ತಮಿಳುನಾಡು ಭಾರಿ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿದ್ದರೂ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ಕರ್ನಾಟಕದ ಕಾವೇರಿ ನದಿಯಿಂದ 14 ಟಿಎಂಸಿ ನೀರು ಬಿಡಬೇಕು ಎಂದು ತಮಿಳುನಾಡು ಆಗ್ರಹಿಸಿದೆ.
ನವದೆಹಲಿ (ಡಿ.19): ತಮಿಳುನಾಡಿನಲ್ಲಿ ಕಳೆದ 15 ದಿನಗಳಿಂದಲೂ ಈಶಾನ್ಯ ಮಾನ್ಸೂನ್ ಮಾರುತದಿಂದ ಭಾರಿ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಪ್ರವಾಹವೇ ಸೃಷ್ಟಿಯಾಗಿದೆ. ಹೀಗಿದ್ದರೂ, ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕದಿಂದ ತಮಿಳುನಾಡಿಗೆ ಬಾಕಿ 7 ಟಿಎಂಸಿ ಸೇರಿದಂತೆ ಒಟ್ಟಾರೆ 14 ಟಿಎಂಸಿ ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಆಗ್ರಹ ಮಾಡಿದೆ.
ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆ ರಚನೆ ಮಾಡಲಾಗಿರುವ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ವತಿಯಿಂದ ಮಂಗಳವಾರ ಎರಡೂ ರಾಜ್ಯಗಳ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಲಾಗಿದೆ. ಈ ವೇಳೆ ತಮಿಳುನಾಡು ತಮಗೆ ಕರ್ನಾಟಕದಿಂದ 14 ಟಿಎಂಸಿ ನೀರು ಬಿಡಬೇಕು ಎಂದು ಆಗ್ರಹಿಸಿದೆ. ಆದರೆ, ಈಗ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ವಿವಿಧ ಪ್ರದೇಶಗಳು ಪ್ರವಾಹ ಪೀಡಿತವಾಗಿವೆ. ಆದರೂ ತಮಿಳುನಾಡಿಗೆ ಕಾವೇರಿ ನೀರು ಬಿಡಲೇಬೇಕು ಎಂದು ಆಗ್ರಹಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಗೆ ತಮಿಳುನಾಡು ತತ್ತರ: 4 ಜಿಲ್ಲೆಗಳಲ್ಲಿ ಭಾರಿ ಅನಾಹುತ; ಹಲವು ಪ್ರದೇಶ ಪೂರ್ಣ ಜಲಾವೃತ
ತಮಿಳುನಾಡಲ್ಲಿ ಭಾರಿ ಮಳೆ: ಹಲವು ರೈಲುಗಳು ಸ್ಥಗಿತ; ರೈಲ್ವೆ ನಿಲ್ದಾಣದಲ್ಲೇ ಸಿಲುಕಿದ ನೂರಾರು ಪ್ರಯಾಣಿಕರು
CWRC ಶಿಫಾರಸು: ಎರೆಡೂ ರಾಜ್ಯಗಳ ವಾದವನ್ನು ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ಡಿಸೆಂಬರ್ 2023ರ ಬಾಕಿ ಅವಧಿಗೆ ಹಾಗೂ ಜನವರಿ 2024ರ ಪೂರ್ಣ ಅವಧಿಗೆ ಕರ್ನಾಟಕವು ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ CWDTಯ ಆದೇಶದ ಪ್ರಕಾರ ನಿಗದಿತ ಪ್ರಮಾಣದ ನಿರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕೆಂದು (ಅಂದರೆ ಡಿಸೆಂಬರ್ 2023ರ ಬಾಕಿ ಅವಧಿಗೆ ಪ್ರತಿ ದಿನ 3128 ಕ್ಯೂಸೆಕ್ಸ್ ಮತ್ತು ಜನವರಿ 2024ರ ಪೂರ್ಣ ಅವಧಿಗೆ ಪ್ರತಿ ದಿನ 1030 ಕ್ಯೂಸೆಕ್ಸ್ ನೀರು ಹರಿವನ್ನು ಖಚಿತಪಡಿಸಿಕೊಳ್ಳಬೇಕು) CWRC ಯು ಶಿಫಾರಸು ಮಾಡಿದೆ.