
ಅಮೆರಿಕಾದಲ್ಲಿ ಕರ್ನಾಟಕದ ಮೂಲದ ಮ್ಯಾನೇಜರ್ ಹತ್ಯೆ…
ಭಾರತೀಯ ಮೂಲದ ವ್ಯಕ್ತಿಯೋರ್ವನನ್ನು ಆತನ ಮೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ತಲೆ ಕಡಿದು ಹತ್ಯೆ ಮಾಡಿದ ಭಯಾನಕ ಘಟನೆ ಅಮೆರಿಕಾದ ಡಲ್ಲಾಸ್‌ನಲ್ಲಿ ನಡೆದಿದೆ. ಮುರಿದ ವಾಶಿಂಗ್ ಮೆಷಿನ್ ಅನ್ನು ಬಳಸಬೇಡ ಎಂದು ಹೇಳಿದ್ದಕ್ಕೆ ಕ್ರೋಧಿತನಾದ ಕೆಲಸದವ ತನ್ನ ಮಾಲೀಕನನ್ನೇ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ವ್ಯಕ್ತಿಯನ್ನು ಯೊರ್ಡನಿಸ್ ಕೊಬೊಸ್ ಮಾರ್ಟಿನೇಜ್ ಎಂದು ಗುರುತಿಸಲಾಗಿದೆ. ಆತನನ್ನುಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಭಾರತದ ಕರ್ನಾಟಕದವರು ಎಂದು ತಿಳಿದು ಬಂದಿದ್ದು, 50 ವರ್ಷದ ಚಂದ್ರ ನಾಗಮಲ್ಲಯ್ಯ ಎಂದು ಗುರುತಿಸಲಾಗಿದೆ.
ಅಮೆರಿಕಾದಲ್ಲಿ ಮ್ಯಾನೇಜರ್ ತಲೆ ಕಡಿದ ಕೆಲಸದಾಳು:
ತನ್ನ ಮ್ಯಾನೇಜರ್ ಜೊತೆ ವಾದ ಮಾಡಿದ ಆರೋಪಿ ಯೊರ್ಡನಿಸ್ ಬಳಿಕ ಮಚ್ಚಿನಿಂದ ಚಂದ್ರ ನಾಗಮಲ್ಲಯ್ಯ ಅವರ ತಲೆ ಕಡಿದಿದ್ದಾನೆ. ಬುಧವಾರ ಸೆಪ್ಟೆಂಬರ್ 10ರಂದು ಘಟನೆ ನಡೆದಿದೆ. ಚಂದ್ರನಾಗಮಲ್ಲಯ್ಯ ಅವರು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.
ತನ್ನ ಮಾತು ಕೇಳದ ಯೊರ್ಡನಿಸ್‌ಗೆ ತಾನೇ ಹೋಗಿ ಇನ್ನೊಮ್ಮೆ ಹೇಳುವ ಬದಲು ಚಂದ್ರ ನಾಗಮಲ್ಲಯ್ಯ, ತನ್ನ ಆದೇಶವನ್ನು ಭಾಷಾಂತರಿಸಿ ಹೇಳುವಂತೆ ಇನ್ನೊಬ್ಬ ಉದ್ಯೋಗಿಗೆ ಹೇಳಿದ್ದರಿಂದ ಈ ಉದ್ಯೋಗಿ ಯೊರ್ಡನಿಸ್ ಸಿಟ್ಟಿಗೆದ್ದ ಎಂದು ವರದಿಯಾಗಿದೆ. ಇದಾದ ನಂತರ ಆತ ಮಚ್ಚನ್ನು ತೆಗೆದುಕೊಂಡು ಬಂದು 50 ವರ್ಷದ ಚಂದ್ರ ನಾಗಮಲ್ಲಯ್ಯ ಅವರ ಮೇಲೆ ಹಲವು ಬಾರಿ ದಾಳಿ ಮಾಡಿದ್ದಾನೆ. ಈ ವೇಳೆ ಚಂದ್ರನಾಗಮಲ್ಲಯ್ಯ ಅವರು ಆತನಿಂದ ತಪ್ಪಿಸಿಕೊಳ್ಳವುದಕ್ಕಾಗಿ ತನ್ನ ಮೊಟೇಲ್‌ನ ಮುಂಭಾಗದ ಪಾರ್ಕಿಂಗ್ ಜಾಗಕ್ಕೆ ಓಡಿದ್ದಾರೆ ಆದರೆ ಆರೋಪ ಯೊರ್ಡನಿಸ್ ಅವರನ್ನು ಓಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.
18 ವರ್ಷದ ಮಗ, ಪತ್ನಿ ಮುಂದೆಯೇ ಬರ್ಬರವಾಗಿ ಹತ್ಯೆ:
ಈ ವೇಳೆ ಚಂದ್ರನಾಗಮಲ್ಲಯ್ಯ ಅವರ 18 ವರ್ಷದ ಮಗ ಹಾಗೂ ಪತ್ನಿ ಕೂಡ ಕಚೇರಿ ಮುಂಭಾಗದ ಪಾರ್ಕಿಂಗ್ ಪ್ರದೇಶಕ್ಕೆ ಬಂದು ಚಂದ್ರನಾಗಮಲ್ಲಯ್ಯ ಅವರನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯೊರ್ಡನಿಸ್ ಅವರಿಬ್ಬರನ್ನು ಮಚ್ಚು ಹಿಡಿದು ಓಡಿಸಿದ್ದಾನೆ. ನಂತರ ಚಂದ್ರನಾಗಮಲ್ಲಯ್ಯ ಅವರ ತಲೆಯನ್ನು ಕತ್ತರಿಸಿದ ಆತ ತಲೆಯನ್ನು ಚೆಂಡಿನಂತೆ ಒದ್ದಿದ್ದಾನೆ.
ಈ ಭಯಾನಕ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಲೆಯ ನಂತರ ಆತ ತಲೆಯನ್ನು ತೆಗೆದುಕೊಂಡು ಹೋಗಿ ಕಸದ ಬುಟ್ಟಿಗೆ ಎಸೆಯಲು ಹೋಗಿದ್ದಾನೆ. ಆತ ರಕ್ತಸಿಕ್ತವಾದ ಮಚ್ಚನ್ನು ಹಿಡಿದುಕೊಂಡು ಕಸದ ಬುಟ್ಟಿ ಇದ್ದ ಜಾಗದಿಂದ ಬರುತ್ತಿರುವ ದೃಶ್ಯ ವೀಡಿಯೋದಲ್ಲಿ ವೈರಲ್ ಆಗಿದ್ದು, ಆತ ಅಲ್ಲಿಂದ ಬರುತ್ತಿದ್ದಾಗಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನಾಗಚಂದ್ರಮಲ್ಲಯ್ಯ ಹತ್ಯೆಗೆ ಭಾರತೀಯ ರಾಯಭಾರ ಕಚೇರಿ ಸಂತಾಪ:
ಅಮೆರಿಕಾದಲ್ಲಿ ಭಾರತೀಯನ ಈ ದುರಂತಮಯ ಸಾವಿಗೆ ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ತಮ್ಮ ಕೆಲಸದ ಸ್ಥಳದಲ್ಲಿ ಭೀಕರವಾಗಿ ಕೊಲ್ಲಲ್ಪಟ್ಟ ಭಾರತೀಯ ಪ್ರಜೆ ಶ್ರೀ ಚಂದ್ರ ನಾಗಮಲ್ಲಯ್ಯ ಅವರ ದುರಂತ ಸಾವಿಗೆ ಹೂಸ್ಟನ್‌ನ ಭಾರತೀಯ ಕಾನ್ಸುಲೇಟ್ ಜನರಲ್ ಸಂತಾಪ ಸೂಚಿಸಿದೆ. ನಾವು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತೇವೆ. ಆರೋಪಿಯು ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ. ಈ ವಿಷಯದ ಬಗ್ಗೆ ನಾವು ನಿಕಟವಾಗಿ ನಿಗಾ ಇಡುತ್ತಿದ್ದೇವೆ ಎಂದು ಹೂಸ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಧಿಕೃತ ಟ್ವಿಟ್ಟರ್‌ನಿಂದ ಪೋಸ್ಟ್ ಮಾಡಿದೆ.
ಈಗ ಚಂದ್ರನಾಗಮಲ್ಲಯ್ಯ ಅವರನ್ನು ಹತ್ಯೆ ಮಾಡಿದ ಆರೋಪಿ ಯೊರ್ಡನಿಸ್ ವಿರುದ್ಧ ಹೂಸ್ಟನ್‌ನಲ್ಲಿ ವಾಹನ ಕಳ್ಳತನ ಮತ್ತು ಹಲ್ಲೆಗಾಗಿ ಬಂಧನಗಳು ಸೇರಿದಂತೆ ಹಲವು ಅಪರಾಧ ಕೃತ್ಯವೆಸಗಿದ ಇತಿಹಾಸವನ್ನು ಹೊಂದಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನೇಪಾಳ ಪ್ರಧಾನಿ ಸ್ಥಾನಕ್ಕೆ ಕೇಳಿ ಬರ್ತಿದೆ ಭಾರತದಲ್ಲಿ ಶಿಕ್ಷಣ ಪಡೆದ ಕುಲ್ಮನ್ ಘೀಸಿಂಗ್ ಹೆಸರು
ಇದನ್ನೂ ಓದಿ: ನಂಗೆ ಕಚ್ತಿಯಾ ಅಂತಾ ಕೇಳುತ್ತಾ ಹಾವಿನೊಂದಿಗೆ ಕುಡುಕನ ಚೆಲ್ಲಾಟ: ಎರಡು ಬಾರಿ ಕಚ್ಚಿದ ಹಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ