ಖಲೀಫಾ, ಘಜ್ವಾ ಉಗ್ರ ಜಾಲ ಬಯಲು! ದೇಶವನ್ನು ಖಿಲಾಫತ್‌ ಮಾಡಲು ಹೊಂಚು ಹಾಕಿದ್ದ ಐವರ ಬಂಧನ

Kannadaprabha News, Ravi Janekal |   | Kannada Prabha
Published : Sep 12, 2025, 06:18 AM ISTUpdated : Sep 12, 2025, 06:23 AM IST
Special Cell busted international interstate terror module.

ಸಾರಾಂಶ

ಪಾಕಿಸ್ತಾನದ ನಂಟಿನ 'ಖಿಲಾಫತ್' ಮತ್ತು 'ಘಜ್ವಾ ಎ ಹಿಂದ್' ಭಯೋತ್ಪಾದಕ ಮಾಡ್ಯೂಲ್ ಅನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಭಾರತದಲ್ಲಿ ಜಿಹಾದ್ ಹರಡಲು ಮತ್ತು ಖಿಲಾಫತ್ ಸ್ಥಾಪಿಸಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.

ನವದೆಹಲಿ (ಸೆ.12): ಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ಹಾಗೂ ಭಾರತವನ್ನು ‘ಖಲೀಫಾ ದೇಶ’ (ಇಸ್ಲಾಮಿಕ್‌ ದೇಶ) ಮಾಡುವ ಉದ್ದೇಶ ಹೊಂದಿದ್ದ ‘ಖಿಲಾಫತ್’ ಹಾಗೂ ‘ಘಜ್ವಾ ಎ ಹಿಂದ್’ ಭಯೋತ್ಪಾದಕ ಮಾಡ್ಯೂಲ್ ಅನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಭೇದಿಸಿದೆ. ಈ ಸಂಬಂಧ ಅದು ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, 5 ಶಂಕಿತ ಉಗ್ರರನ್ನು ಬಂಧನ ಮಾಡಿದೆ.

ಈ ಯಶಸ್ವಿ ಕಾರ್ಯಾಚರಣೆ ಬಗ್ಗೆ ವಿಶೇಷ ಪೊಲೀಸ್‌ ಘಟಕದ ಹೆಚ್ಚುವರಿ ಆಯುಕ್ತ ಪ್ರಮೋದ್‌ ಕುಶ್ವಾಹ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ‘ಬಂಧಿತರು ಭಾರತದಲ್ಲಿ ಜಿಹಾದಿ ಮನಃಸ್ಥಿತಿಯನ್ನು ಹರಡಿ, ಇಲ್ಲಿಯ ಭೂಮಿಯನ್ನು ಆಕ್ರಮಿಸಿ ಅದನ್ನು ಖಿಲಾಫತ್‌ ವಲಯ ಎಂದು ಘೋಷಿಸಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು. ‘ಘಜ್ವಾ-ಎ-ಹಿಂದ್’ (ಭಾರತದ ಮೇಲೆ ದಾಳಿ) ಕಲ್ಪನೆಯನ್ನು ಹರಡಲು ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ಪ್ರಾರಂಭಿಸಲು ಪಾಕಿಸ್ತಾನದಿಂದ ಇವರಿಗೆ ಮಾರ್ಗದರ್ಶನ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.

 

‘ರಾಂಚಿಯಿಂದ ಇಂಗ್ಲಿಷ್ ಹಾನರ್ಸ್‌ ಪದವಿ ಪಡೆದಿದ್ದ ದಾನಿಶ್‌ ಬಂಧಿತರಲ್ಲಿ ಒಬ್ಬನಾಗಿದ್ದಾನೆ. ಈತ ಪಾಕ್‌ ಹ್ಯಾಂಡ್ಲರ್‌ಗಳ ಪರವಾಗಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದ. ಆತನನ್ನು ಸಿಇಒ, ಗಜಬ್‌ ಮತ್ತು ಪ್ರೊಫೆಸರ್‌ ಎಂಬ ಅಡ್ಡಹೆಸರುಗಳಿಂದ ಕರೆಯಲಾಗುತ್ತಿತ್ತು. ಉಳಿದಂತೆ ಮುಂಬೈನ ಅಫ್ತಾಬ್‌ ಖುರೇಷಿ ಮತ್ತು ಸುಫಿಯಾನ್‌ ಅಬೂಬಕ್ಕರ್‌, ತೆಲಂಗಾಣದ ಮೊಹಮ್ಮದ್‌ ಹುಜೈಫಾ, ಮಧ್ಯಪ್ರದೇಶದ ಕಮ್ರನ್‌ ಖುರೇಶಿಯನ್ನು ಬಂಧಿಸಲಾಗಿದೆ. ಇವರಿಗೆಲ್ಲಾ ಪಾಕ್‌ ಮೂಲದ ಹ್ಯಾಂಡ್ಲರ್‌ಗಳು (ಐಎಸ್‌ಐ) ಸಾಮಾಜಿಕ ಜಾಲತಾಣಗಳ ಗೂಢಲಿಪಿಯ ಮೂಲಕ ಶಸ್ತ್ರಾಸ್ತ್ರ ವಿನ್ಯಾಸ, ಸೈದ್ಧಾಂತಿಕ ಮಾರ್ಗದರ್ಶನ, ಸುಧಾರಿತ ಸ್ಫೋಟಕಗಳ ತಯಾರಿಯ ತರಬೇತಿ ಕೊಡುತ್ತಿದ್ದರು’ ಎಂದಿದ್ದಾರೆ.

ಕಾರ್ಯಾಚರಣೆ ಹೇಗೆ?:

ದೆಹಲಿಯ ಹಜರತ್‌ ನಿಜಾಮುದ್ದೀನ್‌ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಂದ ಶಸ್ತ್ರಾಸ್ತ್ರ ಪಡೆದು ಊರು ಬಿಡುತ್ತಿದ್ದ ವೇಳೆ ಅಫ್ತಾಬ್‌ ಮತ್ತು ಸುಫಿಯಾನ್‌ನನ್ನು ಬಂಧಿಸಲಾಯಿತು. ಇವರ ಮೇಲೆ ಪೊಲೀಸರು ಕಳೆದ 6 ತಿಂಗಳಿಂದ ಕಣ್ಣಿಟ್ಟಿದ್ದರು. ಬಂಧಿತರಿಬ್ಬರು ನೀಡಿದ ಮಾಹಿತಿಯನ್ನಾಧರಿಸಿ ರಾಂಚಿ, ಜಾರ್ಖಂಡ್‌, ರಾಜಗಢ, ತೆಲಂಗಾಣದಲ್ಲಿ ದಾಳಿ ನಡೆಸಿದ ಪೊಲೀಸರು ಇನ್ನೂ ಮೂವರನ್ನು ಬಂಧಿಸಿದ್ದಾರೆ. ಇನ್ನೂ 11 ಜನ ವಶದಲ್ಲಿದ್ದು, ಶೀಘ್ರ ಬಂಧಿಸುವ ಸಾಧ್ಯತೆ ಇದೆ.

ದಾಳಿ ನಡೆದ ಸ್ಥಳಗಳಿಂದ ಸಲ್ಫರ್‌ ಪುಡಿ, ವೈರ್‌, ಫ್ಯೂಸ್‌, ಗ್ಯಾಸ್‌ ಮಾಸ್ಕ್‌ ಹಾಗೂ ಸ್ಫೋಟಕ ತಯಾರಿಕೆಯಲ್ಲಿ ಬಳಸಲಾಗುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಪಾಕಿಸ್ತಾನದಿಂದ ತರಬೇತಿ ನೀಡಲಾಗಿತ್ತು. ಇವರು ‘ಖಿಲಾಫತ್ ವಲಯ’ವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು ಹಾಗೂ ಇದಕ್ಕಾಗಿ ಹಣವನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದರು.

ಖಿಲಾಫತ್‌ ಎಂದರೇನು?

ಇಸ್ಲಾಮಿಕ್ ಇತಿಹಾಸದಲ್ಲಿ ಮುಸ್ಲಿಂ ಸಮುದಾಯದ ಆಡಳಿತಗಾರ ಖಲೀಫಾ. ಆತನ ಸಾಮ್ರಾಜ್ಯವನ್ನು ಖಿಲಾಫತ್‌ ಎಂದು ಕರೆಯುವ ವಾಡಿಕೆ ಇದೆ. ಆದರೆ ಉಗ್ರಗಾಮಿಗಳ ವಿಚಾರಕ್ಕೆ ಬಂದರೆ ಇಸ್ಲಾಮಿಕ್‌ ಸಾಮ್ರಾಜ್ಯ ಸ್ಥಾಪನೆ ಮಾಡುವುದು, ಷರಿಯಾ ಸೇರಿ ಎಲ್ಲ ಇಸ್ಲಾಮಿಕ್‌ ಕಾನೂನುಗಳನ್ನು ಜಾರಿಗೊಳಿಸುವುದು ಎಂದು ವಿಶ್ಲೇಷಿಸಲಾಗುತ್ತದೆ.

ಘಜ್ವಾ ಎ ಹಿಂದ್ ಎಂದರೇನು?

ಘಜ್ವಾ ಎಂದರೆ ಅರೇಬಿಕ್‌ ಭಾಷೆಯಲ್ಲಿ ನಂಬಿಕೆ ಆಧರಿಸಿ ದಾಳಿ ಎಂದರ್ಥ. ಆದರೆ ಘಜ್ವಾ ಎ ಹಿಂದ್‌ ಎಂದರೆ ಭಾರತದ ಮೇಲೆ ದಾಳಿ ಮಾಡುವುದು ಎಂದು ಉಗ್ರರ ಭಾಷೆಯಲ್ಲಿ ವಿಶ್ಲೇಷಿಸಲಾಗುತ್ತದೆ. ಪಾಕಿಸ್ತಾನದ ಉಗ್ರಗಾಮಿ ನಾಯಕರು ದಶಕಗಳಿಂದ ಭಾರತದ ವಿರುದ್ಧ ಬಳಸುತ್ತಿರುವ ಒಂದು ನುಡಿಗಟ್ಟು ಇದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ