ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರಿಡಲು ಒಪ್ಪಿಗೆ..!

By BK AshwinFirst Published Aug 20, 2022, 11:33 PM IST
Highlights

ಚಂಡೀಗಢ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಭಗತ್ ಸಿಂಗ್ ಹೆಸರಿಡಲು ಪಂಜಾಬ್ ಹಾಗೂ ಹರ್ಯಾಣ ಸರ್ಕಾರಗಳು ಒಪ್ಪಿಗೆ ನೀಡಿವೆ. ಈ ಸಂಬಂಧ ಎರಡೂ ರಾಜ್ಯಗಳು ಅಧಿಕೃತ ಮಾಹಿತಿ ನೀಡಿವೆ. 

ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹೆಸರಿಡಲು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಶನಿವಾರ ಒಪ್ಪಿಗೆ ಸೂಚಿಸಿವೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣ ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಈ ವಿಷಯದ ಬಗ್ಗೆ ಸಭೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಪಂಜಾಬ್ ಹಾಗೂ ಹರಿಯಾಣ ಸರ್ಕಾರ ಮಾಹಿತಿಯನ್ನೂ ನೀಡಿದೆ

ಈ ಕುರಿತು ಟ್ವೀಟ್ ಮಾಡಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌, "ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಜೀ ಹೆಸರಿಡಲು ಒಪ್ಪಿಗೆ ಸೂಚಿಸಿವೆ. ಇಂದು ಈ ವಿಚಾರವಾಗಿ ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರೊಂದಿಗೆ ಸಭೆ ನಡೆಸಿದ್ದೇವೆ" ಎಂದು ಹೇಳಿದ್ದಾರೆ. ಇನ್ನೊಂದೆಡೆ,  'ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಹೆಸರಿಸಲು ದುಷ್ಯಂತ್ ಚೌತಾಲಾ ಮತ್ತು ಭಗವಂತ್ ಮಾನ್ ಒಪ್ಪಿಕೊಂಡಿದ್ದಾರೆ ಎಂದು ಹರಿಯಾಣ ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ. 

ಭಗತ್‌ ಸಿಂಗ್‌ ಭಯೋತ್ಪಾದಕ, ಪಂಜಾಬ್‌ ಸಂಸದನ ವಿವಾದಿತ ಹೇಳಿಕೆ!

ಶಹೀದ್ ಭಗತ್ ಸಿಂಗ್ ಪ್ರತಿ ಪೀಳಿಗೆಯ ಯುವಕರನ್ನು ಪ್ರೇರೇಪಿಸಿದ ಅಂತಹ ಹುತಾತ್ಮರಲ್ಲಿ ಒಬ್ಬರು ಎಂದು ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಹೇಳಿದರು. ಹಾಗೂ, ವಿಮಾನ ನಿಲ್ದಾಣದ ನಿರ್ಮಾಣ ಮತ್ತು ಆಧುನೀಕರಣದಲ್ಲಿ ಎರಡೂ ರಾಜ್ಯಗಳ ಮತ್ತು ಚಂಡೀಗಢ ಆಡಳಿತ ಸಾಮೂಹಿಕ ಕೊಡುಗೆಯಲ್ಲಿ ತೊಡಗಿಸಿಕೊಂಡಿದೆ ಎಂದೂ ಅವರು ಹೇಳಿದರು. ಇನ್ನು, ಈ ವಿಮಾನ ನಿಲ್ದಾಣದ ನಿರ್ಮಾಣದಲ್ಲಿ ಹರಿಯಾಣ ಸಮಾನ ಪಾಲು ಹೊಂದಿರುವುದರಿಂದ ನಗರದ ಪಂಚಕುಲದ ಹೆಸರನ್ನೂ ಅದರ ಹೆಸರಿನೊಂದಿಗೆ ಸೇರಿಸಬೇಕು, ಹಾಗೂ ಈ ಸಂಬಂಧ ಪಂಜಾಬ್ ಸರ್ಕಾರಕ್ಕೆ ಹರಿಯಾಣ ಸರ್ಕಾರದ ಪರವಾಗಿ ಶಿಫಾರಸನ್ನು ಕಳುಹಿಸಿದ್ದೇನೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೂ ಇದೇ ಮನವಿಯನ್ನು ಕಳುಹಿಸಲಾಗುವುದು ಎಂದು ಸಹ ಹರಿಯಾಣ ಉಪ ಮುಖ್ಯಮಂತ್ರಿ ಚೌತಾಲಾ ಹೇಳಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಚಂಡೀಗಢ ವಿಮಾನ ನಿಲ್ದಾಣವು ಉತ್ತರ ಭಾರತದ ಪ್ರಮುಖ ವಿಮಾನ ನಿಲ್ದಾಣವಾಗಲಿದೆ ಎಂದೂ ಅವರು ಹೇಳಿದರು.

ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಹಿಂದೆ ಹೆಸರಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಪಂಜಾಬ್ ಸರ್ಕಾರವು 2017 ರಲ್ಲಿ ಈ ವಿಮಾನ ನಿಲ್ದಾಣವನ್ನು "ಶಹೀದ್-ಎ-ಅಜಮ್ ಸರ್ದಾರ್ ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೊಹಾಲಿ" ಎಂದು ಹೆಸರಿಸಬೇಕೆಂದು ಒತ್ತಾಯಿಸಿತ್ತು. ಆದರೆ, ಹರ್ಯಾಣ ಸರ್ಕಾರ ಇದಕ್ಕೆ ತಗಾದೆ ತೆಗೆದಿತ್ತು. ಭಗತ್ ಸಿಂಗ್ ಹೆಸರನ್ನು ಬಳಸುವುದರ ಬಗ್ಗೆ ಹರಿಯಾಣ ಸರ್ಕಾರವು ಯಾವುದೇ ಆಕ್ಷೇಪಣೆಯನ್ನು ಹೊಂದಿಲ್ಲ. ಆದರೆ ವಿಮಾನ ನಿಲ್ದಾಣದ ಹೆಸರಿನಲ್ಲಿ 'ಮೊಹಾಲಿ' ಅನ್ನು ಬಳಸುವುದರ ಬಗ್ಗೆ ಅದು ತನ್ನ ವಿರೋಧ ವ್ಯಕ್ತಪಡಿಸಿತ್ತು.

ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ಪಂಜಾಬ್‌ನ ಮೊಹಾಲಿ ಪಟ್ಟಣದಲ್ಲಿದೆ. ಈ ಹಿನ್ನೆಲೆ ಆ ವಿಮಾನ ನಿಲ್ದಾಣಕ್ಕೆ ಮೊಹಾಲಿ ಹೆಸರು ಸಹ ಸೇರಿಸಲು ಪಂಜಾಬ್‌ ಸರ್ಕಾರ ಒತ್ತಾಯಿಸಿತ್ತು ಎಂದು ಹೇಳಲಾಗಿದೆ. 485 ಕೋಟಿ ರೂ. ವೆಚ್ಚದ ವಿಮಾನ ನಿಲ್ದಾಣ ಯೋಜನೆಯು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮತ್ತು ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳ ಜಂಟಿ ಉದ್ಯಮವಾಗಿದೆ.

 ಭಗತ್ ಸಿಂಗ್ ಪಾಠ ಕೈಬಿಟ್ಟಿರುವುದು ನಾಚಿಕೆಗೇಡು Arvind Kejriwal ಕಿಡಿ

ಸದ್ಯ, ಭಗತ್ ಸಿಂಗ್ ಹೆಸರು ಸೇರಿಸಲು ಎರಡು ಸರ್ಕಾರಗಳು ಒಪ್ಪಿದರೂ, ಪಂಚಕುಲ ಎಂಬ ಹೆಸರನ್ನು ಸಹ ಸೇರಿಸಬೇಕೆಂದು ಹರ್ಯಾಣ ಸರ್ಕಾರ ಮನವಿ ಮಾಡಿದ್ದು, ಇದಕ್ಕೆ ಪಂಜಾಬ್‌ ಸರ್ಕಾರ ಒಪ್ಪಿಗೆ ನೀಡುತ್ತೋ ಹಾಗೂ ಕೇಂದ್ರ ಸರ್ಕಾರ ಯಾವ ಹೆಸರನ್ನು ಅಂತಿಮವಾಗಿ ನಿರ್ಧರಿಸಲಿದೆಯೋ ಎಂಬುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

click me!