ಕೇಜ್ರಿ ಲಿಕ್ಕರ್‌ ಹಗರಣದ ಕಿಂಗ್‌ಪಿನ್‌, ಸಿಸೋಡಿಯಾ ಕೇವಲ ಆರೋಪಿಯಷ್ಟೇ: ಬಿಜೆಪಿ

By Suvarna NewsFirst Published Aug 21, 2022, 10:01 AM IST
Highlights

ಲಿಕ್ಕರ್‌ ಹಗರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಮುಖ್ಯ ಆರೋಪಿ ಎಂದು ಸಿಬಿಐ ಹೆಸರಿಸಿದ ಬೆನ್ನಲ್ಲೇ ಆಮ್‌ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಲಿಕ್ಕರ್‌ ಹಗರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಮುಖ್ಯ ಆರೋಪಿ ಎಂದು ಸಿಬಿಐ ಹೆಸರಿಸಿದ ಬೆನ್ನಲ್ಲೇ ಆಮ್‌ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, 'ಭ್ರಷ್ಟಾಚಾರದ ವಿರುದ್ಧ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದ ಪಕ್ಷದ ಬಣ್ಣ ಇದೀಗ ದೆಹಲಿಯಿಂದ ಹಿಡಿದು ಪಂಜಾಬ್‌ನವರೆಗೆ ಬೆತ್ತಲಾಗಿದೆ' ಎಂದು ವ್ಯಂಗ್ಯವಾಡಿದೆ. ಅಲ್ಲದೆ, ಮನೀಶ್‌ ಸಿಸೋಡಿಯಾ ಅವರನ್ನು 'ಮನಿ..ಶ್‌..' ಎಂದು ಲೇವಡಿ ಮಾಡಿದೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ, ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, 'ಈ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಎಡಗೈ ಸತ್ಯೇಂದ್ರ ಜೈನ್‌ ಜೈಲು ಪಾಲಾಗಿದ್ದರು. ಇದೀಗ ಅವರ ಬಲಗೈ ಆಗಿರುವ ಸಿಸೋಡಿಯಾ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ದೆಹಲಿ ಲಿಕ್ಕರ್‌ ಹಗರಣದ ಮುಖ್ಯ ಆರೋಪಿ ಸಿಸೋಡಿಯಾ ಆಗಿದ್ದರೂ ಅದರ ಕಿಂಗ್‌ಪಿನ್‌ ಸ್ವತಃ ಕೇಜ್ರಿವಾಲ್‌' ಎಂದು ಆರೋಪಿಸಿದರು.

Latest Videos

ಇದೇ ವೇಳೆ, ಪಕ್ಷದ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಸಿಬಿಐ ಅನ್ನು ಬಳಸಿಕೊಂಡು ಬಿಜೆಪಿ ದಾಳಿ ನಡೆಸಿದೆ ಎಂಬ ಆಪ್‌ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಠಾಕೂರ್‌, ಆಮ್‌ಆದ್ಮಿ ಪಕ್ಷ ಹಲವು ಚುನಾವಣೆಗಳ ವೇಳೆ ದೊಡ್ಡ ದೊಡ್ಡ ಘೋಷಣೆ ಮಾಡಿತ್ತಾದರೂ, ಪ್ರಧಾನಿ ನರೇಂದ್ರ ಮೋದಿ ಎದುರು ನಿಲ್ಲಲಾರದೇ ಹೋಯಿತು. ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಖಾತೆ ತೆಗೆಯಲೂ ಆಗದೇ ಇದ್ದಿದ್ದೂ ಇದಕ್ಕೆ ಉದಾಹರಣೆ. ಮೋದಿ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ 2014ಕ್ಕೆ ಹೋಲಿಸಿದರೆ 2019ರಲ್ಲಿ ಬಿಜೆಪಿ ಹೇಗೆ ಗಣನೀಯ ಪ್ರಗತಿ ತೋರಿತ್ತೋ, ಅದಕ್ಕಿಂತ ಉತ್ತಮ ಪ್ರಗತಿಯನ್ನು 2024ರಲ್ಲಿ ತೋರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿ ಅಬಕಾರಿ ಹಗರಣ, 15 ಆರೋಪಿಗಳ ಪೈಕಿ ಉಪ ಮುಖ್ಯಮಂತ್ರಿ ಸಿಸೋಡಿಯಾ ನಂ.1!

ದೆಹಲಿಯಲ್ಲಿ ನಡೆದಿರುವ ಲಿಕ್ಕರ್‌ ಹಗರಣದ ಬಗ್ಗೆ ಪಕ್ಷದ ನಾಯಕರು ಉತ್ತರ ನೀಡಬೇಕು ಎಂದು ಆಗ್ರಹ ಮಾಡಿದ ಠಾಕೂರ್‌, ಇದು ಉಚಿತ ರೇವ್ಡಿ (ಉಚಿತ ಘೋಷಣೆ) ಮತ್ತು ಬೇವ್ಡೀ (ಕುಡುಕರ) ಸರ್ಕಾರ. ಸಂಪುಟದ ಅನುಮೋದನೆ ಇಲ್ಲದೆಯೇ ಆಪ್‌ ಸರ್ಕಾರ, ಲಿಕ್ಕರ್‌ ಕಂಪನಿಗಳಿಗೆ 144 ಕೋಟಿ ರು. ಮರಳಿಸಿದ್ದು ಇದಕ್ಕೆ ಸಾಕ್ಷಿ’ ಎಂದರು. ಇದೇ ವೇಳೆ ಮನೀಶ್‌ ಸಿಸೋಡಿಯಾ ಅವರನ್ನು 'ಮನಿ ಶ್‌..' ಎಂದು ವ್ಯಂಗ್ಯವಾಡಿದ ಠಾಕೂರ್‌, ದೆಹಲಿ ಉಪಮುಖ್ಯಮಂತ್ರಿ ಹಣ ಮಾಡಿಕೊಳ್ಳುತ್ತಾರೆ ಮತ್ತು ಮೌನ ವಹಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಸಿಸೋಡಿಯಾ ಬಂಧನ ಆದರೆ ದಿಲ್ಲಿ ಸರ್ಕಾರಕ್ಕೆ ಕುತ್ತು?

ಈ ಮೊದಲೇ ಅಂದಾಜಿಸಿದಂತೆ ಕೇಂದ್ರೀಯ ತನಿಖಾ ಏಜೆನ್ಸಿಗಳಿಂದ ಈಗಾಗಲೇ ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮನೆಯ ಮೇಲೆ ದಾಳಿ ನಡೆದಿದೆ. ಈ ಪ್ರಕರಣದಲ್ಲಿ ಸಿಸೋಡಿಯಾ ಬಂಧನವಾದರೆ ದೆಹಲಿ ಸರ್ಕಾರಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ಏಕೆಂದರೆ ಉಪಮುಖ್ಯಮಂತ್ರಿ ಆಗಿರುವ ಸಿಸೋಡಿಯಾ ಅವರ ಕೈಯಲ್ಲಿ 18 ಪ್ರಮುಖ ಖಾತೆಗಳಿವೆ. ಗೃಹ ಖಾತೆ, ಹಣಕಾಸು, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ ಇಲಾಖೆ, ಕೈಗಾರಿಕೆ, ಪ್ರವಾಸೋದ್ಯಮ ಮೊದಲಾದ ಮಹತ್ವದ ಖಾತೆಗಳನ್ನು ಮನೀಶ್‌ ನಿರ್ವಹಿಸುತ್ತಿದ್ದಾರೆ.

ಸಿಬಿಐ ತನಿಖೆ ಭೀತಿ; ಹೊಸ ಮದ್ಯ ನೀತಿ ಕೈಬಿಟ್ಟ ದೆಹಲಿ ಸರ್ಕಾರ!

ಸಚಿವ ಸತ್ಯೇಂದ್ರ ಜೈನ್‌ ಬಂಧನದ ಬಳಿಕ ಅವರ ಅಡಿಯಲ್ಲಿದ್ದ ನೀರಾವರಿ ಹಾಗೂ ನಗರಾಭಿವೃದ್ಧಿ ಖಾತೆಗಳೂ ಪ್ರಸ್ತುತ ಮನೀಶ್‌ ಕೈಯಲ್ಲಿವೆ. ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಈಗ ಹೆಚ್ಚಾಗಿ ದಿಲ್ಲಿಯ ಹೊಣೆಯನ್ನು ಸಿಸೋಡಿಯಾಗೆ ಬಿಟ್ಟು, ಅನ್ಯರಾಜ್ಯಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಮುಂದೆ ಕೇಜ್ರಿವಾಲ್‌ ಪಂಜಾಬ್‌ ಮುಖ್ಯಮಂತ್ರಿ ಆಗಬಹುದು ಎಂಬ ಊಹಾಪೋಹ ಕೂಡ ಇವೆ. ಹೀಗಿದ್ದಾಗ ಕೇಜ್ರಿವಾಲ್‌ ಉತ್ತರಾಧಿಕಾರಿ ಸಿಸೋಡಿಯಾ ಎಂಬ ಗುಸುಗುಸು ಕೂಡ ಇದೆ. ಹೀಗಾಗಿ ಸಿಸೋಡಿಯಾ ಬಂಧನವಾದರೆ ದೆಹಲಿ ಸರ್ಕಾರಕ್ಕೆ ಕುತ್ತು ಬರಬಹುದು ಎಂಬುದು ಆಪ್‌ನ ಆತಂಕ ಎಂದು ಮಾಧ್ಯಮ ವರದಿಗಳು ಹೇಳಿವೆ.

ಕೇಜ್ರಿವಾಲ್‌ ಸಹ ಶೀಘ್ರದಲ್ಲೇ ಬಂಧನ: ಬಿಜೆಪಿ

ಅಬಕಾರಿ ನೀತಿ ಜಾರಿಯ ವೇಳೆ ಗೋಲ್‌ಮಾಲ್‌ ನಡೆದಿದೆ ಎಂಬ ಕಾರಣಕ್ಕೆ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಬಂಧನ ಬೆನ್ನಲ್ಲೇ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸಹ ಬಂಧನಕ್ಕೊಳಗಾಗಲಿದ್ದಾರೆ ಎಂದು ಬಿಜೆಪಿಯ ನಾಯಕರು ಹೇಳಿದ್ದಾರೆ. ಹೊಸ ಅಬಕಾರಿ ನೀತಿ ಜಾರಿಯಿಂದ ರಾಜ್ಯಕ್ಕಾದ ನಷ್ಟದ ಕುರಿತಾಗಿ ಕೇಜ್ರಿವಾಲ್‌ ಒಂದೇ ಒಂದು ಮಾತನ್ನೂ ಸಹ ಆಡಿಲ್ಲ ಎಂದು ಬಿಜೆಪಿ ನಾಯಕ ಅನುರಾಗ್‌ ಠಾಕೂರ್‌ ಆರೋಪಿಸಿದ್ದಾರೆ. ಅಬಕಾರಿ ನೀತಿಯಲ್ಲಿ ನಡೆದಿರುವ ಗೋಲ್‌ ಮಾಲ್‌ನಲ್ಲಿ ಇಬ್ಬರು ನಾಯಕರ ಪಾತ್ರ ಶೀಘ್ರದಲ್ಲೇ ಬಯಲಾಗಲಿದೆ. ಕೇಜ್ರಿವಾಲ್‌ ಶೀಘ್ರದಲ್ಲೇ ಬಂಧನಕ್ಕೊಳಪಡಲಿದ್ದಾರೆ ಎಂದು ಬಿಜೆಪಿ ಸಂಸದರಾದ ಮನೋಜ್‌ ತಿವಾರಿ, ಗೌತಮ್‌ ಗಂಭೀರ್‌ ಮತ್ತು ಪರ್ವೇಶ್‌ ವರ್ಮಾ ಹೇಳಿದ್ದಾರೆ.

ಬಿಜೆಪಿ, ಮೋದಿ ವಿರುದ್ಧ ದಿಲ್ಲಿ ಡಿಸಿಎಂ ವಾಗ್ದಾಳಿ

ಅಬಕಾರಿ ಹಗರಣದಲ್ಲಿ ತಮ್ಮನ್ನು ಬಂಧಿಸಿರುವುದರ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಜನಪ್ರಿಯತೆ ಸಹಿಸಲಾಗದ ಬಿಜೆಪಿ ಅಸೂಯೆ ಇದೆ ಎಂದು ಆರೋಪಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, 2024ರ ಲೋಕಸಭಾ ಚುನಾವಣೆ ಕೇಜ್ರಿವಾಲ್‌ ವರ್ಸಸ್‌ ನರೇಂದ್ರ ಮೋದಿ ಆಗಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಇನ್ನು 3-4 ದಿನದಲ್ಲಿ ನಾನು ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಲಿದ್ದೇನೆ ಎಂದೂ ಅವರು ಸೂಚ್ಯವಾಗಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ದೆಹಲಿಯಲ್ಲಿ ಅಬಕಾರಿ ನೀತಿಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೆ ತರಲಾಗಿದೆ ಮತ್ತು ಅದರಲ್ಲಿ ಯಾವುದೇ ಹಗರಣವೂ ನಡೆದಿಲ್ಲ. ಆದರೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಗಮನ ಸೆಳೆದಿರುವ ಕೇಜ್ರಿವಾಲ್‌ ಸರ್ಕಾರದ ಉತ್ತಮ ಕೆಲಸಗಳನ್ನು ತಡೆಯಲು ಬಿಜೆಪಿ ಬಯಸಿದೆ ಎಂದು ಕಿಡಿಕಾರಿದರು.

ಕೇಜ್ರಿವಾಲ್‌ ಅವರು ದೇಶದ ಜನರ ಪ್ರೀತಿಗಳಿಸಿಕೊಂಡು, ಹೊಸ ಪರ್ಯಾಯ ರಾಷ್ಟ್ರೀಯ ಅವಕಾಶವಾಗಿ ಹೊರಹೊಮ್ಮಿರುವುದನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ವಾಸ್ತವವಾಗಿ ಬಿಜೆಪಿಗೆ ಹಗರಣದ ಬಗ್ಗೆ ಯಾವುದೇ ಚಿಂತೆ ಇಲ್ಲ. ಅವರು ಕೇಜ್ರಿವಾಲ್‌ ಜನಪ್ರಿಯತೆ ನೋಡಿ ಹೆದರಿದ್ದಾರೆ. ಅದರಲ್ಲೂ ಪಂಜಾಬ್‌ ವಿಧಾನಸಭಾ ಚುನಾವಣೆಯ ಗೆಲುವಿನ ಬಳಿಕ ಅವರ ಆತಂಕ ಇನ್ನಷ್ಟುಹೆಚ್ಚಾಗಿದೆ’ ಎಂದು ಹೇಳಿದರು. ಈ ಕಾರಣಕ್ಕಾಗಿಯೇ ಮೊದಲು ಅವರು ಸತ್ಯೇಂದ್ರ ಜೈನ್‌ ಅವರನ್ನು ಬಂಧಿಸಿದರು ಮತ್ತು ಇದೀಗ ನನ್ನನ್ನು ಬಂಧಿಸಿದರು. ಇದು ದೇಶದ ಜನಮತ ಪಡೆದು ಆಯ್ಕೆಯಾಗಿ ಪ್ರಧಾನಿ ಹುದ್ದೆ ಏರಿದ ವ್ಯಕ್ತಿಗೆ ಘನತೆ ತರುವ ಕೆಲಸವಲ್ಲ. ಕೇಜ್ರಿವಾಲ್‌ ಮತ್ತು ಮೋದಿಗೂ ಇರುವ ವ್ಯತ್ಯಾಸವೆಂದರೆ, ಕೇಜ್ರಿವಾಲ್‌ ಬಡವರ ಪರ ಇದ್ದರೆ, ಮೋದಿ ಕೆಲವೇ ಸ್ನೇಹಿತರ ಪರ ಇದ್ದಾರೆ ಎಂದು ಆರೋಪಿಸಿದರು.
 

click me!