ತಾನು ಮಡಿದು ನೂರಾರು ಜನರ ಜೀವ ಉಳಿಸಿದ ಪೈಲಟ್‌ ದೀಪಕ್‌!

By Kannadaprabha NewsFirst Published Aug 9, 2020, 7:58 AM IST
Highlights

ತಾನು ಮಡಿದರೂ ನೂರಾರು ಜನರ ಜೀವ ಉಳಿಸಿದ ಪೈಲಟ್‌ ದೀಪಕ್‌| ಎಂಜಿನ್‌ ಆಫ್‌ ಮಾಡಿದ್ದರಿಂದ ತಪ್ಪಿದ ತೈಲ ಟ್ಯಾಂಕ್‌ ಸ್ಫೋಟ| 

ಕಲ್ಲಿಕೋಟೆ(ಆ.09): ಅನುಭವಿ ಪೈಲಟ್‌ ಕ್ಯಾ. ದೀಪಕ್‌ ಸಾಥೆ ಅವರ ಪ್ರಜ್ಞಾವಂತಿಕೆಯಿಂದಾಗಿ ನೂರಾರು ಪ್ರಯಾಣಿಕರ ಜೀವ ಉಳಿಯುವಂತಾಗಿದೆ. ವಿಮಾನ ನಿಯಂತ್ರಣ ಕೈ ತಪ್ಪುತ್ತಿದೆ ಎಂದು ವೇದ್ಯವಾಗುವಾಗಲೇ ಎಂಜಿನ್‌ ಆಫ್‌ ಮಾಡಿ ಸಾಥೆ ಪ್ರಜ್ಞಾವಂತಿಕೆ ಮೆರೆದು, ನೂರಾರು ಮಂದಿಯ ಜೀವ ಉಳಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್‌ ಹೇಳಿದ್ದಾರೆ.

ಒಂದು ವೇಳೆ ಎಂಜಿನ್‌ ಬಂದ್‌ ಮಾಡದೇ ಇದ್ದಿದ್ದರೆ, ತೈಲ ಟ್ಯಾಂಕ್‌ ಸ್ಫೋಟಗೊಂಡು ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇತ್ತು. ಅಲ್ಲದೇ ಭಾರೀ ಮಳೆ ಇದ್ದುದ್ದರಿಂದ ಬೆಂಕಿ ಹತ್ತಿಕೊಳ್ಳಲಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಬೆಂಕಿ ಹತ್ತಿಕೊಂಡಿದ್ದರೆ, ಅಷ್ಟೂಪ್ರಯಾಣಿಕರ ಜೀವಕ್ಕೆ ಸಂಚಾಕಾರ ಉಂಟಾಗುತ್ತಿತ್ತು.

ನಿಗದಿಗಿಂತ ದೂರದಲ್ಲಿ ಇಳಿದಿದ್ದೇ ಅಪಘಾತಕ್ಕೆ ಕಾರಣ?

ಕಲ್ಲಿಕೋಟೆಯಲ್ಲೇ 27 ಬಾರಿ ವಿಮಾನ ಇಳಿಸಿದ್ದ ದೀಪಕ್‌

ಇಲ್ಲಿನ ಟೇಬಲ್‌ಟಾಪ್‌ ರನ್‌ವೇ ಮತ್ತು ಅಪಘಾತಕ್ಕೊಳಗಾದ ವಿಮಾನದ ಪೈಲಟ್‌ ಕುರಿತು ನಾನಾ ಚರ್ಚೆಗಳು ಆರಂಭವಾಗಿರುವ ಬೆನ್ನಲ್ಲೇ, ‘ಮುಖ್ಯ ಪೈಲಟ್‌ ಒಟ್ಟಾರೆ 10000 ಗಂಟೆಗಳಷ್ಟುವಿಮಾನ ಚಲಾಯಿಸಿದ ಅನುಭವ ಹೊಂದಿದ್ದರು. ಮೇಲಾಗಿ ಕಲ್ಲಿಕೋಟೆ ನಿಲ್ದಾಣ ಅವರಿಗೆ ಹೊಸದಲ್ಲ. ಈಗಾಗಲೇ ಅಲ್ಲಿ ಅವರು 27 ಬಾರಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದರು’ ಎಂದು ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಶನಿವಾರ ತಿಳಿಸಿದ್ದಾರೆ.

1990ರ ದುರ್ಘಟನೆಯಲ್ಲಿ ಪಾರಾಗಿದ್ದರು

ಶುಕ್ರವಾರ ಕಲ್ಲಿಕೋಟೆ ವಿಮಾನ ಅಪಘಾತದಲ್ಲಿ ಬಲಿಯಾದ ಹಿರಿಯ ಪೈಲಟ್‌ ದೀಪಕ್‌ ಸಾಠೆ (58), 1990ರಲ್ಲಿ ನಡೆದ ಇದೇ ರೀತಿಯ ವಿಮಾನ ಅಪಘಾತದಲ್ಲಿ ಬದುಕುಳಿಬಂದಿದ್ದರು ಎಂಬ ವಿಷಯವನ್ನು ಅವರ ಸೋದರ ಸಂಬಂಧ ನೀಲೇಶ್‌ ಸಾಠೆ ಬಹಿರಂಗಪಡಿಸಿದ್ದಾರೆ. ಆಗ ಭಾರತೀಯ ವಾಯುಪಡೆಯಲ್ಲಿದ್ದ ದೀಪಕ್‌, ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. 6 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮತ್ತೆ ಪೈಲಟ್‌ ಆಗಿ ವೃತ್ತಿಯಲ್ಲಿ ಮುಂದುವರಿದಿದ್ದರು. ಅವರ ಆತ್ಮಬಲ ಹಾಗೂ ಅವರಲ್ಲಿದ್ದ ಇಚ್ಛಾಶಕ್ತಿ ಅವರನ್ನು ಮತ್ತೆ ಪೈಲಟ್‌ ಆಗಿ ಮುಂದುವರಿಯುವಂತೆ ಮಾಡಿತು ಎಂದು ತಿಳಿಸಿದ್ದಾರೆ.

ನಿಗದಿಗಿಂತ ದೂರದಲ್ಲಿ ಇಳಿದಿದ್ದೇ ಅಪಘಾತಕ್ಕೆ ಕಾರಣ?

ಅಮ್ಮನ ಹುಟ್ಟುಹಬ್ಬಕೆ ಸರ್‌ಪ್ರೈಸ್‌ ನೀಡಲು ಬಯಸಿದ್ದ ಕ್ಯಾ. ಸಾಠೆ

ಕಲ್ಲಿಕೋಟೆಯಲ್ಲಿ ದುರಂತ ಸಾವು ಕಂಡಿರುವ ಕ್ಯಾಪ್ಟನ್‌ ದೀಪಕ್‌ ಸಾಠೆ, ಶನಿವಾರವೇ ಮಹಾರಾಷ್ಟ್ರದ ನಾಗ್ಪುರಕ್ಕೆ ಆಗಮಿಸಲು ನಿರ್ಧರಿಸಿದ್ದರು. ಆ ಮೂಲಕ, ಅವರ ಅಮ್ಮನ 84ನೇ ವರ್ಷದ ಅಮ್ಮನ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್‌ ನೀಡಲು ಬಯಸಿದ್ದರು. ಆದರೆ, ಶುಕ್ರವಾರ ಸಂಜೆಯೇ ಕ್ಯಾಪ್ಟನ್‌ ಸಾಠೆ ವಿಮಾನ ದುರುಂತದಲ್ಲಿ ತಮ್ಮನ್ನು ಅಗಲಿದ್ದಾರೆ ಎಂದು ಸಾಠೆ ಅವರ ಸಂಬಂಧಿಕರೊಬ್ಬರು ದುಃಖತಪ್ತರಾಗಿದ್ದಾರೆ.

click me!