
ಪಿಟಿಐ ನವದೆಹಲಿ: ‘ಯಾವುದಾದರೂ ಚುನಾವಣೆಗೆ ಹೋಗಬೇಕು ಎಂದರೆ 2-3 ತಿಂಗಳ ಮೊದಲು ಪೂರ್ವಸಿದ್ಧತೆ ಮಾಡಿಕೊಳ್ಳುವುದಲ್ಲ. ಎರಡು-ಎರಡೂವರೆ ವರ್ಷ ಮೊದಲೇ ಪೂರ್ವಸಿದ್ಧತೆ ಆರಂಭಿಸಬೇಕು ಎಂಬುದು ವಿಪಕ್ಷಗಳಿಗೆ ಕರ್ನಾಟಕ ಚುನಾವಣೆ ಕಲಿಸಿದ ಪಾಠ’ ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಾರ ತಂತ್ರಗಾರನಾಗಿ ಕಾರ್ಯನಿರ್ವಹಿಸಿದ ನರೇಶ್ ಅರೋರಾ(Naresh Arora) ಹೇಳಿದ್ದಾರೆ.
‘ಡಿಸೈನ್ ಬಾಕ್ಸ್’(DesignBoxed) ಎಂಬ ಕಂಪನಿ ಮಾಲೀಕರಾಗಿರುವ ಅರೋರಾ ಕರ್ನಾಟಕ ಚುನಾವಣೆ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿ, ‘ಚುನಾವಣೆಗೆ ಕೊನೇ ಕ್ಷಣದಲ್ಲಿ ಸಿದ್ಧತೆ ಆರಂಭಿಸಿದರೆ, ಪ್ರಚಾರ ಆರಂಭಿಸಿದರೆ ಸಾಲದು. ಕರ್ನಾಟಕದಲ್ಲಿ 2-2.5 ವರ್ಷ ಮೊದಲೇ ಕಾಂಗ್ರೆಸ್ ಪೂರ್ವಸಿದ್ಧತೆ ಆರಂಭಿಸಿತು. ದಿನದ 24 ಗಂಟೆ, ವರ್ಷಕ್ಕೆ 365 ದಿನವೂ ನಾವು ಜನರ ನಡುವೆ ಇರಬೇಕು. ಆಗ ಜನರ ಮೇಲೆ ಅದು ಪರಿಣಾಮ ಬೀರುತ್ತದೆ. ಬಿಜೆಪಿ ಸರ್ಕಾರದ ವಿರುದ್ಧ ಕಷ್ಟಪಟ್ಟು ಒಂದಿಲ್ಲೊಂದು ಹೋರಾಟ ನಡೆಸಿತು. ಇದು ಫಲ ಕೊಟ್ಟಿತು’ ಎಂದರು.
ಯತ್ನಾಳರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿಸಿ: ಸತೀಶ್ ಚಂದ್ರ ಕುಲಕರ್ಣಿ ಆಗ್ರಹ
‘ಸಾಮಾನ್ಯವಾಗಿ 2 ಪಕ್ಷಗಳ ನೇರ ಹೋರಾಟವಿದ್ದರೆ ಇತ್ತೀಚೆಗೆ ಬಿಜೆಪಿ ಗೆಲುವು ಸಾಮಾನ್ಯ ಎಂಬಂತಾಗಿದೆ. ಆದರೆ ಈಗ ಬಿಜೆಪಿಯೇತರ ಪಕ್ಷ ಕರ್ನಾಟಕದಲ್ಲಿ ಗೆದ್ದಿದ್ದು, ಇತರ ವಿಪಕ್ಷಗಳಿಗೆ ಪ್ರೇರಣೆ’ ಎಂದರು.
‘ಕರ್ನಾಟಕದಲ್ಲಿ ಕಾಂಗ್ರೆಸ್(Karnataka congress) ಹಲವು ತಿಂಗಳ ಮೊದಲೇ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಇದು ಜನರ ಮನಸ್ಸಿನಲ್ಲಿ ಬೇರೂರಿ ಗೆಲುವಿಗೆ ಸಹಾಯ ಮಾಡಿತು. ಕಾಂಗ್ರೆಸ್ ಪಕ್ಷ ಅಸ್ಸಾಂನಲ್ಲಿ ಕೂಡ ಗ್ಯಾರಂಟಿ ಯೋಜನೆ ಪ್ರಕಟಿಸಿತಾದರೂ, ಅದು ಕೊನೆಯ ಕ್ಷಣದಲ್ಲಿ ಆದ ಘೋಷಣೆ ಆಗಿತ್ತು. ಹೀಗಾಗಿ ಜನರಿಗೆ ಆ ಗ್ಯಾರಂಟಿಗಳ ಬಗ್ಗೆ ಮನವರಿಕೆಯಾಗದೇ ಕಾಂಗ್ರೆಸ್ ಸೋತಿತು’ ಎಂದರು.
ಇತ್ತೀಚೆಗೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್(DK Shivakumar) ಅವರು ಖಾಸಗಿಯಾಗಿ ಹರಟೆ ಹೊಡೆಯುವ ವಿಡಿಯೋ ಚಿತ್ರೀಕರಣ ಮಾಡಿದ ತಂತ್ರದ ಹಿಂದಿದ್ದವರೇ ಅರೋರಾ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇಂಥ ಹರಟೆಗಳು ಜನರ ಮನಸ್ಸಿನಲ್ಲಿ ಬೇರೂರುತ್ತವೆ. ಖಾಸಗಿ ಹರಟೆಯ ವೇಳೆಯೂ ಜನರ ಬಗ್ಗೆ ನಾಯಕರು ಚಿಂತನೆ ಮಾಡುತ್ತಾರೆ ಎಂಬ ಸಂದೇಶ ಸಾರುತ್ತವೆ’ ಎಂದರು.
ನನ್ನ ಸೋಲು ಅಭಿವೃದ್ಧಿಗಾದ ಸೋಲು: ಡಾ.ಸುಧಾಕರ್
ಮುಂದಿನ ರಾಜಸ್ಥಾನ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪ್ರಚಾರ ತಂತ್ರದ ಹೊಣೆ ಅರೋರಾ ಮೇಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜಸ್ಥಾನದಲ್ಲಿ ಪೈಲಟ್-ಗೆಹ್ಲೋಟ್ ಬಣ ಎಂಬುದು ಕೇವಲ ಮಾಧ್ಯಮ ಸೃಷ್ಟಿ. ಅಲ್ಲಿ ಗೆಹ್ಲೋಟ್ ತಂದಿರುವ ಯೋಜನೆಗಳು ಜನಪ್ರಿಯವಾಗಿವೆ. ಇದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ನೆರವಾಗಲಿದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ