HAL Relocate Bid: 10,000 ಎಕರೆ ಜಾಗ ನೀಡ್ತೇವೆ HAL ಆಂಧ್ರಾಕ್ಕೆ ಸ್ಥಳಾಂತರ ಮಾಡಿ; ಚಂದ್ರಬಾಬು ನಾಯ್ಡು ಬೇಡಿಕೆಗೆ ಕರ್ನಾಟಕ ತೀವ್ರ ವಿರೋಧ!

Kannadaprabha News   | Kannada Prabha
Published : May 27, 2025, 05:30 AM ISTUpdated : May 27, 2025, 01:19 PM IST
HAL

ಸಾರಾಂಶ

ಆಂಧ್ರಪ್ರದೇಶಕ್ಕೆ ಎಚ್‌ಎಎಲ್‌ ಸ್ಥಳಾಂತರಿಸುವಂತೆ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್‌ ಸೇರಿದಂತೆ ಹಲವರು ಈ ಕ್ರಮವನ್ನು ಖಂಡಿಸಿದ್ದಾರೆ.

ಬೆಂಗಳೂರು (ಮೇ.27) : ಆಂಧ್ರಪ್ರದೇಶಕ್ಕೆ ಎಚ್‌ಎಎಲ್‌ ವಿಮಾನ ತಯಾರಿಕೆ ಘಟಕ ಸ್ಥಳಾಂತರಿಸಬೇಕೆಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮನವಿ ಸರಿಯಲ್ಲ. ಬೇಕಿದ್ದರೆ ಅವರ ರಾಜ್ಯದಲ್ಲಿ ಎಚ್‌ಎಎಲ್‌ ಘಟಕ ಸ್ಥಾಪಿಸಲು ಮನವಿ ಮಾಡಿಕೊಳ್ಳಲಿ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಈ ನಡುವೆ, ಯಾವುದೋ ರಾಜ್ಯದ ಮುಖ್ಯಮಂತ್ರಿ ಮನವಿ ಮಾಡಿದ ಕೂಡಲೇ ಇಲ್ಲಿನ ಸಂಸ್ಥೆಯನ್ನು ಸ್ಥಳಾಂತರಿಸಲಾಗದು. ಕೇಂದ್ರ ಸರ್ಕಾರ ಆ ಬಗ್ಗೆ ತೀರ್ಮಾನ ಮಾಡುವುದು ಆಟವಾಡಿದಂತಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಕೂಡ ವಿರೋಧಿಸಿದ್ದಾರೆ. ಬಿಜೆಪಿ ಸಂಸದ ಗೋವಿಂದ ಕಾರಜೋಳ ಕೂಡ ನಾಯ್ಡು ನಡೆಗೆ ಆಕ್ಷೇಪಿಸಿದ್ದಾರೆ.

ಚಂದ್ರಬಾಬು ಲಾಬಿಗೆ ವಿರೋಧ:

ಆಂಧ್ರಪ್ರದೇಶಕ್ಕೆ ಎಚ್‌ಎಎಲ್‌ ಸ್ಥಳಾಂತರಿಸುವಂತೆ ನೀತಿ ಆಯೋಗದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರೆ. ಚಂದ್ರಬಾಬು ನಾಯ್ಡು ಅವರ ಈ ಮನವಿಗೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಂ.ಬಿ. ಪಾಟೀಲ್‌, ಚಂದ್ರಬಾಬು ನಾಯ್ಡು ತಮ್ಮಲ್ಲಿ ಉದ್ದಿಮೆ ಬೆಳೆಸಲು ಎಲ್ಲಿ ಬೇಕಾದರೂ ಭೂಮಿ ಕೊಡಲಿ. ಅದನ್ನು ಬಿಟ್ಟು ನಮ್ಮಲ್ಲಿರುವ ಉದ್ಯಮಗಳನ್ನು ಎಳೆದುಕೊಂಡು ಹೋಗುವ ಆಲೋಚನೆ ಅವರು ಮಾಡಲಾರರು ಎಂದು ಭಾವಿಸುತ್ತೇನೆ. ಅವರಿಗೆ ವ್ಯವಸ್ಥೆಯ ಕುರಿತು ಚೆನ್ನಾಗಿ ಅರಿವಿದೆ. ಅವರು ತಮ್ಮಲ್ಲೂ ಎಚ್‌ಎಎಲ್‌ ಘಟಕ ಸ್ಥಾಪಿಸುವಂತೆ ಮನವಿ ಮಾಡಿದ್ದರೆ ಅದು ತಪ್ಪಲ್ಲ. ಆದರೆ, ಎಚ್‌ಎಎಲ್‌ ಘಟಕವನ್ನೇ ಸ್ಥಳಾಂತರಿಸುವಂತೆ ಕೇಳುವುದು ಮಾತ್ರ ಸರಿಯಲ್ಲ ಎಂದರು.

ಡಿಫೆನ್ಸ್‌ ಕಾರಿಡಾರ್‌ಗಾಗಿ ರಕ್ಷಣಾ ಸಚಿವರಿಗೆ ಮನವಿ

ದೇಶದ ರಕ್ಷಣಾ ವಹಿವಾಟಿನಲ್ಲಿ ಕರ್ನಾಟಕ ಶೇ. 65ರಷ್ಟು ಕೊಡುಗೆ ನೀಡುತ್ತಿದೆ. ಜಾಗತಿಕವಾಗಿ ತೃತೀಯ ಸ್ಥಾನದಲ್ಲಿದೆ. ಹೀಗಾಗಿ ಉತ್ತರ ಪ್ರದೇಶ ಮತ್ತು ತಮಿಳುನಾಡಿಗೆ ನೀಡಿರುವ ಮಾದರಿಯಲ್ಲಿಯೇ ರಾಜ್ಯಕ್ಕೆ ಡಿಫೆನ್ಸ್‌ ಕಾರಿಡಾರ್‌ ನೀಡಬೇಕು. ಅದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಈ ವೇಳೆ ರಾಜ್ಯದ ಕೇಂದ್ರ ಸಚಿವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಕರೆದುಕೊಂಡು ಹೋಗುತ್ತೇನೆ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ಎಚ್‌ಎಎಲ್‌ ಸ್ಥಳಾಂತರ ಮಾಡಲಾಗದು: ಡಿ.ಕೆ. ಸುರೇಶ್‌

ಚಂದ್ರಬಾಬು ನಾಯ್ಡು ಮನವಿಗೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ. ಸುರೇಶ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಎಚ್‌ಎಎಲ್‌ ಕಳೆದ 50 ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನೂ ಇಲ್ಲಿ ಮಾಡಲಾಗಿದೆ. ಅತ್ಯುತ್ತಮ ಹೆಲಿಕಾಪ್ಟರ್‌ ತಯಾರಿಸಲಾಗುತ್ತಿದೆ. ಇಲ್ಲಿನ ಪರಿಸರ, ತಂತ್ರಜ್ಞಾನ ಎಲ್ಲವೂ ಎಚ್‌ಎಎಲ್‌ ಕಾರ್ಯನಿರ್ವಹಣೆಗೆ ಪೂರಕವಾಗಿದೆ. ಹೀಗಿರುವಾಗ ಯಾವುದೋ ರಾಜ್ಯದ ಮುಖ್ಯಮಂತ್ರಿ ಮನವಿ ಮಾಡಿದ ಕೂಡಲೇ ಇಲ್ಲಿನ ಸಂಸ್ಥೆಯನ್ನು ಸ್ಥಳಾಂತರಿಸಲಾಗದು. ಕೇಂದ್ರ ಸರ್ಕಾರ ಆ ಬಗ್ಗೆ ತೀರ್ಮಾನ ಮಾಡುವುದು ಆಟವಾಡಿದಂತಲ್ಲ. ಎಚ್‌ಎಎಲ್‌, ಬಿಎಚ್‌ಇಎಲ್‌, ಬಿಇಎಲ್‌ ಸೇರಿದಂತೆ ಹಲವು ಸಂಸ್ಥೆಗಳು ಬೆಂಗಳೂರಿನಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿವೆ ಎಂದರು.

ಚಂದ್ರಬಾಬು ತಮ್ಮಲ್ಲಿ ಪ್ರತ್ಯೇಕ ಎಚ್‌ಎಎಲ್‌ ಘಟಕ ಸ್ಥಾಪನೆಗೆ ಭೂಮಿ ಕೊಡಲಿ. ಅದನ್ನು ಬಿಟ್ಟು ನಮ್ಮಲ್ಲಿರುವ ಉದ್ಯಮ ಎಳೆದೊಯ್ಯಯವ ಯೋಚನೆ ಮಾಡಲಾರರು.

- ಎಂ.ಬಿ. ಪಾಟೀಲ, ಕೈಗಾರಿಕಾ ಸಚಿವ

ಮೋದಿ ಅಧ್ಯಕ್ಷತೆಯ ನೀತಿ ಆಯೋಗ ಸಭೆಗೆ ಸಿದ್ದು ಹೋಗಿರಲಿಲ್ಲ. ಇಂಥ ನಡೆಯಿಂದಲೇ ಎಚ್ಎಎಲ್ ಫ್ಯಾಕ್ಟ್ರಿ ಆಂಧ್ರ ಪಾಲಾಗುವ ಭೀತಿಯಿದೆ. ಹೀಗಾಗಬಾರದು.

- ಗೋವಿಂದ ಕಾರಜೋಳ, ಬಿಜೆಪಿ ಸಂಸದ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ