
ತಿರುವನಂತಪುರಂ (ಜುಲೈ 25, 2023): ಗಣಪತಿ ಕೇವಲ ಪುರಾಣ ಕತೆ ಅಷ್ಟೇ, ದೇವರಲ್ಲ ಎಂದು ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್ ಶಂಸೀರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸ್ಪೀಕರ್ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಪೊಲೀಸ್ ದೂರು ದಾಖಲಿಸಿದೆ ಮತ್ತು ಹಲವಾರು ಹಿಂದೂ ಸಂಘಟನೆಗಳು ಸಿಪಿಐ(ಎಂ) ನಾಯಕರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ.
ಇದೇ ವೇಳೆ ಶಂಸೀರ್ ವಿರುದ್ಧ ರಾಜ್ಯದಲ್ಲಿ ವ್ಯಾಪಕವಾಗಿ ದೂರು ದಾಖಲಿಸಲು ವಿಶ್ವ ಹಿಂದೂ ಪರಿಷತ್ ಸಹ ನಿರ್ಧರಿಸಿದೆ. ಹಾಗೆ, ಶಂಸೀರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಸಹ ಸಂಘಟನೆ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ವಿಎಚ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಆರ್.ರಾಜಶೇಖರನ್ ಮಾತನಾಡಿದ್ದು, ಸ್ಪೀಕರ್ ಒಪ್ಪಲಾಗದ ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಹಿಂದೂ ಐಕ್ಯವೇದಿ ಕೂಡ ಸ್ಪೀಕರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಈ ರಾಜ್ಯದ ದೇಗುಲಗಳ ಮೇಲೆ ದಾಳಿಗೆ ಐಸಿಸ್ ಸಂಚು: ಎನ್‌ಐಎ ದಾಳಿಯಿಂದ ಬಯಲು
ತರ್ಕಬದ್ಧ ಚಿಂತನೆಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ಪೀಕರ್ ಹಿಂದೂ ನಂಬಿಕೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ತಿರುವನಂತಪುರಂ ಜಿಲ್ಲಾ ಉಪಾಧ್ಯಕ್ಷ ಆರ್ ಎಸ್ ರಾಜೀವ್ ದೂರು ದಾಖಲಿಸಿದ್ದಾರೆ. ಅವರು ಸೋಮವಾರ ತಿರುವನಂತಪುರಂ ನಗರ ಪೊಲೀಸ್ ಆಯುಕ್ತರಿಗೆ ಈ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಮಧ್ಯೆ. ಕೇರಳ ದೇವಸ್ಥಾನ ಸಂರಕ್ಷಣಾ ಸಮಿತಿಯು ಸೆಕ್ರೆಟರಿಯೇಟ್‌ಗೆ ಮೆರವಣಿಗೆ ನಡೆಸಲಿದ್ದು, ಶಂಸೀರ್ ಅವರು ಹಿಂದೂ ಸಮುದಾಯಕ್ಕೆ ಔಪಚಾರಿಕವಾಗಿ ಕ್ಷಮೆಯಾಚಿಸಬೇಕು ಎಂದೂ ಕರೆ ನೀಡಿದರು. ಬುಧವಾರ (ಜುಲೈ 26) ಬೆಳಗ್ಗೆ 10 ಗಂಟೆಗೆ ಪಜವಂಗಡಿ ಗಣಪತಿ ದೇವಸ್ಥಾನದ ಸನ್ನಿಧಿಯಲ್ಲಿ ಈ ಮೆರವಣಿಗೆ ಆರಂಭವಾಗಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ
ಜುಲೈ 21 ರಂದು ಕೇರಳದ ಎರ್ನಾಕುಲಂ ಜಿಲ್ಲೆಯ ಕುನ್ನತುನಾಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ “ವಿದ್ಯಾ ಜ್ಯೋತಿ” ಸಮಾರಂಭದಲ್ಲಿ ಸ್ಪೀಕರ್ ನೀಡಿದ ಹೇಳಿಕೆಗಳನ್ನು ಆಧರಿಸಿ ದೂರು ನೀಡಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗಿಂತ ಹೆಚ್ಚಾಗಿ ಹಿಂದೂ ಪುರಾಣಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೇರಳ ಸ್ಪೀಕರ್ ಆರೋಪಿಸಿದ್ದರು. "ಹಿಂದೂ ಧರ್ಮದ ಆರಂಭದಿಂದಲೂ ಪ್ಲಾಸ್ಟಿಕ್ ಸರ್ಜರಿ, ಬಂಜೆತನ ಚಿಕಿತ್ಸೆ ಮತ್ತು ವಿಮಾನಗಳಿವೆ ಎಂದು ಸಾಬೀತುಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ರೈಟ್ ಸಹೋದರರು ವಿಮಾನವನ್ನು ರಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ನಾನು ಶಾಲೆಯಲ್ಲಿದ್ದಾಗ ಓದಿದ್ದೆ. ಪ್ರಸ್ತುತ ಅವರು ಪುಷ್ಪಕ ವಿಮಾನವು ಮೊದಲ ವಿಮಾನ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ" ಎಂದೂ ಶಂಸೀರ್ ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ಗಣೇಶ ತಮ್ಮ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಪಡೆದರು ಎಂಬ ಪರಿಕಲ್ಪನೆಯನ್ನು ಹಿಂದುತ್ವವಾದಿಗಳು ಹರಡಿದ್ದಾರೆ. ಇದು ಸುಳ್ಳು, ಪುರಾಣ ಕತೆಯಷ್ಟೇ ಎಂದು ಶಂಸೀರ್ ತಳ್ಳಿಹಾಕಿದ್ದಾರೆ. ಈ ಹಿನ್ನೆಲೆ ಬಿಜೆಪಿ ಕೇರಳ ಸ್ಪೀಕರ್ ವಿರುದ್ಧ ದೂರು ದಾಖಲಿಸಿದೆ.
ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಚಾಟ್ ಜಿಪಿಟಿ ಫಾರ್ಮುಲಾ: ತಮಿಳುನಾಡಲ್ಲಿ ಅಣ್ಣಾಮಲೈ ‘ಚೆನ್ನೈ ಎಕ್ಸ್‌ಪ್ರೆಸ್’ ರಾಜಕೀಯ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ