
ನವದೆಹಲಿ/ಡೆಹ್ರಾಡೂನ್ (ಜೂ.29): ಭಾರತೀಯ ಶೂಟಿಂಗ್ ಜಗತ್ತಿನ ದಂತಕಥೆ ಜಸ್ಪಾಲ್ ರಾಣಾ ಅವರು ಜೂನ್ 12 ರಂದು ಹಠಾತ್ ನಿಧನರಾದ ಆಘಾತದಿಂದ ಇಡೀ ದೇಶವೇ ಇನ್ನು ಹೊರಬಂದಿಲ್ಲ. ಭಾರತದ ಶ್ರೇಷ್ಠ ಪಿಸ್ತೂಲ್ ಶೂಟರ್‌ಗಳಲ್ಲಿ ಒಬ್ಬರಾಗಿದ್ದ ರಾಣಾ (49 ವರ್ಷ) ಅವರು ಕಾರ್ಡಯಾಕ್ ಅರೆಸ್ಟ್‌ನಿಂದಾಗಿ ಕೊನೆಯುಸಿರೆಳೆದಿದ್ದರು ಮತ್ತು ಅವರ ಅಂತ್ಯಕ್ರಿಯೆಯನ್ನು ವಾರಾಣಸಿಯಲ್ಲಿ ನೆರವೇರಿಸಲಾಗಿತ್ತು. ಈ ಹಠಾತ್ ನಿಧನದ ದುಃಖವನ್ನು ಭರಿಸಲಾಗದೆ ರಾಣಾ ಅವರ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿರುವಾಗಲೇ, ಮನೆಯಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ಕ್ಯಾನ್ಸರ್‌ಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಸ್ಪಾಲ್ ರಾಣಾ ಅವರ ತಾಯಿ ಶ್ಯಾಮಾ ದೇವಿ ರಾಣಾ ಅವರು ಕಾರಣದಿಂದಾಗಿ ದೆಹಲಿಯಲ್ಲಿ ನಿಧನರಾಗಿದ್ದಾರೆ. ಮಗ ತೀರಿಕೊಂಡ ಕೆಲವೇ ದಿನಗಳಲ್ಲಿ ತಾಯಿಯೂ ಇಹಲೋಕ ತ್ಯಜಿಸಿರುವುದು ಇಡೀ ಕುಟುಂಬವನ್ನು ಕಂಗೆಡಿಸಿದೆ.
ಶ್ಯಾಮಾ ದೇವಿ ಅವರು ಜೂನ್ 28 ರಂದು ನವದೆಹಲಿಯ ಆರ್‌ಆರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ ಮಗನ ಜನ್ಮದಿನದಂದೆ ತಾಯಿ ಸಾವು ಕಂಡಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ 'X' (ಟ್ವಿಟರ್) ಖಾತೆಯಲ್ಲಿ ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಜೂನ್ 17 ರಂದು ಆಕೆ ಸಾವು ಕಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಅವರ ಕುಟುಂಬ ಈ ಸುದ್ದಿಯನ್ನು ನಿರಾಕರಿಸಿತ್ತು.
ಸಿಎಂ ಧಾಮಿ ಅವರು ತಮ್ಮ ಪೋಸ್ಟ್‌ನಲ್ಲಿ, "ಶ್ರೀ ನಾರಾಯಣ್ ಸಿಂಗ್ ರಾಣಾ ಜಿ ಅವರ ಧರ್ಮಪತ್ನಿ ಹಾಗೂ ಭಾರತದ ಹೆಮ್ಮೆಯ ಶೂಟರ್, ಪದ್ಮಶ್ರೀ ದಿವಂಗತ ಜಸ್ಪಾಲ್ ರಾಣಾ ಜಿ ಅವರ ಪೂಜನೀಯ ತಾಯಿ ಶ್ರೀಮತಿ ಶ್ಯಾಮಾ ದೇವಿ ರಾಣಾ ಅವರ ನಿಧನದ ಅತ್ಯಂತ ದುಃಖದ ಸುದ್ದಿ ನಮಗೆ ಲಭಿಸಿದೆ. ಈ ಭೀಕರ ದುಃಖದ ಸಮಯದಲ್ಲಿ ನನ್ನ ಆಳವಾದ ಸಂತಾಪಗಳು ಶೋಕತಪ್ತ ಕುಟುಂಬದೊಂದಿಗಿವೆ. ಭಗವಂತನು ಅಗಲಿದ ಆತ್ಮಕ್ಕೆ ತನ್ನ ಚರಣಗಳಲ್ಲಿ ಸ್ಥಾನ ನೀಡಲಿ ಮತ್ತು ಈ ಭರಿಸಲಾಗದ ನಷ್ಟವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿ," ಎಂದು ಬರೆದಿದ್ದಾರೆ.
श्री नारायण सिंह राणा जी की धर्मपत्नी एवं प्रसिद्ध भारतीय निशानेबाज, पद्मश्री स्व. जसपाल राणा जी की पूज्य माताजी के निधन का अत्यंत दुःखद समाचार प्राप्त हुआ।
इस कठिन घड़ी में मेरी गहरी संवेदनाएं शोकाकुल परिजनों के साथ हैं। ईश्वर पुण्यात्मा को अपने श्रीचरणों में स्थान प्रदान करें… pic.twitter.com/KISVtyLqJL— Pushkar Singh Dhami (@pushkardhami) June 28, 2026
ಇದಕ್ಕೂ ಮುನ್ನ, ಜೂನ್ 14 ರಂದು ವಾರಾಣಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಜಸ್ಪಾಲ್ ರಾಣಾ ಅವರಿಗೆ ಅಂತಿಮ ನಮನ ಸಲ್ಲಿಸಲು ನೂರಾರು ಜನ ಭಾವುಕವಾಗಿ ನೆರೆದಿದ್ದರು. ಅವರ ಪಾರ್ಥಿವ ಶರೀರವನ್ನು ಡೆಹ್ರಾಡೂನ್‌ನಿಂದ ಏರ್ ಆಂಬ್ಯುಲೆನ್ಸ್ ಮೂಲಕ ವಾರಾಣಸಿಗೆ ತರಲಾಗಿತ್ತು. ಶೂಟಿಂಗ್ ಲೋಕದ ಈ ಐಕಾನ್‌ಗೆ ಅಂತಿಮ ಸಂಸ್ಕಾರದ ಮುನ್ನ ಪೂರ್ಣ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು.
ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬಂದಿಳಿಯುತ್ತಿದ್ದಂತೆ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದರು. ಸಾರ್ವಜನಿಕರ ದರ್ಶನಕ್ಕಾಗಿ ದೇಹವನ್ನು ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಇರಿಸಲಾಗಿತ್ತು. ನಂತರ ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ರಾಜ್‌ಘಾಟ್‌ಗೆ ಮತ್ತು ಬಳಿಕ ಕೋರ್ಟ್ ಆವರಣದ ಮಾರ್ಗವಾಗಿ ಮಣಿಕರ್ಣಿಕಾ ಘಾಟ್‌ಗೆ ತರಲಾಯಿತು. ಅಲ್ಲಿ ಜಸ್ಪಾಲ್ ಅವರ ಪುತ್ರ ಯುವರಾಜ್ ಅವರು ತಂದೆಯ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಜಸ್ಪಾಲ್ ಅವರ ಸಹೋದರ ಸುಭಾಷ್, ಕುಟುಂಬದ ಇತರ ಸದಸ್ಯರು, ಶೂಟಿಂಗ್ ಕ್ಷೇತ್ರದ ಗಣ್ಯರು ಮತ್ತು ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಹಾಗೂ ಬಿಜೆಪಿ ಶಾಸಕ ಪಂಕಜ್ ಸಿಂಗ್, ರಾಜ್ಯ ಸಚಿವ ಶಂಕರ್ ಗಿರಿ ಸೇರಿದಂತೆ ಹಲವು ರಾಜಕೀಯ ನಾಯಕರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಜಸ್ಪಾಲ್ ರಾಣಾ ಅವರು ಕೇವಲ ಆಟಗಾರನಾಗಿ ಮಾತ್ರವಲ್ಲದೆ, ಕೋಚ್ ಆಗಿಯೂ ಅದ್ಭುತ ಯಶಸ್ಸು ಕಂಡಿದ್ದರು. 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ (Manu Bhaker) ಅವರು ಎರಡು ಐತಿಹಾಸಿಕ ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ಕೋಚ್ ಆಗಿ ಜಸ್ಪಾಲ್ ರಾಣಾ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಭಾರತೀಯ ಕ್ರೀಡಾಲೋಕಕ್ಕೆ ಅಪಾರ ಕೊಡುಗೆ ನೀಡಿದ ಇಂತಹ ಶ್ರೇಷ್ಠ ದಿಗ್ಗಜ ಹಾಗೂ ಅವರ ತಾಯಿಯನ್ನು ಕಳೆದುಕೊಂಡ ರಾಣಾ ಕುಟುಂಬ ಸದ್ಯ ತೀವ್ರ ಶೋಕದಲ್ಲಿ ಮುಳುಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ