
ನವದೆಹಲಿ (ಮೇ.27): ಭೂಕಂಪ, ಭಾರೀ ಮಳೆ, ಭಾರೀ ಉಷ್ಣಮಾರುತ, ಬಿರುಗಾಳಿ ಪ್ರತಿವರ್ಷ ಸಾವಿರಾರು ಜನರನ್ನು ಬಲಿ ಪಡೆಯುತ್ತಿರುವ ಹೊತ್ತಿನಲ್ಲೇ ಗ್ರಾಮ ಪಂಚಾಯತ್ ವ್ಯಾಪ್ತಿಗೂ ಪ್ರತ್ಯೇಕ ಹವಾಮಾನ ಮುನ್ಸೂಚನೆ ನೀಡಬಲ್ಲ, ವಿಶ್ವದಲ್ಲೇ ಅತ್ಯಾಧುನಿಕ ಹವಾಮಾನ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಸೋಮವಾರ ಅನಾವರಣಗೊಳಿಸಿದೆ.
ಕೇಂದ್ರ ಭೂ ವಿಜ್ಞಾನ ಸಚಿವಾಲಯವು ‘ಭಾರತ್ ಫೋರ್ಕಾಸ್ಟ್ ಸಿಸ್ಟಂ’ ಎಂಬ ಸಂಪೂರ್ಣ ಸ್ವದೇಶಿ ಹವಾಮಾನ ಮುನ್ಸೂಚನಾ ವ್ಯವಸ್ಥೆ ಬಿಡುಗಡೆ ಮಾಡಿದೆ. ಭೂ ವಿಜ್ಞಾನ ಸಚಿವಾಲಯದ ಅಡಿ ಬರುವ ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆ ಅಭಿವೃದ್ಧಿಪಡಿಸಿದ್ದ ಈ ವ್ಯವಸ್ಥೆಯನ್ನು 2022ರಿಂದಲೇ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದಾದ ಬಳಿಕ ಭಾರೀ ಮಳೆಯ ಮುನ್ಸೂಚನೆ ನೀಡುವಲ್ಲಿ ಶೇ.30ರಷ್ಟು ಸುಧಾರಣೆಯಾಗಿದೆ. ಅತಿಹೆಚ್ಚು ಮುಂಗಾರು ಬಾಧಿತ ಪ್ರದೇಶದಲ್ಲಿ ಇದು ಶೇ.64ರಷ್ಟು ಪ್ರಗತಿ ಕಂಡಿದೆ. ಚಂಡಮಾರುತದ ಟ್ರ್ಯಾಕಿಂಗ್ ಮತ್ತು ಮುನ್ಸೂಚನೆಗಳಲ್ಲಿ ಸುಧಾರಣೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ವಿಶೇಷತೆಯೇನು?:
ಈ ಮೊದಲು, 4 ಹಳ್ಳಿಗಳಿಗೆ ಒಂದೇ ಮುನ್ಸೂಚನೆ ನೀಡಲಾಗುತ್ತಿತ್ತು. ಈಗ ಪ್ರತಿ ಹಳ್ಳಿಗೂ ಪ್ರತ್ಯೇಕವಾಗಿ ನೀಡಬಹುದು. ಅಂತೆಯೇ, ಇದಕ್ಕೆ ತಗುಲುತ್ತಿದ್ದ 12ರಿಂದ 13 ತಾಸು ಈಗ 3 ರಿಂದ 4 ಗಂಟೆಗೆ ಇಳಿಕೆಯಾಗುತ್ತದೆ. ಈ ವ್ಯವಸ್ಥೆಯು, ಉಷ್ಣವಲಯದಲ್ಲಿ 6 ಕಿ.ಮೀ.ನಷ್ಟು ಹಾಗೂ ಧ್ರುವ ಪ್ರದೇಶದಲ್ಲಿ 7-8 ಕಿ.ಮೀ.ನಷ್ಟು ಸಣ್ಣ ವಿಸ್ತೀರ್ಣದ ನಿಖರ ಮಾಹಿತಿಯನ್ನು ನೀಡಲು ಶಕ್ತವಾಗಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ನಿಖರತೆಯಾಗಿದೆ. ಯೂರೂಪ್, ಬ್ರಿಟನ್ ಮತ್ತು ಅಮೆರಿಕದ ವ್ಯವಸ್ಥೆಗಳು 9 ಮತ್ತು 14 ಕಿ.ಮೀ. ವಿಸ್ತೀರ್ಣದ ಮುನ್ಸೂಚನೆಯನ್ನಷ್ಟೇ ನೀಡಬಲ್ಲವು.
ಉಪಯೋಗವೇನು?:
ಈ ವ್ಯವಸ್ಥೆಯು ಮುಂಗಾರು, ವಿಮಾನಗಳು, ಚಂಡಮಾರುತಗಳ ಮೇಲೆ ನಿಗಾ ಇಡಲು, ವಿಪತ್ತು ನಿರ್ವಹಣೆ, ಕೃಷಿ, ಜಲಮಾರ್ಗಗಳು, ರಕ್ಷಣೆ ಮತ್ತು ಪ್ರವಾಹ ಮುನ್ಸೂಚನೆಗೆ ಸಹಕಾರಿ. ಧಿಡೀರನೆ ಎದುರಾಗಿ ಭಾರೀ ಅನಾಹುತಕ್ಕೆ ಕಾರಣವಾಗುವ ಹವಾಮಾನ ವೈಪರೀತ್ಯಗಳನ್ನು ಮೊದಲೇ ಪತ್ತೆಹಚ್ಚಿ, ಆಗಬಹುದಾದ ಅಚಾತುರ್ಯಗಳನ್ನು ತಕ್ಕಮಟ್ಟಿಗೆ ತಡೆಯಬಹುದು. ಜನರಿಗೆ ಮುನ್ನಚರಿಕೆ ವಹಿಸುವಂತೆ ಸೂಚಿಸಲು, ವಿಮಾನಗಳ ಹಾರಾಟದಲ್ಲಿ ತೊಂದರೆ ಅಥವಾ ವ್ಯತ್ಯಯವಾಗುವುದನ್ನು ತಪ್ಪಿಸಬಹುದು. ಇದು ಸೇನೆ ಹಾಗೂ ರಕ್ಷಣಾ ಕಾರ್ಯಕ್ಕೂ ಸಹಕಾರಿಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ