ಆಂಧ್ರ ಚುನಾವಣೆ: ಗೆದ್ದ ಜಗನ್‌, ಪ್ರಶಾಂತ್‌ ಕಿಶೋರ್‌ಗೆ 37 ಕೋಟಿ ರೂ ಶುಲ್ಕ!

By Web DeskFirst Published Nov 19, 2019, 10:39 AM IST
Highlights

ಆಂಧ್ರ ಚುನಾವಣೆ ಗೆದ್ದಿದ್ದಕ್ಕೆ ಪ್ರಶಾಂತ್‌ ಕಿಶೋರ್‌ಗೆ ಜಗನ್‌ 37 ಕೋಟಿ ಶುಲ್ಕ!| ಎಲೆಕ್ಷನ್‌ಗಾಗಿ ವೈಎಸ್ಸಾರ್‌ ಪಕ್ಷದಿಂದ 85 ಕೋಟಿ ಖರ್ಚು| ಆಯೋಗಕ್ಕೆ ಸಲ್ಲಿಸಿರುವ ವೆಚ್ಚದ ಹೇಳಿಕೆಯಲ್ಲಿದೆ ಮಾಹಿತಿ

ಅಮರಾವತಿ[ನ.19]: ಲೋಕಸಭೆ ಹಾಗೂ ಆಂಧ್ರಪ್ರದೇಶ ವಿಧಾನಸಭೆಗೆ ಏಪ್ರಿಲ್‌- ಮೇನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ ಹಿನ್ನೆಲೆಯಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸಿಕೊಟ್ಟಿದ್ದ ಪ್ರಶಾಂತ್‌ ಕಿಶೋರ್‌ ಅವರ ಸಂಸ್ಥೆಗೆ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಬರೋಬ್ಬರಿ 37.57 ಕೋಟಿ ರು. ಶುಲ್ಕ ಪಾವತಿಸಿದೆ.

ನಾಯ್ಡು ಕನಸಿನ ರಾಜಧಾನಿ ಅಮರಾವತಿಗೆ ಎಳ್ಳುನೀರು, ಒಪ್ಪಂದ ರದ್ದು!

ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಚುನಾವಣಾ ವೆಚ್ಚ ವರದಿಯಲ್ಲಿ ಈ ಕುರಿತ ಮಾಹಿತಿ ಇದೆ. ಚುನಾವಣಾ ತಂತ್ರಗಾರ ಖ್ಯಾತಿಯ ಪ್ರಶಾಂತ್‌ ಕಿಶೋರ್‌ ಅವರು ನಡೆಸುತ್ತಿರುವ ಐ-ಪ್ಯಾಕ್‌ ಸಂಸ್ಥೆ ಜತೆಗೆ ಜಗನ್‌ ರೆಡ್ಡಿ ಅವರು ಒಪ್ಪಂದ ಮಾಡಿಕೊಂಡಿದ್ದರು. ಚುನಾವಣೆ ಹಾಗೂ ಅದಕ್ಕೂ ಮುಂಚೆ ಜಗನ್ಮೋಹನ ರೆಡ್ಡಿ ಅವರು ನಡೆಸಿದ 3648 ಕಿ.ಮೀ. ಪಾದಯಾತ್ರೆ ಸಂದರ್ಭದಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ಜತೆ ಐ-ಪ್ಯಾಕ್‌ ಕೆಲಸ ಮಾಡಿತ್ತು. 175 ಸದಸ್ಯ ಬಲದ ಆಂಧ್ರ ವಿಧಾನಸಭೆಯಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌ 151 ಸ್ಥಾನ ಗೆಲ್ಲಲು, ಆಂಧ್ರದ 25 ಲೋಕಸಭಾ ಕ್ಷೇತ್ರಗಳ ಪೈಕಿ 22ರಲ್ಲಿ ಜಯಭೇರಿ ಬಾರಿಸಲು ಐ-ಪ್ಯಾಕ್‌ ಶ್ರಮವೂ ಇತ್ತು.

ವೈಎಸ್ಸಾರ್‌ ಕಾಂಗ್ರೆಸ್ಸಿನ ವರದಿಯ ಪ್ರಕಾರ, ಚುನಾವಣೆ ಘೋಷಣೆಗೂ ಮುನ್ನ ಪಕ್ಷದ ಖಾತೆಯಲ್ಲಿ 74 ಲಕ್ಷ ರು. ಇತ್ತು. ಚುನಾವಣೆ ಮುಕ್ತಾಯವಾಗುವಷ್ಟರಲ್ಲಿ ದೇಣಿಗೆ ರೂಪದಲ್ಲಿ 221 ಕೋಟಿ ರು. ಪಕ್ಷಕ್ಕೆ ಹರಿದು ಬಂದಿತ್ತು. ಆ ಪೈಕಿ 85 ಕೋಟಿ ರು. ಹಣವನ್ನು ಪಕ್ಷ ಖರ್ಚು ಮಾಡಿದೆ. ಮಾಧ್ಯಮಗಳ ಜಾಹೀರಾತಿಗೆ 36 ಕೋಟಿ ರು. ವೆಚ್ಚ ಮಾಡಿದೆ. ಅದರಲ್ಲಿ 24 ಕೋಟಿ ರು. ಮೊತ್ತದ ಜಾಹೀರಾತುಗಳನ್ನು ಜಗನ್‌ ಪಡೆತನದ ಮಾಧ್ಯಮ ಸಂಸ್ಥೆಗಳಿಗೇ ನೀಡಲಾಗಿದೆ. ವೆಚ್ಚಗಳು ಪೂರ್ಣಗೊಂಡ ಬಳಿಕ ಪಕ್ಷದ ಖಾತೆಯಲ್ಲಿ 138 ಕೋಟಿ ರು. ಹಣ ಉಳಿದಿದೆ.

ನಾನು 3 ಮದುವೆಯಾದ್ರೆ ನಿಮ್ಗೇನು ಪ್ರಾಬ್ಲಂ? ಸಿಎಂ ಮೇಲೆ ಪವನ್ ಕಲ್ಯಾಣ್ ಗರಂ!

ಮತ್ತೊಂದೆಡೆ, ತೆಲುಗುದೇಶಂ ಪಕ್ಷ ಸಲ್ಲಿಸಿರುವ ಲೆಕ್ಕದ ವರದಿ ಪ್ರಕಾರ, ಆ ಪಕ್ಷ ಚುನಾವಣೆಯಲ್ಲಿ 77 ಕೋಟಿ ರು. ಖರ್ಚು ಮಾಡಿದೆ. ಚುನಾವಣೆ ಮುಗಿದ ಬಳಿಕ ಖಾತೆಯಲ್ಲಿ 155 ಕೋಟಿ ರು. ಹಣವಿದೆ.

click me!