* ನಿನ್ನೆ ದೇಶದ ಸೋಂಕಿನಲ್ಲಿ ಕೇರಳ ಪಾಲು 65%, ಸಾವು 27%
* ಕೇರಳದಲ್ಲಿ ಕೋವಿಡ್ ಬ್ಲಾಸ್ಟ್
* ಒಂದೇ ದಿನ 31,445 ಜನರಲ್ಲಿ ಕೊರೋನಾ ಸೋಂಕು ಪತ್ತೆ
* ಕೋವಿಡ್ ನಿಯಂತ್ರಣಕ್ಕೆ ‘ಕೇರಳ ಮಾದರಿ’ ಪ್ರಚಾರ ಹುಸಿ
ತಿರುವನಂತಪುರ/ ನವದೆಹಲಿ(ಆ.26): ದೇಶದಲ್ಲಿ ಕೋವಿಡ್ ಮೂರನೇ ಅಲೆಗೆ ಮುನ್ನುಡಿ ಬರೆಯುತ್ತಿದೆ ಎಂದು ಭಾವಿಸಲಾಗಿರುವ ಕೇರಳದಲ್ಲಿ ಕೋವಿಡ್ ಸೋಂಕು ತೀವ್ರ ಪ್ರಮಾಣದಲ್ಲಿ ಉಲ್ಬಣಿಸುತ್ತಿದೆ. ಬುಧವಾರ ಒಂದೇ ದಿನ 31,445 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ಮೂರು ತಿಂಗಳಿನ ಗರಿಷ್ಠ ಪ್ರಕರಣಗಳ ಸಂಖ್ಯೆಯಾಗಿದೆ. ದೇಶದ ದೈನಂದಿನ ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಕೇರಳದ ಪಾಲು ಶೇ.65ರಷ್ಟುಇದೆ.
ಮೊದಲನೇ ಅಲೆ ಹಾಗೂ ಎರಡನೇ ಅಲೆಯನ್ನು ಕೇರಳದಲ್ಲಿ ಸಮರ್ಥವಾಗಿ ನಿಯಂತ್ರಿಸಲಾಗಿತ್ತು ಎಂಬ ಕಾರಣಕ್ಕೆ ‘ಕೇರಳ ಮಾದರಿ ಕೋವಿಡ್ ನಿಯಂತ್ರಣ’ ಎಂಬುದು ಜನಜನಿತವಾಗಿತ್ತು. ಆದರೆ ಈಗ ಕೇರಳ ಮಾದರಿ ಯಾವುದೇ ಕೆಲಸ ಮಾಡುತ್ತಿಲ್ಲ ಎಂಬುದನ್ನು ಅಂಕಿ ಅಂಶಗಳೇ ಸಾಬೀತುಪಡಿಸತೊಡಗಿವೆ.
ಬುಧವಾರ ಮತ್ತೆ ರಾಜ್ಯದಲ್ಲಿ 31,445 ಮಂದಿಗೆ ಕೊರೋನಾ ವೈರಸ್ ಹಬ್ಬಿದೆ. ಇದು ಮೇ 20ರ ನಂತರದ ಗರಿಷ್ಠ ಸಂಖ್ಯೆ. ಪಾಸಿಟಿವಿಟಿ ದರವೂ ಶೇ.19 ದಾಟಿದೆ. ವೈರಸ್‌ಗೆ 215 ಮಂದಿ ಬಲಿಯಾಗಿದ್ದಾರೆ. ಇದೇ ವರ್ಷದ ಮೇ 20ರಂದು ಕೇರಳದಲ್ಲಿ 30,491 ಮಂದಿಗೆ ಸೋಂಕು ಹರಡಿತ್ತು.
ದೇಶದ ಶೇ.65ರಷ್ಟು ಕೇಸು ಕೇರಳದಲ್ಲಿ:
ಕೇರಳದಲ್ಲಿ ಮಂಗಳವಾರ ಕೂಡ 24296 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು ಹಾಗೂ 173 ಜನರು ಸಾವನ್ನಪ್ಪಿದ್ದರು. ಮಂಗಳವಾರದ ಅಂಕಿ ಅಂಶ ಒಳಗೊಂಡ ಭಾರತದ ಒಟ್ಟು ಕೋವಿಡ್ ಪ್ರಕರಣಗಳ ವರದಿಯನ್ನು ಕೇಂದ್ರ ಸರ್ಕಾರ ಬುಧವಾರ ಬೆಳಗ್ಗೆ ಪ್ರಕಟಿಸಿದ್ದು, ದೇಶದಲ್ಲಿ 37593 ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. 648 ಸಾವು ಸಂಭವಿಸಿವೆ. ಅಂದರೆ ದೇಶದ ಒಟ್ಟು ಸೋಂಕಿತರಲ್ಲಿ ಕೇರಳ ರಾಜ್ಯದ ಪಾಲು ಶೇ.65ರಷ್ಟಿದ್ದರೆ, ಸಾವಿನಲ್ಲಿ ರಾಜ್ಯದ ಪಾಲು ಶೇ.27ರಷ್ಟಿದೆ.
ದೇಶದಲ್ಲೇ ಅತಿ ಹೆಚ್ಚಿನ ಸೋಂಕು ದಾಖಲಾಗುತ್ತಿದ್ದ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕಳೆದ 2 ತಿಂಗಳಿನಿಂದ ಹಂತಹಂತವಾಗಿ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಯುತ್ತಲೇ ಇದ್ದರೆ, ಕೇರಳದಲ್ಲಿ ಮಾತ್ರ ಅದು ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ನಿತ್ಯವೂ 20000ಕ್ಕಿಂತ ಹೆಚ್ಚಿನ ಕೇಸುಗಳು ದಾಖಲಾಗುತ್ತಲೇ ಇದೆ.
ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಖಾತೆ ಸಚಿವ ಮನ್‌ಸುಖ್ ಮಾಂಡವೀಯ ಅವರೇ ಕೇರಳಕ್ಕೆ ಭೇಟಿ ನೀಡಿ ಕೋವಿಡ್ ಸ್ಥಿತಿಗತಿ ಪರಿಶೀಲಿಸಿದ್ದರು, ಜೊತೆಗೆ ತಜ್ಞರ ತಂಡವೊಂದನ್ನು ಕೂಡ ರಾಜ್ಯಕ್ಕೆ ಕಳುಹಿಸಲಾಗಿತ್ತು. ಆದರೂ ರಾಜ್ಯದಲ್ಲಿ ಸೋಂಕು ಇಳಿಕೆಯಾಗದೇ ಏರುಗತಿಯಲ್ಲೇ ಇರುವುದು ಆತಂಕ ಮೂಡಿಸಿದೆ.
ಕಾರಣ ಏನು?
ಓಣಂ ಹಬ್ಬದ ಆಚರಣೆ ಬಳಿಕ ಕೇರಳದಲ್ಲಿ ಕೋವಿಡ್ ಮತ್ತಷ್ಟುವ್ಯಾಪಕವಾಗಿ ಹಬ್ಬಿದೆ. ಈ ಬಗ್ಗೆ ಹಿಂದೆಯೇ ತಜ್ಞರು ಎಚ್ಚರಿಸಿದ್ದರು. ಆದರೂ ಅದನ್ನು ಕಡೆಗಣಿಸಲಾಗಿತ್ತು. ಜೊತೆಗೆ, ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೇರಲಾಗಿದ್ದ ಕೋವಿಡ್ ನಿರ್ಬಂಧಗಳನ್ನು ಸರ್ಕಾರ ಸಡಿಲಿಸಿತ್ತು. ಬಳಿಕ ರಾಜ್ಯದಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.