
ಹುಬ್ಬಳ್ಳಿ (ಮೇ.17): ಪಾಕಿಸ್ತಾನವನ್ನು ಭಾರತ ಜಗತ್ತಿನಲ್ಲಿ ಏಕಾಂಗಿಯಾಗಿ ಮಾಡಿದೆ. ಇಂಥಹ ಸಂದರ್ಭದಲ್ಲಿ ಭಾರತದಲ್ಲಿರುವ ಕೆಲವರು ಪಾಕಿಸ್ತಾನಕ್ಕೆ ಸಹಕಾರಿಯಾಗುವಂತೆ ಮಾತನಾಡುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷ ಸೈನ್ಯವನ್ನೂ ನಂಬದಿರುವುದು ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಆಪರೇಷನ್ ಸಿಂದೂರ ಹೆಸರಲ್ಲಿ ಕೇವಲ ನಾಲ್ಕು-ಐದು ವಿಮಾನ ಕಳುಹಿಸಿ ಭಾರತ ಸುಮ್ಮನಾಗಿದೆ ಎನ್ನುವ ಶಾಸಕ ಕೊತ್ತೂರು ಮಂಜುನಾಥ ಅವರ ಹೇಳಿಕೆಗೆ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇವರ ಹೇಳಿಕೆ ಪಾಕಿಸ್ತಾನದ ಭಾಷೆಯಾಗಿದೆ. ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನ ಭಾಷೆಯಂತೆ ಮಾತನಾಡುತ್ತದೆ ಎಂದು ಕಿಡಿಕಾರಿದರು.
ಹಿಂದೆ ಪಾಕಿಸ್ತಾನ ಹಿಂದೂ ಟೆರರ್ ಅಂದರೆ ಇಲ್ಲಿಯ ಕಾಂಗ್ರೆಸ್ ನಾಯಕರು ಅದನ್ನೇ ಬಳಸಿದರು. 370 ಕಾಯ್ದೆ ತೆಗೆದಾಗ ಪಾಕಿಸ್ತಾನ ಬ್ಲ್ಯಾಕ್ ಡೇ ಎಂದಿತ್ತು. ಇವರು ಸಹ ಬ್ಲ್ಯಾಕ್ ಡೇ ಅಂದಿದ್ದರು. ಕಾಂಗ್ರೆಸ್‌ನ ಕೆಲವು ನಾಯಕರು ಈ ರೀತಿ ಮಾತನಾಡುತ್ತಿದ್ದು, ಕಾಂಗ್ರೆಸ್ ಮಾತನಾಡದಂತೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದರು.
ಕಾಂಗ್ರೆಸ್ ಅನೇಕ ನಾಯಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರ ಮನೆಗಳ ಟಾರ್ಗೆಟ್ ಮಾಡಿ ಹೊಡೆಯಲಾಗಿದೆ. ಭಾರತದ ಗುಪ್ತಚರ ಇಲಾಖೆ, ತಂತ್ರಜ್ಞಾನ, ಸೈನ್ಯ, ವಾಯುವ ಸೇನೆ, ಜಲ ಸೇನೆ ಸಮನ್ವದಿಂದ ಕಾರ್ಯಾಚರಣೆ ಮಾಡಿದ್ದು, ನಿಜಕ್ಕೂ ಮೆಚ್ಚುವಂತದ್ದು. ಉಗ್ರರ ಅಡಗುತಾಣವನ್ನು ಗುರಿಯಾಗಿ ಹೊಡೆಯಲಾಗಿದೆ. ನಾಗರಿಕರ ಮೇಲೆ ದಾಳಿ ಮಾಡಿಲ್ಲ, ಇದನ್ನು ಪಾಕಿಸ್ತಾನದವರು ಅಳುತ್ತ ಹೇಳುತ್ತಿದ್ದಾರೆ. ಭಾರತವನ್ನು ತಡೆಯಬೇಕು ಎಂದು ಅಮೇರಿಕದವರ ಕಾಲು ಬಿದ್ದಿದ್ದಾರೆ.
ಆದರೆ, ಕಾಂಗ್ರೆಸ್ ನಾಯಕರಿಗೆ ಸೈನ್ಯದ ಮೇಲೆ ಅನುಮಾನವಿದೆ. ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಹಾಗೂ ಈಗ ಕೊನೆಗೆ ಸೈನ್ಯವನ್ನು ನಂಬುತ್ತಿಲ್ಲ. ಸೈನ್ಯದ ಅಧಿಕಾರಿಗಳು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಪಾಕ್‌ನ ಸುಳ್ಳಿನ ಕಂತೆ: ಭಾರತವೇ ಕದನ ವಿರಾಮ ಕೇಳಿತಂತೆ!
ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ದೇಶದ ವಿಚಾರದಲ್ಲಿ ನಾವು ರಾಜಕಾರಣ ಮಾಡಿಲ್ಲ. ಹಿಂದೆ ಕಾಂಗ್ರೆಸ್ 10 ವರ್ಷ ಅವಧಿಯಲ್ಲಿ ಭಯೋತ್ಪಾದನ ಚಟುವಟಿಕೆಗಳು ಎಷ್ಟಾದರೂ ಏನೂ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಈ ವಿಚಾರದಲ್ಲಿ ತನ್ನ ನಿಲವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಸಂತೋಷ್ ಲಾಡ್ ತಾನೇ ದೊಡ್ಡವನು ಎಂಬ ಭ್ರಮೆಯಲ್ಲಿದ್ದಾರೆ:
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ನಾನು ದೊಡ್ಡವನು ಎಂಬ ಭ್ರಮೆಯಲ್ಲಿ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾ ಅಧ್ಯಕ್ಷ ಟ್ರಂಪ್ ಬಗ್ಗೆ ಮಾತನಾಡಿ ನಾನು ಡೊಡ್ಡವನು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಜನರಿಗೆ ದೊಡ್ಡವನು ಎಂದು ತೋರಿಸುವ ಮಾನಸಿಕ ಸ್ಥಿತಿಯಿಂದ ಬಳಲುತ್ತಿದ್ದಾರೆ. ರಾಜ್ಯ, ಜಿಲ್ಲೆ ಅಭಿವೃದ್ಧಿ ಹಾಗೂ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ಒಂದು ಬಾರಿ ಮಾತನಾಡಲ್ಲ. ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಹರಿಹಾಯ್ದರು.
ಕರ್ನಲ್ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವ ವಿಜಯ್ ಶಾಹ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಪಕ್ಷ ಸೂಕ್ತ ಕ್ರಮ ಕೈಗೊಂಡಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ