
ಅಯೋಧ್ಯೆ: ಇಲ್ಲಿನ ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಣ ದೋಚಿದ್ದ ಆರೋಪಿಗಳ ಬ್ರಹ್ಮಾಂಡ ಭ್ರಷ್ಟಾಚಾರ ದಿನೇ ದಿನೇ ಬೆಳಕಿಗೆ ಬರುತ್ತಿದೆ. ಅತ್ಯಂತ ಕಡಿಮೆ ವೇತನ ಹೊಂದಿದ್ದ ದೇಗುಲದ ಕೆಲ ಸಿಬ್ಬಂದಿ, ಹಣ ಎಣಿಕೆಗೆ ನಿಯೋಜಿತ ಗುತ್ತಿಗೆ ಸಿಬ್ಬಂದಿಗಳ ಅತ್ಯಲ್ಪ ಅವಧಿಯಲ್ಲೇ ಐಷಾರಾಮಿ ಬೈಕ್, ಕಾರು, ಫ್ಲ್ಯಾಟ್, ಫಾರ್ಮ್‌ಹೌಸ್ ಖರೀದಿಸಿದ್ದು ಕಂಡುಬಂದಿದೆ. ಜೊತೆಗೆ ಕೆಲ ಸಿಬ್ಬಂದಿಗಳ ಆದಾಯಕ್ಕೂ ಅವರು ಹೊಂದಿದ ಆಸ್ತಿಗೂ 100 ಪಟ್ಟು ವ್ಯತ್ಯಾಸ ಕಂಡುಬಂದಿದೆ.
ದೇಗುಲದಲ್ಲಿ ಹುಂಡಿ ಹಣ ಎಣಿಕೆಗೆ ನಿಯೋಜಿತರಾಗಿದ್ದ ಅನುಕಲ್ಪ್ ಮಿಶ್ರಾ ಹಾಗೂ ಆತನ ಭಾವ ಲವಕುಶ ಮಿಶ್ರಾ ಈ ಹಿಂದೆ ಬಡವರಾಗಿದ್ದರು. ರಾಮಮಂದಿರ ದೇಣಿಗೆ ಎಣಿಸುವ ಕೆಲಸಕ್ಕೆ ಸೇರಿಕೊಂಡ ಬಳಿಕ ಐಷಾರಾಮಿ ಜೀವನ ಪ್ರಾರಂಭಿಸಿದ್ದರು ಎಂದು ತಿಳಿದುಬಂದಿದೆ.ಈ ಬಗ್ಗೆ ತನಿಖಾಧಿಕಾರಿಗಳಿಗೆ ಅವರ ನೆರೆಹೊರೆಯವರು ಈ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅನುಕಲ್ಪ್ ಮೊದಲು ಮಂದಿರದ ಕೆಲಸಕ್ಕೆ ಸೇರಿದ್ದ. ನಂತರ ಬಂಧು ಲವಕುಶ ಮಿಶ್ರಾನನ್ನೂ ದೇಣಿಗೆ ಎಣಿಕೆ ಕೆಲಸಕ್ಕೆ ಸೇರಿಸಿಕೊಂಡ ಎಂದಿದ್ದಾರೆ.
‘ಅನುಕಲ್ಪ್ ಮಿಶ್ರಾ ಕುಟುಂಬ ಈ ಹಿಂದೆ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಆದರೆ ಈಗ ಅವರಿಗೆ ಯಾವುದರ ಅಗತ್ಯವೂ ಇಲ್ಲ. ಅಷ್ಟೊಂದು ದಿಢೀರ್ ಸ್ಥಿತಿವಂತರಾಗಿದ್ದಾರೆ. ಅನುಕಲ್ಪ್ ಇತ್ತೀಚೆಗೆ ಗ್ರಾಮದ ಹೊರವಲಯದಲ್ಲಿ ಫಾರ್ಮ್‌ಹೌಸ್ ಒಂದನ್ನು ನಿರ್ಮಿಸಿದ್ದಾನೆ. ಕಳೆದ ವರ್ಷ ಅಯೋಧ್ಯೆಯಲ್ಲಿ 65 ಲಕ್ಷ ರು.ಗಳ ಮನೆಯನ್ನೂ ಖರೀದಿಸಿದ್ದಾನೆ. ಅವನ ಬಳಿ ಈಗಾಗಲೇ ಒಂದು ವಾಹನವಿದ್ದರೂ, ಮತ್ತೊಂದು ಸ್ಕಾರ್ಪಿಯೋ ಎಸ್‌ಯುವಿ ಬುಕ್ ಮಾಡಲು ಮುಂದಾಗಿದ್ದ’ ಎಂದು ಗೊತ್ತಾಗಿದೆ.
‘ಇನ್ನು ಅವನ ಭಾವ ಲವಕುಶ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದವನು ಇತ್ತೀಚೆಗೆ 1 ಲಕ್ಷ ರು.ಗಳಿಗೂ ಹೆಚ್ಚು ಬೆಲೆಯ ಬೈಕ್ ಖರೀದಿಸಿದ್ದಾನೆ’ ಎಂದು ತಿಳಿಸಿದ್ದಾರೆ.
ಅಯೋಧ್ಯೆ: ರಾಮಮಂದಿರದ ದೇಣಿಗೆ ಅಕ್ರಮದ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಮೊದಲೇ ಮಾಹಿತಿಯಿತ್ತು. ಆದರೂ ದೂರು ದಾಖಲಿಸದೆ ನಿರ್ಲಕ್ಷ್ಯ ತೋರಿತು ಎಂಬ ಆರೋಪ ಕೇಳಿಬಂದಿದೆ.
ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮೌಖಿಕ ಸೂಚನೆ ಮೇರೆಗೆ ಟ್ರಸ್ಟ್‌ನ ಪದಾಧಿಕಾರಿಗಳು ಅಕ್ರಮದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಅದರ ಹಿನ್ನೆಲೆಯಲ್ಲಿ ಪೊಲೀಸರು ಜೂ.5ರಂದು ಆರೋಪಿ ಅವಿನಾಶ್ ಶುಕ್ಲಾನ ಮನೆ ಮೇಲೆ ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡರು. ಆದರೆ ಟ್ರಸ್ಟ್ ಪೊಲೀಸರಿಗೆ ಯಾವುದೇ ಅಧಿಕೃತ ದೂರು ನೀಡಿರಲಿಲ್ಲ. ಅಂದು ನಡೆದ ಶೋಧ ಅನಧಿಕೃತವಾಗಿ ನಡೆದಿತ್ತೇ ಹೊರತು, ಎಫ್‌ಐಆರ್ ದಾಖಲಾಗಿರಲಿಲ್ಲ ಎಂದು ತಿಳಿದುಬಂದಿದೆ. ಇದು ಆರಂಭದಲ್ಲಿ ಟ್ರಸ್ಟ್ ಮೌನ ವಹಿಸಿದ್ದೇಕೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ