ಆಗಸ್ಟಲ್ಲಿ ಕೊರೋನಾ ಕೇಸ್‌: ವಿಶ್ವದಲ್ಲೇ ಭಾರತ ಗರಿಷ್ಠ, ಅಮೆರಿಕ, ಬ್ರೆಜಿಲ್‌ಗಿಂತ ಹೆಚ್ಚು!

By Kannadaprabha NewsFirst Published Aug 9, 2020, 7:32 AM IST
Highlights

ಆಗಸ್ಟಲ್ಲಿ ಕೊರೋನಾ ಕೇಸ್‌: ವಿಶ್ವದಲ್ಲೇ ಭಾರತ ಗರಿಷ್ಠ!| ಮೊದಲ 6 ದಿನದಲ್ಲಿ ಅಮೆರಿಕ, ಬ್ರೆಜಿಲ್‌ಗಿಂತ ಹೆಚ್ಚು

ನವದೆಹಲಿ(ಆ.09): ವಿಶ್ವದಲ್ಲಿ ಅತಿಹೆಚ್ಚು ಕೊರೋನಾ ಸೋಂಕು ಪತ್ತೆಯಾದ ದೇಶಗಳ ಪೈಕಿ ಹಲವು ದಿನಗಳಿಂದ 3ನೇ ಸ್ಥಾನದಲ್ಲಿರುವ ಭಾರತ, ಆಗಸ್ಟ್‌ ತಿಂಗಳಿನ ಮೊದಲ 6 ದಿನಗಳಲ್ಲಿ ದಾಖಲಾದ ಸಂಖ್ಯೆಗಳ ಲೆಕ್ಕಾಚಾರದ ಅನ್ವಯ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಏರಿದೆ. ಈ ಮೂಲಕ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದ ಅಮೆರಿಕ ಮತ್ತು ಬ್ರೆಜಿಲ್‌ ಅನ್ನು ಹಿಂದಿಕ್ಕಿದೆ.

ಆಗಸ್ಟ್‌ ತಿಂಗಳ ಮೊದಲ 6 ದಿನ (ಆ.6ರವರೆಗೆ) ಭಾರತದಲ್ಲಿ 3,28,903 ಕೊರೋನಾ ಪ್ರಕರಣಗಳು ವರದಿ ಆಗಿವೆ. ಇನ್ನು ಕೊರೋನಾದಲ್ಲಿ ವಿಶ್ವದ ನಂ.1 ಸ್ಥಾನದಲ್ಲಿರುವ ಅಮೆರಿಕದಲ್ಲಿ ಇದೇ 6 ದಿನದ ಅವಧಿಯಲ್ಲಿ 3,26,111 ಪ್ರಕರಣಗಳು ಹಾಗೂ 2ನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 2,51,264 ಪ್ರಕರಣಗಳು ವರದಿ ಆಗಿವೆ.

ಇದೇ ವೇಳೆ ಪ್ರಕರಣಗಳು, ಈ ಮೂರೂ ದೇಶಗಳ ಪೈಕಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿದ್ದು ಭಾರತದಲ್ಲೇ ಅತಿ ವೇಗವಾಗಿ ಎಂದೂ ತಿಳಿದುಬಂದಿದೆ. ಅಲ್ಲದೆ ಸೋಂಕಿನ ಪ್ರಗತಿ ದರ ಭಾರತದಲ್ಲಿ ಶೇ.3.1ಕ್ಕೆ ಇದೆ. ಇದು ಅಮೆರಿಕ ಹಾಗೂ ಬ್ರೆಜಿಲ್‌ಗಿಂತ ಹೆಚ್ಚಿನ ವೇಗದ ದರ.

ಆದರೆ, ಸಾವಿನಲ್ಲಿ ಭಾರತವನ್ನು ಅಮೆರಿಕ ಹಾಗೂ ಬ್ರೆಜಿಲ್‌ ಈ ಮೊದಲ 6 ದಿನದಲ್ಲಿ ಮೀರಿಸಿವೆ. ಬ್ರೆಜಿಲ್‌ ಹಾಗೂ ಅಮೆರಿಕದಲ್ಲಿ ಆಗಸ್ಟ್‌ 6ರವರೆಗೆ 6000ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಆದರೆ ಭಾರತದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ 5,075.

ಈವರೆಗೆ ಅಮೆರಿಕದಲ್ಲಿ 50 ಲಕ್ಷ ಸೋಂಕಿತರು ಪತ್ತೆಯಾಗಿದ್ದು, 1.64 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನಲ್ಲಿ 30 ಲಕ್ಷ ಸೋಂಕಿತರು ಪತ್ತೆಯಾಗಿದ್ದು, 1 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 21 ಲಕ್ಷ ಸೋಂಕಿತರು ಪತ್ತೆಯಾಗಿದ್ದು, 43000 ಜನರು ಸಾವನ್ನಪ್ಪಿದ್ದಾರೆ.

click me!