ಶಬರಿಮಲೆಗೆ ಭಾರೀ ಭಕ್ತರ ಆಗಮನ: ಮೊದಲ ದಿನ 3 ಕೋಟಿ ರೂ. ಆದಾಯ!

Published : Nov 19, 2019, 09:29 AM IST
ಶಬರಿಮಲೆಗೆ ಭಾರೀ ಭಕ್ತರ ಆಗಮನ: ಮೊದಲ ದಿನ 3 ಕೋಟಿ ರೂ. ಆದಾಯ!

ಸಾರಾಂಶ

ಶಬರಿಮಲೆಗೆ ಭಾರೀ ಭಕ್ತರ ಆಗಮನ: ಮೊದಲ ದಿನ 3 ಕೋಟಿ ರೂ. ಆದಾಯ!| ಕಳೆದ ಮೂರು ದಿನಗಳಲ್ಲಿ ಅಯ್ಯಪ್ಪನ ದರ್ಶನ ಪಡೆದ 70 ಸಾವಿರಕ್ಕೂ ಹೆಚ್ಚು ಭಕ್ತ ಸಾಗರ 

ಶಬರಿಮಲೆ[ನ.19]: ಕಳೆದ ವರ್ಷ ಋುತುಮತಿ ವಯೋಮಾನದ ಮಹಿಳೆಯರ ಪ್ರವೇಶ ಯತ್ನದಿಂದಾಗಿ ಮಹಿಳಾ ಭಕ್ತರು ಮತ್ತು ಬಲಪಂಥೀಯ ಸಂಘಟನೆಗಳ ನಡುವಿನ ದೊಡ್ಡ ಪ್ರಮಾಣದ ಪ್ರತಿಭಟನೆಗೆ ವೇದಿಕೆಯಾಗಿದ್ದ ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಈ ಬಾರಿಯ 2 ತಿಂಗಳ ವಾರ್ಷಿಕ ಯಾತ್ರೆ ಶಾಂತಿ ಮತ್ತು ಸಹಜ ಸ್ಥಿತಿಯಿಂದ ಕೂಡಿದೆ. ಇದರ ಪರಿಣಾಮ 2 ತಿಂಗಳ ವಾರ್ಷಿಕ ಯಾತ್ರೆಗೆ ಚಾಲನೆ ಸಿಕ್ಕ ಶನಿವಾರ(ಮೊದಲ ದಿನ)ವೇ ಅಯ್ಯಪ್ಪ ಸ್ವಾಮಿ ಮಂದಿರಕ್ಕೆ ದಾಖಲೆಯ 3.30 ಕೋಟಿ ರು. ಆದಾಯ ಹರಿದುಬಂದಿದೆ. ಅಲ್ಲದೆ, ಕಳೆದ ಮೂರು ದಿನಗಳಲ್ಲಿ 70 ಸಾವಿರಕ್ಕೂ ಹೆಚ್ಚು ಭಕ್ತ ಸಾಗರವೇ ಅಯ್ಯಪ್ಪನ ದರ್ಶನ ಪಡೆದಿದೆ.

ಕಳೆದ ವರ್ಷ ಅಯ್ಯಪ್ಪನ ದರ್ಶನಕ್ಕಾಗಿ ಮಹಿಳೆಯರು ಶಬರಿಮಲೆಯತ್ತ ಧಾವಿಸಿದ್ದರಿಂದ ಮಹಿಳಾ ಭಕ್ತಾದಿಗಳು ಹಾಗೂ ಬಲಪಂಥೀಯ ಸಂಘಟನೆಗಳ ಪ್ರತಿಭಟನೆ ಮತ್ತು ವಿವಾದದ ಪರಿಣಾಮ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಇದರ ಪರಿಣಾಮ ದೇವಸ್ಥಾನದ ಆದಾಯ 1.28 ಕೋಟಿ ರು.ಗೆ ಸೀಮಿತವಾಗಿತ್ತು. ಈ ನಡುವೆ ಸೋಮವಾರ ಕೂಡಾ 10-50ರ ವಯೋಮಾನದ ಇಬ್ಬರು ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನ ಮಾಡಿದರಾದರೂ ಅವರನ್ನು ಪೊಲೀಸರು ಭದ್ರತಾ ಕಾರಣಗಳಿಗಾಗಿ ಹಿಂದಕ್ಕೆ ಕಳುಹಿಸಿದರು.

ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಟ್ರಾವಂಕೂರ್‌ ದೇವಸ್ವಂ ಮಂಡಳಿ ಅಧ್ಯಕ್ಷ ಎನ್‌. ವಾಸು, ‘ಶಬರಿಮಲೆಯ ‘ಕಳೆದ ವರ್ಷಕ್ಕಿಂತ ಹಾಲಿ ವರ್ಷ ಶಬರಿಮಲೆ ಆದಾಯದಲ್ಲಿ ಶೇ.50ರಷ್ಟುಹೆಚ್ಚಳವಾಗಿದೆ. ಈ ಬಾರಿಯ ವಾರ್ಷಿಕ ಯಾತ್ರೆಗೆ ಭಾರೀ ಪ್ರಮಾಣದ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಅಲ್ಲದೆ, ಈ ವರ್ಷದ 2 ತಿಂಗಳ ಯಾತ್ರೆಯು ಯಾವುದೇ ಅಡಚಣೆಯಿಲ್ಲದೆ, ಸುಸೂತ್ರವಾಗಿ ನಡೆಯಲಿದೆ’ ಎಂದಿದ್ದಾರೆ.

ಏತನ್ಮಧ್ಯೆ, 10ರಿಂದ 50 ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶವಿಲ್ಲದ್ದಾಗ್ಯೂ, ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಆಗಮಿಸಿದ್ದ ಆಂಧ್ರಪ್ರದೇಶದ ಇಬ್ಬರು ಮಹಿಳಾ ಭಕ್ತಾದಿಗಳನ್ನು ಪೊಲೀಸರು ಪಂಪಾ ನದಿಯ ದಡದಿಂದ ವಾಪಸ್‌ ಕಳುಹಿಸಿದ್ದಾರೆ. ಕಳೆದ ಶನಿವಾರವೂ ಶಬರಿಮಲೆಗೆ ತೆರಳಲು ಯತ್ನಿಸುತ್ತಿದ್ದ 10 ಮಹಿಳೆಯರನ್ನು ಪಂಪಾ ನದಿ ಬಳಿಯಿಂದ ವಾಪಸ್‌ ರವಾನಿಸಲಾಗಿತ್ತು.

2018ರ ಸೆಪ್ಟೆಂಬರ್‌ನಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಅವಕಾಶ ನೀಡಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಆ ಬಳಿಕ ಪತ್ರಕರ್ತೆ ಕವಿತಾ ಜಗದಲ್‌ ಹಾಗೂ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಸೇರಿದಂತೆ ಒಟ್ಟಾರೆ 51 ಮಂದಿ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು