
ಅಯೋಧ್ಯೆ (ಡಿಸೆಂಬರ್ 19, 2023): ಇಲ್ಲಿನ ಭವ್ಯ ರಾಮಮಂದಿರದಲ್ಲಿ ಜನವರಿ 22ರಂದು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿರುವ ರಾಮನ ವಿಗ್ರಹ ಕುರಿತು ಜನವರಿ ಮೊದಲ ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ‘ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಹಾಲಿ ಮೂರು ವಿಗ್ರಹಗಳನ್ನು ಕೆತ್ತಲಾಗುತ್ತಿದೆ. ಈ ಪೈಕಿ ಗರ್ಭಗುಡಿಯಲ್ಲಿ ಕೂರಿಸುವ ಬಾಲರಾಮನ ವಿಗ್ರಹ ಯಾವುದಾಗಿರಲಿದೆ ಎಂಬುದನ್ನು ಉನ್ನತ ಮಟ್ಟದ ಸಮಿತಿ, ಜನವರಿ ಮೊದಲ ವಾರದಲ್ಲಿ ಸಭೆ ಸೇರಿ ನಿರ್ಧರಿಸಲಿದೆ ಎಂದು ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ಮೂರು ವಿಗ್ರಹಗಳ ಪೈಕಿ ಮೈಸೂರಿನ ಅರುಣ್ ಯೋಗಿರಾಜ್ ಕರ್ನಾಟಕದ ಕಪ್ಪುಶಿಲೆಯಲ್ಲಿ 5 ಅಡಿ ಎತ್ತರದ ಬಾಲರಾಮನ ಪ್ರತಿಮೆ ಕೆತ್ತಿದ್ದಾರೆ. ಇನ್ನು ಇಡಗುಂಜಿಯ ಗಣೇಶ್ ಭಟ್ ಕೂಡಾ ಮತ್ತೊಂದು ಬಾಲರಾಮನ ವಿಗ್ರಹ ಕೆತ್ತಿದ್ದಾರೆ. ಮತ್ತೊಂದೆಡೆ ರಾಜಸ್ಥಾನದ ಶಿಲ್ಪಿಯೊಬ್ಬರು ಬಿಳಿಯ ಬಣ್ಣದ ಶಿಲೆಯಲ್ಲಿ ಬಾಲರಾಮನ ವಿಗ್ರಹ ಕೆತ್ತಿದ್ದಾರೆ. ಈ ಪೈಕಿ ಅತ್ಯಂತ ಸುಂದರ ಮತ್ತು ಸೂಕ್ತ ಮೂರ್ತಿಯನ್ನು ದೇಗುಲದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಉಳಿದ ಎರಡು ವಿಗ್ರಹಗಳನ್ನು ಇತರೆಡೆ ಪ್ರತಿಷ್ಠಾಪಿಸಲಾಗುವುದು.
ಇದನ್ನು ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕೋಡಿಮಠದ ಶ್ರೀಗೆ ಆಹ್ವಾನ!
ಮಂದಿರ ಉದ್ಘಾಟನೆಗೆ ಅಡ್ವಾಣಿ, ಜೋಶಿ ಬರಲ್ಲ:
ಅಯೋಧ್ಯೆ ರಾಮ ಮಂದಿರ ಹೋರಾಟದ ಮುಂಚೂಣಿ ನಾಯಕರಾದ ಎಲ್. ಕೆ. ಅಡ್ವಾಣಿ (96) ಮತ್ತು ಮುರಳಿ ಮನೋಹರ್ ಜೋಶಿ (90) 2024 ರ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ. ಕಾರ್ಯಕ್ರಮದ ದಿನದ ಜನಸಂದಣಿ ಮತ್ತು ಇಬ್ಬರ ವಯಸ್ಸು ಗಮನದಲ್ಲಿಟ್ಟುಕೊಂಡು, ಇಬ್ಬರಿಗೂ ಅಂದು ಬರದಂತೆ ರಾಮ ಮಂದಿರ ಟ್ರಸ್ಟ್ ಸಲಹ ನೀಡಿದೆ. ಅದನ್ನು ಇಬ್ಬರೂ ಒಪ್ಪಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಅಯೋಧ್ಯೆ ಮಸೀದಿಗೆ ಶಿಲಾನ್ಯಾಸ ಮಾಡಲಿದ್ದಾರೆ ಮೆಕ್ಕಾದ ಇಮಾಮ್, ಇಲ್ಲಿರಲಿದೆ ವಿಶ್ವದ ಅತಿದೊಡ್ಡ ಕುರಾನ್
ಇದನ್ನೂ ಓದಿ: ಕನ್ನಡಿಗರು ಕೆತ್ತಿದ ರಾಮಲಲ್ಲಾ ವಿಗ್ರಹ ಆಯ್ಕೆ ಆಗುತ್ತಾ? ಇಂದು ಅಂತಿಮ ತೀರ್ಮಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ