
ನವದೆಹಲಿ: ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಮೂವರು ಮಕ್ಕಳು ಹಾಗೂ ಭಾರತೀಯ ಮೂಲದ ಪತ್ನಿ ಉಷಾ ವ್ಯಾನ್ಸ್ ಜೊತೆ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ಪಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆಡಿ ವ್ಯಾನ್ಸ್ ಅವರ ಕುಟುಂಬವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಇಲ್ಲಿ ಜೆಡಿ ವ್ಯಾನ್ಸ್ ಅವರಿಗೆ ಭಾರತೀಯ ಮೂರು ಸೇನೆಯಿಂದ ಔಪಚಾರಿಕ ಗೌರವ ರಕ್ಷೆ ( tri-services ceremonial guard of honour)ನೀಡಲಾಯ್ತು. ಇದೇ ವೇಳೆ ಜೆಡಿ ವ್ಯಾನ್ಸ್ ಅವರ ಪತ್ನಿ ಹಾಗೂ ಪೋಷಕರು ಹಾಗೂ ಮೂವರು ಮಕ್ಕಳಲ್ಲಿ ಪುತ್ರರಾದ ಇವಾನ್, ವಿವೇಕ್ ಹಾಗೂ ಮಗಳು ಮಿರಾಬೆಲ್ ವ್ಯಾನ್ಸ್ ಅವರು ಭಾರತೀಯ ಧಿರಿಸಿನಲ್ಲಿ ಕಂಗೊಳಿಸಿದರು. ಗಂಡು ಮಕ್ಕಳಾದ ಇವಾನ್ ಹಾಗೂ ವಿವೇಕ್ ಕುರ್ತಾ ಫೈಜಾಮ್ ಧರಿಸಿದ್ದರೆ, ಪುತ್ರಿ ನೀಲಿ ಬಣ್ಣದ ಸೂಟ್ ಧರಿಸಿದ್ದಳು.
ವ್ಯಾನ್ಸ್ ಮಕ್ಕಳಲ್ಲಿ ಹಿರಿಯವನಾದ ಇವಾನ್ ಭಾರತ ಪ್ರವಾಸಕ್ಕೆ ನೀಲಿ ಬಣ್ಣದ ಕುರ್ತಾ ಧರಿಸಿದ್ದರೆ, ಆತನ ಸಹೋದರ ವಿವೇಕ್ ಹಳದಿ ಬಣ್ಣದ ಕುರ್ತಾ ಧರಿಸಿದ್ದರು. ಮೊದಲಿಗೆ ಜೆಡಿ ವ್ಯಾನ್ಸ್ ಹಾಗೂ ಪತ್ನಿ ವಿಮಾನವಿಳಿದು ಬಂದರೆ ನಂತರ ಗಂಡು ಮಕ್ಕಳಾದ ಇವಾನ್ ಹಾಗೂ ವಿವೇಕ್ ಆಗಮಿಸಿದರು. ನಂತರ 3 ವರ್ಷದ ಪುತ್ರಿ ಮೀರಾಬೆಲ್ ವ್ಯಾನ್ಸೆಯನ್ನು ಅವರ ಕುಟುಂಬದ ಸದಸ್ಯರೊಬ್ಬರು ಕೈ ಹಿಡಿದುಕೊಂಡು ವಿಮಾನದಿಂದ ಇಳಿಸುತ್ತಿದ್ದರು. ಈ ವೇಳೆ ಜೆಡಿ ವ್ಯಾನ್ಸೆ ಅವರು ಮೇಲೆ ಹೋಗಿ ಮಗಳನ್ನು ಎತ್ತಿಕೊಂಡು ಕೆಳಗೆ ಬಂದರು. ಇಡೀ ಕುಟುಂಬವನ್ನು ಸಚಿವ ಅಶ್ವಿನ್ ವೈಷ್ಣವ್ ತಾಮ್ರಕ್‌ನಲ್ಲಿ ನಿಂತು ಸ್ವಾಗತಿಸಿದರು.
ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕುಟುಂಬದೊಂದಿಗೆ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿ ವ್ಯಾನ್ಸ್ ಕುಟುಂಬಕ್ಕೆ ಇಂದು ಸಂಜೆ ಔತಣಕೂಟ ಆಯೋಜಿಸಿದ್ದಾರೆ. ಜೆಡಿ ವ್ಯಾನ್ಸ್ ಅವರ ಜೊತೆ ಐದು ಸದಸ್ಯರ ನಿಯೋಗವೂ ಇದೆ. ಇವರಲ್ಲಿ ಪೆಂಟಗಾನ್ ಹಾಗೂ ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟನ್ನು ಪ್ರತಿನಿಧಿಸುವ ಸದಸ್ಯರು ಇದ್ದಾರೆ.
ಪ್ರಧಾನಿಯನ್ನು ಭೇಟಿ ಮಾಡಿದ ನಂತರ ಜೆಡಿ ವ್ಯಾನ್ಸ್ ಕುಟುಂಬವೂ ರಾಜಸ್ಥಾನದ ಜೈಪುರ ಹಾಗೂ ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಮಂಗಳವಾರ ಐತಿಹಾಸಿಕ ಅಮೀರ್ ಪ್ಯಾಲೇಸ್‌ಗೆ ಅಮೆರಿಕಾ ಉಪಾಧ್ಯಕ್ಷ ವ್ಯಾನ್ಸ್ ಕುಟುಂಬ ಭೇಟಿ ನೀಡಲಿದೆ. ನಂತರ ಅದೇ ದಿನ ರಾಜಸ್ಥಾನದ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಭಾರತ-ಅಮೆರಿಕಾ ವ್ಯವಹಾರ ಶೃಂಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಶೃಂಗದಲ್ಲಿ ಅಮೆರಿಕಾ ಹಾಗೂ ಭಾರತದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವ್ಯಾನ್ಸ್ ಅವರು ಈ ಸಭೆಯಲ್ಲಿ ಎರಡು ದೇಶಗಳ ನಡುವೆ ಹೂಡಿಕೆ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ದ್ವೀಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ನಂತರ ಬುಧವಾರ ಆಗ್ರಾಕ್ಕೆ ಆಗಮಿಸಲಿರುವ ಜೆಡಿ ವ್ಯಾನ್ಸ್ ಹಾಗೂ ಕುಟುಂಬ ಅಲ್ಲಿನ ವಿಶ್ವ ಪ್ರಸಿದ್ಧ ಪ್ರೇಮಸೌಧಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಮೂರು ಗಂಟೆಗಳ ಕಾಲ ಸಮಯ ಕಳೆಯಲಿದ್ದಾರೆ. ಅದೇ ದಿನ ಮಧ್ಯಾಹ್ನ ಅವರು ಜೈಪುರಕ್ಕೆ ಮರಳಲಿದ್ದು, ನಂತರ ಜೈಪುರ ನಗರದಲ್ಲಿರುವ ಸಿಟಿ ಪ್ಯಾಲೇಸ್‌ಗೆ ಭೇಟಿ ನೀಡಲಿದ್ದಾರೆ. ನಂತರ ಗುರುವಾರ ಮತ್ತೆ ವಾಷಿಂಗ್ಟನ್‌ಗೆ ಅವರು ವಾಪಾಸಾಗಲಿದ್ದಾರೆ. ಅಮೆರಿಕದೊಂದಿಗೆ ಭಾರತ ವ್ಯಾಪಾರ ಒಪ್ಪಂದದ ಮಾತುಕತೆಗೆ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಭಾರತದ ಮೇಲೆ ಅಮೆರಿಕದ ತೆರಿಗೆ:
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೀರ್ಘಕಾಲದ ಸಂಬಂಧದ ನಂತರ ಎರಡೂ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ. ಭಾರತದ ಮೇಲೆ ಅಮೆರಿಕ ವಿಧಿಸಿರುವ 26% ತೆರಿಗೆಯ ಹಿನ್ನೆಲೆಯಲ್ಲಿ ವ್ಯಾನ್ಸ್ ಭೇಟಿ ಮಹತ್ವ ಪಡೆದುಕೊಂಡಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಉತ್ತಮ ಸಂಬಂಧವಿತ್ತು. 'ಹೌಡಿ ಮೋದಿ' ಮತ್ತು 'ನಮಸ್ತೆ ಟ್ರಂಪ್' ನಂತಹ ಕಾರ್ಯಕ್ರಮಗಳು ಎರಡೂ ದೇಶಗಳಲ್ಲಿ ನಡೆದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ