ISRO: ಅಪರೂಪದ ವೈಫಲ್ಯ! 750 ಮಕ್ಕಳು ಸಿದ್ಧಪಡಿಸಿದ ಆಜಾದಿ ಉಪಗ್ರಹ ಸೇರಿ 2 ಉಪಗ್ರಹ ವ್ಯರ್ಥ

By Kannadaprabha NewsFirst Published Aug 8, 2022, 6:37 AM IST
Highlights

ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಪುಟ್ಟರಾಕೆಟ್‌ SSLV ವಿಫಲ

750 ಮಕ್ಕಳು ಸಿದ್ಧಪಡಿಸಿದ ಆಜಾದಿ ಉಪಗ್ರಹ ಸೇರಿ 2 ಉಪಗ್ರಹ ವ್ಯರ್ಥ

ಶ್ರೀಹರಿಕೋಟ (ಆ.8) : ಮೊದಲ ಯತ್ನದಲ್ಲೇ ಮಂಗಳನ ಸಮೀಪಕ್ಕೆ ತೆರಳಿ ಇಣುಕಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ಅಪರೂಪದ ವೈಫಲ್ಯ ಕಂಡಿದೆ. ಇಸ್ರೋದ ಮಹತ್ವಾಕಾಂಕ್ಷಿ ‘ಅತಿಚಿಕ್ಕ ರಾಕೆಟ್‌’ (ಸ್ಮಾಲ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌-ಎಸ್‌ಎಸ್‌ಎಲ್‌ವಿ) ಉಡಾವಣೆ ತಾಂತ್ರಿಕ ಕಾರಣಗಳಿಂದ ವಿಫಲಗೊಂಡಿದ್ದು, ಅದರಲ್ಲಿ ಕಳುಹಿಸಿದ್ದ ಎರಡು ಉಪಗ್ರಹಗಳು ನಿಷ್ಕಿ್ರಯಗೊಂಡಿವೆ.

ಇಸ್ರೋದಿಂದ ಮತ್ತೊಂದು ಇತಿಹಾಸ, ಎಸ್ಸೆಸ್ಸೆಲ್ವಿ ಚಿಕ್ಕ ರಾಕೆಟ್‌ ಬಳಸಿ ಉಪಗ್ರಹ ಉಡಾವಣೆ

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು(Azadi Ka Amrit Mahotsava) ವಿಶಿಷ್ಟವಾಗಿ ಆಚರಿಸಲು 750 ಸರ್ಕಾರಿ ಶಾಲಾ ವಿದ್ಯಾರ್ಥಿಗಳು(750 schoolgirls ) ಸಿದ್ಧಪಡಿಸಿದ್ದ ಆಜಾದಿ ಉಪಗ್ರಹ(AzaadiSAT) ಹಾಗೂ ಇನ್ನೊಂದು ಭೂ ಸರ್ವೇಕ್ಷಣಾ ಉಪಗ್ರಹ (EOS-02)ವನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಪುಟ್ಟರಾಕೆಟ್‌(Rocket) ವಿಫಲವಾಗಿದೆ.

ಆಗಿದ್ದೇನು?

ಪೂರ್ವ ನಿಗದಿಯಂತೆ ಭಾನುವಾರ ಬೆಳಗ್ಗೆ 9.18ಕ್ಕೆ ಎಸ್‌ಎಸ್‌ಎಲ್‌ವಿ-ಡಿ1(SSLV D-1) ರಾಕೆಟ್‌ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ(Sriharikota Satish Dhawan Space Centre) ಮೋಡ ಮುಸುಕಿದ ವಾತಾವರಣದಲ್ಲಿ ಉಡಾವಣೆಗೊಂಡಿತು. 56 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ, ಕೇವಲ 34 ಮೀಟರ್‌ ಉದ್ದದ ಹಾಗೂ 120 ಟನ್‌ ಭಾರದ ರಾಕೆಟ್‌ ಮೊದಲ 12 ನಿಮಿಷಗಳ ಕಾಲ ಸರಿಯಾಗಿಯೇ ಚಲಿಸಿತು. ಆದರೆ ನಂತರ ತನ್ನೊಳಗಿದ್ದ ಎರಡು ಉಪಗ್ರಹಗಳನ್ನು 356 ಕಿ.ಮೀ. ಎತ್ತರದ ವೃತ್ತಾಕಾರದ ಕಕ್ಷೆಗೆ ಸೇರಿಸುವ ಬದಲು 356 ಕಿ.ಮೀ. ಎತ್ತರದ ಮೊಟ್ಟೆಯಾಕಾರದ ಕಕ್ಷೆಗೆ ಸೇರಿಸಿಬಿಟ್ಟಿತು. ಅದರಿಂದಾಗಿ ಇಸ್ರೋದ ಮಹತ್ವಾಕಾಂಕ್ಷೆಗೆ ತಣ್ಣೀರೆರಚಿದಂತಾಯಿತು.

ಡೈನೋಸಾರ್ಸ್‌ ರೀತಿ ಮಾನವ ಕೂಡ ಭೂಮಿಯ ಮೇಲೆ ನಶಿಸಿ ಹೋಗ್ತಾನೆ: ಇಸ್ರೋ ಚೀಫ್‌ ಸೋಮನಾಥ್

2 ಉಪಗ್ರಹಗಳು ವ್ಯರ್ಥ- ಇಸ್ರೋ:

‘ರಾಕೆಟ್‌ನ ಉಡಾವಣೆ ನಮ್ಮ ನಿರೀಕ್ಷೆಯಂತೆ ಯಶಸ್ವಿಯಾಯಿತು. ಆದರೆ, ಉಪಗ್ರಹಗಳನ್ನು ಅದು ಅನಿರೀಕ್ಷಿತ ಕಕ್ಷೆಗೆ ಸೇರಿಸಿತು. ಹೀಗಾಗಿ ಅವೆರಡೂ ಉಪಗ್ರಹಗಳನ್ನು ಬಳಸಲು ಸಾಧ್ಯವಿಲ್ಲ’ ಎಂದು ಇಸ್ರೋದ ಪ್ರಕಟಣೆ ತಿಳಿಸಿದೆ.

ಉಪಗ್ರಹಗಳಲ್ಲಿರುವ ಮೋಟಾರ್‌ಗಳನ್ನು ಬಳಸಿ ಏಕೆ ಅವುಗಳನ್ನು ನಿಗದಿತ ಕಕ್ಷೆಗೆ ಸೇರಿಸಲು ಸಾಧ್ಯವಿಲ್ಲ ಎಂಬ ಬಗ್ಗೆ ಇಸ್ರೋ ಏನನ್ನೂ ಹೇಳಿಲ್ಲ. ಅತಿಚಿಕ್ಕ ರಾಕೆಟ್‌ನ ಪ್ರಯೋಗ ವಿಫಲವಾಗುವುದರೊಂದಿಗೆ ಇಸ್ರೋ ತನ್ನ ಸಂಕೀರ್ಣವಾದ ಕ್ರಯೋಜೆನಿಕ್‌ ಎಂಜಿನ್‌ ಬಳಸಿ ಜಿಎಸ್‌ಎಲ್‌ವಿ ರಾಕೆಟ್‌ ಮೂಲಕ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾನದ ಸುರಕ್ಷತೆಯ ಬಗ್ಗೆ ಆತಂಕ ಉಂಟಾಗಿದೆ ಎಂದು ಹೇಳಲಾಗಿದೆ.

ಮತ್ತೆ ಬರುತ್ತೇವೆ:

ಎಸ್‌ಎಸ್‌ಎಲ್‌ವಿ ವೈಫಲ್ಯದ ಬಗ್ಗೆ ತನಿಖೆ ನಡೆಸಿ ಕಾರಣ ಪತ್ತೆಹಚ್ಚಲು ತಜ್ಞರ ಸಮಿತಿ ನೇಮಕ ಮಾಡಲಾಗಿದೆ. ತಜ್ಞರ ಶಿಫಾರಸುಗಳನ್ನು ಅಳವಡಿಸಿಕೊಂಡು ಮತ್ತೆ ಎಸ್‌ಎಸ್‌ಎಲ್‌ವಿ-ಡಿ2 ರಾಕೆಟ್‌ ಜೊತೆ ಬರಲಿದ್ದೇವೆ.

- ಇಸ್ರೋ ಹೇಳಿಕೆ

 

click me!