ಸಹಾರಾ ರೀಫಂಡ್‌ ಪೋರ್ಟಲ್‌ನಲ್ಲಿ ಈವರೆಗೂ 7 ಲಕ್ಷ ಅರ್ಜಿ, 158 ಕೋಟಿಗೆ ಕ್ಲೇಮ್‌!

Published : Jul 25, 2023, 04:16 PM IST
ಸಹಾರಾ ರೀಫಂಡ್‌ ಪೋರ್ಟಲ್‌ನಲ್ಲಿ ಈವರೆಗೂ 7 ಲಕ್ಷ ಅರ್ಜಿ, 158 ಕೋಟಿಗೆ ಕ್ಲೇಮ್‌!

ಸಾರಾಂಶ

ಜುಲೈ 18 ರಂದು ಗೃಹ ಸಚಿವ ಅಮಿತ್‌ ಶಾರಿಂದ ಅನಾವರಣವಾಗಿದ್ದ ಸಹಾರಾ ರೀಫಂಡ್‌ ಪೋರ್ಟ್‌ನಲ್ಲಿ ಈವರೆಗೂ 7 ಲಕ್ಷಕ್ಕೂ ಅಧಿಕ ಅರ್ಜಿ ದಾಖಲಾಗಿದ್ದು, 158 ಕೋಟಿಗೂ ಅಧಿಕ ಕ್ಲೇಮ್‌ಗಳಿಗೆ ಅರ್ಜಿ ಬಂದಿದೆ. ಮೊದಲ ಹಂತದಲ್ಲಿ ಒಟ್ಟು 4 ಕೋಟಿ ಹೂಡಿಕೆದಾರರು ರೀಫಂಡ್‌ ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ನವದೆಹಲಿ (ಜು.25): ಸಹಾರಾ ಇಂಡಿಯಾ ಪರಿವಾರ್‌ ಹಗರಣದಲ್ಲಿ ಮೋಸ ಹೋದವರಿಗೆ ಹಣವನ್ನು ರೀಫಂಡ್‌ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಜುಲೈ 18 ರಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಸಿಆರ್‌ಸಿಎಸ್‌ ಸಹಾರಾ ರೀಫಂಡ್‌ ಪೋರ್ಟಲ್‌ ಅನ್ನು ಅನಾವರಣ ಮಾಡಿದ್ದರು. ಇಲ್ಲಿಯವರೆಗೂ ಸಹಾರಾ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಹೂಡಿಕೆ ಮಾಡಿದ 7 ಲಕ್ಷ ಹೂಡಿಕೆದಾರರು ಅರ್ಜಿ ಸಲ್ಲಿಕೆ ಮಾಡಿದದ್ದು, 158 ಕೋಟಿಯಷ್ಟು ಕ್ಲೇಮ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.  ಈ ಪೋರ್ಟಲ್ ಮೂಲಕ, ಗುಂಪಿನ 4 ಸೊಸೈಟಿಗಳಲ್ಲಿ ಸಿಲುಕಿರುವ ಸಹಾರಾದ 10 ಕೋಟಿ ಹೂಡಿಕೆದಾರರಿಗೆ 5,000 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡುವ ಬಗ್ಗೆ ಆರಂಭದಲ್ಲಿ ನಿರ್ಧಾರ ಮಾಡಲಾಗುತ್ತದೆ. ಈ ಸೊಸೈಟಿಗಳು ಹೂಡಿಕೆದಾರರಿಂದ ಬರೋಬ್ಬರಿ 86,000 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿದ್ದವು.

45 ದಿನಗಳಲ್ಲಿ ಮರುಪಾವತಿ: ಸಿಆರ್‌ಸಿಎಸ್ ಪೋರ್ಟಲ್ ಬಿಡುಗಡೆಯ ಸಂದರ್ಭದಲ್ಲಿ, ಸಹಾರಾ ಹೂಡಿಕೆದಾರರು ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ ನಂತರ 45 ದಿನಗಳಲ್ಲಿ ತಮ್ಮ ಹಣವನ್ನು ಮರಳಿ ಪಡೆಯುತ್ತಾರೆ ಎಂದು ಅಮಿತ್‌ ಶಾ ಹೇಳಿದ್ದರು. ಈ ಹಣವನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗುತ್ತದೆ. ಸಹಾರಾದ 4 ಸಹಕಾರ ಸಂಘಗಳ ಹೂಡಿಕೆದಾರರು ಮಾತ್ರ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶದಂತಹ ರಾಜ್ಯಗಳು ಅತಿ ಹೆಚ್ಚು ಹೂಡಿಕೆದಾರರನ್ನು ಹೊಂದಿವೆ ಎಂದು ತಿಳಿಸಲಾಗಿದೆ.
ಮೊದಲ ಹಂತದಲ್ಲಿ ಠೇವಣಿದಾರರು 10,000 ರೂಪಾಯಿವರೆಗಿನ ಹಣವನ್ನು ಮಾತ್ರ ಮರುಪಾವತಿ ಪಡೆಯುತ್ತಾರೆ. ಅಂದರೆ, ಠೇವಣಿ ಮೊತ್ತ 20,000 ರೂ.ಗಳಿದ್ದರೂ ಕೇವಲ 10,000 ರೂಪಾಯಿ ಮಾತ್ರವೇ ಅವರಿಗೆ ಸಿಗಲಿದೆ. ಇನ್ನು ಈ ಸೊಸೈಟಿಯಲ್ಲಿ 10 ಸಾವಿರ ರೂಪಾಯಿವರೆಗೆ ಹೂಡಿಕೆ ಮಾಡಿದ 1.07 ಕೋಟಿ ಹೂಡಿಕೆದಾರರಿದ್ದು, ಅವರಿಗೆ ಪೂರ್ಣ ಹಣ ಮರುಪಾವತಿಯಾಗಲಿದೆ.

ಮೊದಲ ಹಂತದಲ್ಲಿ ಒಟ್ಟು 4 ಕೋಟಿ ಹೂಡಿಕೆದಾರರಿಗೆ ಮರುಪಾವತಿ ನೀಡಲಾಗುವುದು ಎಂದು ಶಾ ಹೇಳಿದ್ದರು. 5000 ಕೋಟಿ ರೂಪಾಯಿ ಮರುಪಾವತಿಯ ನಂತರ, ನಾವು ಸುಪ್ರೀಂ ಕೋರ್ಟ್‌ಗೆ ಹೋಗಲಿದ್ದೇವೆ ಎಂದು ತಿಳಿಸಿದ್ದರು. 10 ಸಾವಿರಕ್ಕಿಂತ ಅಧಿಕ ಹಣ ಹೂಡಿಕೆ ಮಾಡಿರುವ ವ್ಯಕ್ತಿಗಳಿಗೆ ರೀಫಂಡ್‌ ಮಾಡುವ ನಿಟ್ಟಿನಲ್ಲಿ ಹಣವನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದರು.

 

ಸಹಾರ ಇಂಡಿಯಾ ಬಿಡುಗಡೆ ಮಾಡುತ್ತಿದೆ ಎಲೆಕ್ಟ್ರಿಕ್ ಸ್ಕೂಟರ್!

ಸಹಾರಾ ಇಂಡಿಯಾ ಪರಿವಾರ್‌ನ ನಾಲ್ಕು ಸೊಸೈಟಿಗಳ ಪೈಕಿ ಮೂರು ಸೊಸೈಟಿಗಳಾದ ಸಹಾರಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌, ಹಮಾರಾ ಇಂಡಿಯಾ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌, ಸಹಾರಯಾನ ಯೂನಿವರ್ಸಲ್‌ ಮಲ್ಟಿಪರ್ಪಸ್‌ ಸೊಸೈಟಿ ಲಿಮಿಟೆಡ್‌ನಲ್ಲಿ 2022ರ ಮಾರ್ಚ್‌ 22ಕ್ಕೂ ಮುನ್ನ ಹೂಡಿಕೆ ಮಾಡಿದವರು ರೀಫಂಡ್‌ಗೆ ಅರ್ಹರಾಗಿರುತ್ತಾರೆ. ಸ್ಟಾರ್ಸ್‌ ಮಲ್ಟಿಪರ್ಪಸ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ ಹೈದರಾಬಾದ್‌ನಲ್ಲಿ 2023ರ ಮಾರ್ಚ್‌ 29ಕ್ಕೂ ಮುನ್ನ ಹೂಡಿಕೆ ಮಾಡಿದವರು ರೀಫಂಡ್‌ಗೆ ಅರ್ಹರಾಗಿರುತ್ತಾರೆ.

ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಿಂದ 2.09 ಲಕ್ಷ ಕೋಟಿ ಬ್ಯಾಡ್‌ ಲೋನ್‌ ರೈಟ್‌ ಆಫ್‌!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು