
ವಾಷಿಂಗ್ಟನ್: ಗುರುವಾರ ಅಮೆರಿಕದ ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಔತಣಕೂಟ ಹಮ್ಮಿಕೊಂಡಿದ್ದು, ಔತಣದಲ್ಲಿ ಪಾಲ್ಗೊಳ್ಳಲು 3 ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಕರ್ನಾಟಕದ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ರನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್, ಈ ಆಹ್ವಾನದಿಂದ ನಾನು ಬಹಳ ಉತ್ಸುಕನಾಗಿದ್ದೇನೆ. ಎರಡು ಮಹಾನ್ ದೇಶಗಳ ನಡುವಿನ ಮಹತ್ವದ ಭೇಟಿಯಲ್ಲಿ ಸಾಕ್ಷಿಯಾಗಲು ಹೆಮ್ಮೆಯಾಗುತ್ತಿದೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. ಜೋ ಬೈಡೆನ್ ಅವರು ಈ ಔತಣಕ್ಕೆ ಸುಮಾರು 800 ಮಂದಿಗಷ್ಟೇ ಆಮಂತ್ರಣ ನೀಡಿದ್ದು ಅವರಲ್ಲಿ ರಿಕ್ಕಿ ಕೂಡ ಒಬ್ಬರು ಎಂಬುದು ವಿಶೇಷ.
ಅಮೆರಿಕಾಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಮೂಲದ ಅಮೆರಿಕನ್ನರಿಂದ ಹಿಡಿದು ಅಮೆರಿಕದ ಉನ್ನತ ರಾಜಕಾರಣಿಗಳವರೆಗೆ ಆತ್ಮೀಯವಾಗಿ ಸ್ವಾಗತ ಕೋರುವ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಸಿದ್ಧ ಹಾಗೂ ಹೆಗ್ಗುರುತಿನ ಸ್ಥಳಗಳಾದ ಟೈಮ್ಸ್ ಸ್ಕ್ವೇರ್, ನಯಾಗರ ಫಾಲ್ಸ್, ಪ್ರಿನ್ಸ್‌ಟನ್ ವಿವಿ ಹಾಗೂ ಹವಾಯ್ ಸೇರಿದಂತೆ ವಿವಿಧೆಡೆಯಿಂದ ಭಾರತೀಯ ಅಮೆರಿಕನ್ನರು ಹಾಗೂ ಯುವಕರು ಸ್ವಾಗತ ಕೋರುವ ವಿಡಿಯೋ ಮಾಡಿ ಟ್ವೀಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದಲ್ಲದೆ ಅಮೆರಿಕದ ಹಿರಿಯ ರಾಜಕೀಯ ನಾಯಕರೂ ಸ್ವಾಗತ ಸಂದೇಶಗಳನ್ನು ಬಿತ್ತರಿಸಿದ್ದಾರೆ.
ಇಂದಿನಿಂದ ಪ್ರಧಾನಿ ಮೋದಿ ಐತಿಹಾಸಿಕ ಅಮೆರಿಕ ಪ್ರವಾಸ: ಏನೇನು ಕಾರ್ಯಕ್ರಮ?
ಇಂದು ನ್ಯೂಯಾರ್ಕ್‌ಗೆ ಹೋಗಿಳಿಯಲಿರುವ ಮೋದಿ ಅವರು, ನಾಳೆ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ವಾಷಿಂಗ್ಟನ್ ಡಿಸಿಗೆ ತೆರಳಲಿದ್ದಾರೆ. ಜೂ.22ರಂದು ಅಲ್ಲಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಅವರ ಪತ್ನಿ ಜಿಲ್ ಬೈಡೆನ್ ಅವರು ಸ್ವಾಗತಿಸಲಿದ್ದಾರೆ. ಈ ವೇಳೆ ಮೋದಿ ಅವರು ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಮೆರಿಕ ಸರ್ಕಾರದ ಅಧಿಕೃತ ಔತಣಕೂಟದಲ್ಲೂ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಜೂ.23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಗೃಹ ಸಚಿವ ಆ್ಯಂಟನಿ ಬ್ಲಿಂಕನ್ ಆಯೋಜಿಸಿರುವ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅಧಿಕೃತ ಕಾರ್ಯಕ್ರಮಗಳ ಜೊತೆಗೆ ವಿವಿಧ ಕಂಪನಿಗಳ ಸಿಇಒ, ವೃತ್ತಿಪರರು ಮತ್ತು ಗಣ್ಯರನ್ನು ಮೋದಿ ಭೇಟಿ ಮಾಡಲಿದ್ದಾರೆ.
‘ಆಪರೇಷನ್ ಗಂಗಾ’ಗೆ ಅನಿವಾಸಿ ಭಾರತೀಯರ ಸಹಾಯ; ಭಾರತೀಯರು ರಕ್ತದಿಂದ್ಲೇ ಸಂಪರ್ಕ ಹೊಂದಿದ್ದಾರೆ: ಪ್ರಧಾನಿ ಮೋದಿ
ಈಜಿಫ್ಟ್‌ಗೂ ಭೇಟಿ
ಬಳಿಕ ತಮ್ಮ ಪ್ರವಾಸ 2ನೇ ಹಂತವಾಗಿ ಜೂ.24-25 ರಂದು ಮೋದಿ ಈಜಿಫ್ಟ್ ರಾಜಧಾನಿ ಕೈರೋಗೆ ಭೇಟಿ ನೀಡಲಿದ್ದಾರೆ. ಈಜಿಫ್ಟ್ ಅಧ್ಯಕ್ಷ ಫತ್ತಾ ಎಲ್ ಸಿಸಿ ಅವರ ಆಹ್ವಾನದ ಮೇರೆಗೆ ಮೋದಿ ಈ ಭೇಟಿ ಕೈಗೊಂಡಿದ್ದಾರೆ. ಕಳೆದ ಜ.26ರಂದು ಫತ್ತಾ, ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ