ಇಂದಿನಿಂದ ಚಳಿಗಾಲದ ‘ಬಿಸಿ’ ಅಧಿವೇಶನ ಶುರು

By Kannadaprabha NewsFirst Published Nov 18, 2019, 9:12 AM IST
Highlights

ಇಂದಿನಿಂದ ಚಳಿಗಾಲದ ‘ಬಿಸಿ’ ಅಧಿವೇಶನ |  ಡಿ.13 ರವರೆಗೆ ಕಲಾಪ | ಸರ್ಕಾರ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜು | 20 ದಿನ: ನ.18 ರಿಂದ ಡಿ.13 ರವರೆಗೆ ನಡೆಯಲಿದೆ ಕಲಾಪ 

ನವದೆಹಲಿ (ನ. 18):  ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಡಿಸೆಂಬರ್‌ 13ರವರೆಗೂ ನಡೆಯಲಿರುವ ಈ ಅಧಿವೇಶನದಲ್ಲಿ ಆರ್ಥಿಕ ಹಿಂಜರಿತ, ನಿರುದ್ಯೋಗ, ಬೆಲೆ ಏರಿಕೆ, ಕಾಶ್ಮೀರದಲ್ಲಿನ ಪರಿಸ್ಥಿತಿ, ಕಾಶ್ಮೀರದ ಸಂಸದ ಫಾರೂಕ್‌ ಅಬ್ದುಲ್ಲಾಗೆ ಗೃಹಬಂಧನ, ದಿಲ್ಲಿ ವಾಯುಮಾಲಿನ್ಯ- ಇತ್ಯಾದಿ ವಿಷಯಗಳನ್ನು ಇರಿಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.

ಈ ನಡುವೆ, ಪೌರತ್ವ (ತಿದ್ದುಪಡಿ) ವಿಧೇಯಕ, ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ, ದಿವಾಳಿತನ ತಿದ್ದುಪಡಿ ಮಸೂದೆ, ಬಹುರಾಜ್ಯ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆ ಸೇರಿದಂತೆ 35 ಮಹತ್ವದ ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧಗೊಂಡಿದೆ.

Latest Videos

ಮಹಿಂದ ರಾಜಪಕ್ಸ ಸೋದರ ಲಂಕಾಧಿಪತಿ!

ಇದೇ ವೇಳೆ ಕಾರ್ಪೋರೆಟ್‌ ತೆರಿಗೆ ಕಡಿತಗೊಳಿಸುವ ಹಾಗೂ ಇ-ಸಿಗರೆಟ್‌ ನಿಷೇಧಿಸುವ ಕುರಿತು ಸರ್ಕಾರ 2 ಸುಗ್ರೀವಾಜ್ಞೆಗಳನ್ನು ಕೆಲವು ತಿಂಗಳುಗಳ ಹಿಂದೆ ಹೊರಡಿಸಿದ್ದು, ಇವನ್ನು ಕಾನೂನಾಗಿ ಪರಿವರ್ತಿಸಲು ವಿಧೇಯಕಗಳನ್ನು ಮಂಡಿಸಲು ತೀರ್ಮಾನಿಸಿದೆ.

ಕಳೆದ ಅಧಿವೇಶನದಲ್ಲಿ ಕಾಶ್ಮೀರದ 370ನೇ ವಿಧಿ ರದ್ದು ಸೇರಿದಂತೆ ಹಲವು ಮಸೂದೆಗಳು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಗದ್ದಲದ ನಡುವೆ ವಿವಿಧ ಮಸೂದೆಗಳನ್ನು ಯಶಸ್ವಿಯಾಗಿ ಮಂಡಿಸಿ, ಸರ್ಕಾರ ಅನುಮೋದನೆ ಪಡೆದಿತ್ತು. ಆದರೆ 20 ದಿನ ನಡೆಯಲಿರುವ ಈ ಅಧಿವೇಶನದಲ್ಲೂ ಪೌರತ್ವ ಕಾಯ್ದೆ ತಿದ್ದುಪಡಿ ಸೇರಿದಂತೆ ಮೊದಲಾದ ವಿವಾದಿತ ಮಸೂದೆಗಳು ಇದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ನಿರೀಕ್ಷಿಸಲಾಗಿದೆ.

ಭಾರತದ ನೆರೆ ದೇಶಗಳ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದು ಪೌರತ್ವ ತಿದ್ದುಪಡಿ ಮಸೂದೆಯ ಮೂಲ ಉದ್ದೇಶ. ಇದು ಬಿಜೆಪಿಯ ಚುನಾವಣಾ ವಿಷಯವೂ ಆಗಿತ್ತು. ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪ ಎತ್ತುವ ಸಾಧ್ಯತೆ ಇದೆ.

ಮೋದಿ ಸರ್ಕಾರದ ಮಹತ್ವದ ಘೋಷಣೆ: 20 ಲಕ್ಷ ಮಂದಿಗೆ ಲಾಭ!

ಎಲ್ಲ ವಿಷಯ ಚರ್ಚೆಗೆ ಸಿದ್ಧ: ಮೋದಿ

ಭಾನುವಾರ ಸರ್ಕಾರವೇ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ‘ಸರ್ಕಾರವು ಸದನದ ನಿಯಮಾವಳಿಗಳ ಅನ್ವಯ ಎಲ್ಲ ಚರ್ಚೆಗಳಿಗೆ ಸಿದ್ಧವಿದೆ. ಎಲ್ಲ ಪಕ್ಷಗಳು ಸದನ ಸುಗಮವಾಗಿ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಆದರೆ ಕಾಶ್ಮೀರದ ನ್ಯಾಷನಲ್‌ ಕಾನ್ಫರೆನ್ಸ್‌ನ ಹಿರಿಯ ಸಂಸದ ಫಾರೂಕ ಅಬ್ದುಲ್ಲಾಗೆ ಗೃಹಬಂಧನ ವಿಧಿಸಿದ ವಿಷಯವನ್ನು ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್‌ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಸಂಸದರು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಬ್ದುಲ್ಲಾ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಿ ಸದನಕ್ಕೆ ಬರಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ 27 ಪಕ್ಷಗಳು ಪಾಲ್ಗೊಂಡಿದ್ದವು.

click me!