ಅಯೋಧ್ಯೆ ಮೇಲೆ ಭೀಕರ ದಾಳಿಗೆ ಜೈಷ್ ಉಗ್ರರ ಸಂಚು!

By Suvarna NewsFirst Published Dec 26, 2019, 8:53 AM IST
Highlights

ಅಯೋಧ್ಯೆಯಲ್ಲಿ ದಾಳಿಗೆ ಜೈಷ್‌ ಸಂಚು| ಅಜರ್‌ನ ಸಂದೇಶ ಗುಪ್ತಚರ ದಳಕ್ಕೆ ಲಭ್ಯ| ಇದರ ಬೆನ್ನಲ್ಲೇ ಅಯೋಧ್ಯೆಯಲ್ಲಿ ಭದ್ರತೆ ಬಿಗಿ

ನವದೆಹಲಿ[ಡಿ.26]: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಹಿಂದೂ ಸಂಘಟನೆಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ, ಜೈಷ್‌ ಎ ಮೊಹಮ್ಮದ್‌ ಉಗ್ರವಾದಿ ಸಂಘಟನೆ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಜೈಷ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಟೆಲಿಗ್ರಾಂ ಆ್ಯಪ್‌ನಲ್ಲಿ ಕಳಿಸಿದ ಸಂದೇಶವೊಂದನ್ನು ಗುಪ್ತಚರ ದಳ ಭೇದಿಸಿದ್ದು, ಅದರಲ್ಲಿ ಅಯೋಧ್ಯೆ ಮೇಲಿನ ದಾಳಿ ಸಂಚಿನ ಮಾಹಿತಿ ಇದೆ. ಜೈಷ್‌ ಮತ್ತು ಇತರ ಉಗ್ರರು ಟೆಲಿಗ್ರಾಂ ಆ್ಯಪ್‌ಅನ್ನೇ ಹೆಚ್ಚು ಬಳಸುತ್ತಾರೆ ಎಂಬುದು ಇಲ್ಲಿ ಗಮನಾರ್ಹ.

ಈ ಸಂದೇಶದ ಮಾಹಿತಿಯನ್ನು ಭದ್ರತಾ ಪಡೆಗಳ ಜತೆ ಗುಪ್ತಚರ ದಳ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಅಯೋಧ್ಯೆಯಲ್ಲಿ ಭದ್ರತೆ ಬಿಗಿ ಮಾಡಲಾಗಿದೆ. ಇದಲ್ಲದೆ, ದೇಶದಲ್ಲಿನ ಭದ್ರತಾ ಸಂಸ್ಥೆಗಳು ಜೈಷ್‌ ಜಾಲದ ಮೇಲೆ ಹದ್ದಿನ ಕಣ್ಣು ಇರಿಸಿವೆ.

ಈ ಹಿಂದೆ ಜೈಷ್‌ ಅನೇಕ ಉಗ್ರ ಕೃತ್ಯಗಳನ್ನು ಭಾರತದಲ್ಲಿ ಕೈಗೊಂಡಿದೆ. 2001ರ ಸಂಸತ್‌ ಮೇಲಿನ ದಾಳಿ, 2019ರ ಪುಲ್ವಾಮಾ ಸಿಆರ್‌ಪಿಎಫ್‌ ಯೋಧರ ಮೇಲಿನ ದಾಳಿ ಪ್ರಮುಖವಾದವು. ಇದರ ಮುಖ್ಯಸ್ಥ ಅಜರ್‌ ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಎಂದು ಈ ವರ್ಷ ಮೇ 1ರಂದು ಘೋಷಿತನಾಗಿದ್ದ.

click me!