
ನವದೆಹಲಿ (ನ. 18): ಅಯೋಧ್ಯೆ ವಿವಾದ ಬಗೆಹರಿಸುವಂಥ ಐತಿಹಾಸಿಕ ತೀರ್ಪು ನೀಡಿದ ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ರಂಜನ್ ಗೊಗೋಯ್ ಅವರು ಭಾನುವಾರ ಸೇವಾ ನಿವೃತ್ತಿ ಹೊಂದಿದರು. ಶುಕ್ರವಾರವೇ ತಮ್ಮ ಕೊನೆಯ ಕಲಾಪದಲ್ಲಿ ಪಾಲ್ಗೊಂಡಿದ್ದ ಅವರು ಭಾನುವಾರ ಅಧಿಕೃತವಾಗಿ ನಿವೃತ್ತರಾದರು. 13 ತಿಂಗಳ ತಮ್ಮ ಸೇವೆಯ ಕೊನೆಯ ದಿನ ಅವರು ಪತ್ನಿ ಸಮೇತರಾಗಿ ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನ ಪಡೆದಿದ್ದು ವಿಶೇಷವಾಗಿತ್ತು.
ಈ ನಡುವೆ, ದೇಶದ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಶರದ್ ಎ. ಬೋಬ್ಡೆ ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. 17 ತಿಂಗಳು ಅವರು ಭಾರತದ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ದೇಶದ 47ನೇ ಮುಖ್ಯ ನ್ಯಾಯಾಧೀಶರು.
ಆಧಾರ್ ವ್ಯವಸ್ಥೆ ವಿಶ್ವಕ್ಕೆ ಮಾದರಿ: ಬಿಲ್ ಗೇಟ್ಸ್ ಪ್ರಶಂಸೆ
ಗೊಗೋಯ್ ಅಮೂಲ್ಯ ಸೇವೆ:
ನಿವೃತ್ತರಾದ ನ್ಯಾಯಾಧೀಶ ಗೊಗೋಯ್ ಅವರು ತಮ್ಮ ಸೇವಾವಧಿಯ ಕೊನೆಯಲ್ಲಿ, 1950ರಲ್ಲಿ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬರುವ ಮೊದಲಿನಿಂದಲೂ ಇದ್ದ ಅಯೋಧ್ಯೆ ರಾಮಮಂದಿರ ವಿವಾದದ ತೀರ್ಪು ನೀಡಿ, ವಿವಾದ ಬಗೆಹರಿಸಿದ್ದಾರೆ. ಅಲ್ಲದೆ, ರಫೇಲ್ ವಿವಾದ, ಶಬರಿಮಲೆ ವಿವಾದ- ಮುಂತಾದ ಮಹತ್ವದ ತೀರ್ಪುಗಳನ್ನು ನೀಡಿದ ಹೆಗ್ಗಳಿಕೆ ಅವರದು.
ಅಲ್ಲದೆ, ಕಳೆದ ವರ್ಷ ಅವರು ತಮ್ಮ ಮೊದಲು ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ದೀಪಕ್ ಮಿಶ್ರಾ ಅವರ ಕಾರ್ಯನಿರ್ವಹಣೆ ವಿರುದ್ಧ ಸಿಡಿದೆದ್ದು ಗಮನ ಸೆಳೆದಿದ್ದರು. ಈ ನಡುವೆ, ವೈಯಕ್ತಿಕ ವಿವಾದಕ್ಕೂ ಒಳಗಾಗಿದ್ದ ಗೊಗೋಯ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೂಡ ಕೇಳಿಬಂದಿತ್ತು. ಆದರೆ ತನಿಖೆ ಬಳಿಕ ಅದರಿಂದ ಕ್ಲೀನ್‌ಚಿಟ್ ಪಡೆದಿದ್ದರು.
ಅಸ್ಸಾಂ ಮೂಲದವರಾದ ಗೊಗೋಯ್, 1954ರಲ್ಲಿ ಜನಿಸಿದ್ದರು. 1978ರಲ್ಲಿ ವಕೀಲರಾದ ಅವರು, 2001ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 2011ರಲ್ಲಿ ಪಂಜಾಬ್-ಹರ್ಯಾಣಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಅವರು, 2012ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ದೀಪಕ್ ಮಿಶ್ರಾ ಅವರ ಉತ್ತರಾಧಿಕಾರಿಯಾಗಿ 2018ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರಾದ ಅವರು 13 ತಿಂಗಳು ಈ ಹುದ್ದೆಯಲ್ಲಿದ್ದರು.
1 ಕೆಜಿ ಈರುಳ್ಳಿ 220 ರೂ: ಪ್ರಧಾನಿ ಮನೆಯಲ್ಲಿ ಈರುಳ್ಳಿ ಬಳಕೆ ಕಟ್!
ನ್ಯಾ. ಬೋಬ್ಡೆ ಹೊಸ ಸಿಜೆ
- ಮೂಲತಃ ಮಹಾರಾಷ್ಟ್ರದ ನಾಗಪುರದವರು. 1956ರಲ್ಲಿ ಜನನ. ಇವರ ತಂದೆ ಕೂಡ ವಕೀಲರು.
- ಬಿಎ-ಎಲ್‌ಎಲ್‌ಬಿ ಪದವೀಧರ. 1978ರಲ್ಲಿ ವಕೀಲಿಕೆ ಆರಂಭ
- 2000ನೇ ಇಸವಿಯಲ್ಲಿ ಬಾಂಬೆ ಹೈಕೋರ್ಟ್ ಜಡ್ಜ್ ಆಗಿ ನೇಮಕ
- 2013ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ
- ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯೆ ತೀರ್ಪು, ಖಾಸಗಿತನ ಹಕ್ಕು ತೀರ್ಪು, ಆಧಾರ್ ಸೇರಿದಂತೆ ಹಲವು ಮಹತ್ವದ ತೀರ್ಪು ನೀಡಿರುವ ಬೋಬ್ಡೆ
- ದೇಶದ 47ನೇ ಮುಖ್ಯ ನ್ಯಾಯಾಧೀಶ ಎಂಬ ಹೆಗ್ಗಳಿಕೆ, 2021ರ ಏ.23ರಂದು ನಿವೃತ್ತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ