ ಆನೆಗಳ ಹಿಂಡು ಹಿಂದೆಂಗಿಂತಲೂ ಜಾಗರೂಕರಾಗಿರುತ್ತವೆ. ತುಸು ಅಪಾಯ ಕಾದಿದೆ ಎಂಬ ಸೂಚನೆ ಸಿಕ್ಕರೂ ಸಾಕು ದೊಡ್ಡಾನೆಗಳೆಲ್ಲಾ ಮರಿ ಆನೆಯನ್ನು ಸುತ್ತುವರಿದು ಝಡ್ ಪಸ್ಲ್ ಭದ್ರತೆಯನ್ನು ನೀಡುತ್ತವೆ. ಹಾಗಿದ್ದು ಅದು ಹೇಗೋ ತಿಳಿಯದು ಆನೆ ಮರಿಗಳು ಕೆಲವೊಮ್ಮೆ ತಾಯಿ ಆನೆಯಿಂದ ಬೇರ್ಪಟ್ಟು ತಬ್ಬಲಿಗಳಾಗಿ ಬಿಡುತ್ತವೆ. ನಂತರ ಹೀಗೆ ತಪ್ಪಿಸಿಕೊಂಡ ಮರಿ ಆನೆಗಳು ತಾಯಿಗಾಗಿ ಬಹಳ ಹುಡುಕಾಟ ನಡೆಸಿ ತಾಯಿಗಾಗಿ ಹಂಬಲಿಸುತ್ತವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹೀಗೆ ತಾಯಿಯಿಂದ ಬೇರ್ಪಟ್ಟ ಆನೆಮರಿಗಳನ್ನು ಮತ್ತೆ ತಾಯಿಯ ಜೊತೆ ಸೇರಿಸಿದ ಹಲವು ನಿದರ್ಶನಗಳಿವೆ. ಕೆಲ ದಿನಗಳ ಹಿಂದಷ್ಟೇ ಬೇರ್ಪಟ್ಟ ಆನೆಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ಆನೆಯ ಜೊತೆ ಸೇರಿಸಿದ್ದರು. ಈ ಘಟನೆ ಮಾಸುವ ಮೊದಲೇ ಮತ್ತೊಂದು ಪುಟಾಣಿ ಮರಿಯಾನೆ ತನ್ನ ತಾಯಿಯಿಂದ ಬೇರ್ಪಟ್ಟಿದ್ದು, ಆಕೆಯನ್ನು ಹುಡುಕುತ್ತಾ ಬಂದ ಮರಿ ಕಾಡಂಚಿನ ಗ್ರಾಮದ ಶಾಲೆಯೊಂದಕ್ಕೆ ಬಂದಿದೆ. ಈ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರಿಸರ ಪರಿವಾರ ಎಂಬ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಆನೆ ಮರಿಯೊಂದು ಶಾಲೆಯ ವರಾಂಡದಲ್ಲಿ ಓಡಾಡುತ್ತಾ ದಿಕ್ಕೆಟ್ಟಂತೆ ಕಾಣುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಕಾಡಂಚಿನ ಗ್ರಾಮವಾದ ಪುಲುಪಳ್ಳಿಯ ಶಾಲೆಯ ಆವರಣದಲ್ಲಿ ನಿನ್ನೆ ಈ ಆನೆ ಮರಿ ಕಾಣಿಸಿಕೊಂಡಿದೆ. ಕೊಠಡಿಗಳ ಆವರಣದಲ್ಲಿ ಆನೆಮರಿ ಓಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆನೆ ಮರಿ ನೋಡಿದ ಮಕ್ಕಳು ಖುಷಿ ಪಟ್ಟಿದ್ದಾರೆ. ನಂತರ ವಿಚಾರ ತಿಳಿದ ಅರಣ್ಯ ಸಿಬ್ಬಂದಿ ಮರಿಯಾನೆಯನ್ನು ರಕ್ಷಿಸಿ ತಾಯಿಯ ಜೊತೆ ಸೇರಿಸುವ ಪ್ರಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಗುಂಪಿನಿಂದ ಬೇರ್ಪಟ್ಟು ಮನುಷ್ಯರ ಸಹವಾಸಕ್ಕೆ ಸಿಕ್ಕಿದ ಮರಿಯಾನೆಯನ್ನು ತಾಯಿ ಸ್ವೀಕರಿಸುವುದೋ ಇಲ್ಲವೋ ಎಂಬ ಬಗ್ಗೆ ಅನುಮಾನವಿದೆ. ಈ ಪುಲಪಳ್ಳಿ ಗ್ರಾಮವೂ ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಕಾಡಂಚಿನ ಗ್ರಾಮವಾಗಿದೆ.
ಮಲೆಯಾಳಂನ ಕೆಲ ಮಾಧ್ಯಮಗಳಲ್ಲಿ ಇದು ವಯನಾಡ್ ಚೆಕ್ಕಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ತಾಯಿಯಿಂದ ಬೇರ್ಪಟ್ಟ ಮರಿಯಾನೆಯೊಂದು ಬಂದಿದೆ ಎಂದು ವರದಿಯಾಗಿದೆ. ಅರಣ್ಯದಿಂದ ಕೂಡಿದ ವಯನಾಡಿನ ಈ ಸಣ್ಣ ಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೋಮವಾರ ಬೆಳಿಗ್ಗೆ ವಿಶೇಷವಾದ ಅತಿಥಿ ಬಂದಿತ್ತು ಅದು ಒಂದು ಪುಟ್ಟ ಆನೆ ಮರಿ. ಚೆಕ್ಕಾಡಿಯ ಈ ಪೂರ್ವ ಪ್ರಾಥಮಿಕ ತರಗತಿಗಳನ್ನು ಒಳಗೊಂಡಿರುವ ಸರ್ಕಾರಿ ಎಲ್‌ಪಿ ಶಾಲೆಯಲ್ಲಿ ಸುಮಾರು 115 ವಿದ್ಯಾರ್ಥಿಗಳು ಇದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕ್ಯಾಂಪಸ್‌ನಲ್ಲಿ ಆನೆಗಳ ಉಪಸ್ಥಿತಿ ಹೊಸದೇನಲ್ಲ, ಸೂರ್ಯಾಸ್ತದ ನಂತರ ಹಿಂಡುಗಳು ಹೆಚ್ಚಾಗಿ ಇಲ್ಲಿ ಹಾದು ಹೋಗುತ್ತವೆ. ಆದರೆ ಒಂಟಿ ಮರಿ ಆವರಣಕ್ಕೆ ಅಲೆದಾಡಿದ್ದು ಇದೇ ಮೊದಲು ಎಂದು ಇಲ್ಲಿನ ಶಿಕ್ಷಕರು ಹೇಳಿದ್ದಾರೆ.
ಇದನ್ನೂ ಓದಿ: ಬೈಕನ್ನು ಹೆಗಲ ಮೇಲೆ ಹೊತ್ತು ಬಾಹುಬಲಿಯಂತೆ ಸಾಗಿದ ಭೂಪ: ಭಾರತೀಯ ಹಾಡಿಗೆ ರಷ್ಯನ್ ಪುಟಾಣಿಗಳ ಡಾನ್ಸ್
ಇದನ್ನೂ ಓದಿ: ಟರ್ಕಿ ಅಧ್ಯಕ್ಷರಿಗೂ ಮೊದಲೇ ಟೇಪ್ ಕತ್ತರಿಸಿದ ಬಾಲಕಿ: ಬಾಲಕಿಯ ಒಂದೇ ಕೂಗಿಗೆ ಕೆನೆದು ಓಡಿದ ಕುದುರೆ: ವೀಡಿಯೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ