ಬೃಹತ್, ಮಧ್ಯಮ ಕೈಗಾರಿಕೆ ಸ್ಥಾಪನೆಗೆ ಉತ್ಸುಕನಾಗಿರುವೆ/ ಚಿಕ್ಕೋಡಿ ಕ್ಷೇತ್ರದ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿಶೇಷ ಸಂದರ್ಶನ/ಕೊರೋನಾ ಸಂಕಟದಿಂದ ಹೊರ ಬರುತ್ತಿರುವುದು ಹೇಗೆ? ನೆರೆ ಪರಿಹಾರದ ಕೆಲಸಗಳು ಹೇಗೆ ಸಾಗಿವೆ?
ಜಗದೀಶ ವಿರಕ್ತಮಠ
ಬೆಳಗಾವಿ(ಜೂ. 01) ಒಂದು ಕಡೆ ಅನಾವೃಷ್ಟಿ, ಮತ್ತೊಂದು ಕಡೆ ಅತಿವೃಷ್ಟಿಯಿಂದ ನಲುಗುತ್ತಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬಹುತೇಕ ಹಳ್ಳಿಗಳಿಗೆ ಮೂಲ ಸೌಕರ್ಯ ಕೊರತೆ ಎದುರಾಗದಂತೆ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿವೆ. ಈ ಮಧ್ಯೆ ಕೇವಲ ಒಂದೇ ವರ್ಷದಲ್ಲಿ ಬರ ಹಾಗೂ ನೆರೆಯಿಂದ ಜನತೆ ಕಂಗೆಟ್ಟು ಹೋಗಿದ್ದಾರೆ. ಜತೆಗೆ ಈಗ ಕೊರೋನಾದಿಂದ ಜನರ ಬದುಕು ಈಗ ತತ್ತರಿಸಿ ಹೋಗಿದೆ.
undefined
ಇಂತಹ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಈ ಭಾಗದ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಡುತ್ತಿದ್ದಾರೆ. ಜತೆಗೆ ನಿರುದ್ಯೋಗ ಯುವಕ, ಯುವತಿಯರಿಗೂ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಲ್ಲಿ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ದಾರಿ ಹಾಕಿಕೊಡುವ ಪ್ರಯತ್ನವನ್ನು ಜೊಲ್ಲೆ ಕುಟುಂಬ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದ ಅಣ್ಣಾಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ತಮ್ಮ ಒಂದು ವರ್ಷದ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಾರ್ಥಕ ಒಂದು ವರ್ಷ; ಬಿಎಲ್ ಸಂತೋಷ್
* ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದೆಯೇ?
ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದೆ. ಸಿಆರ್‌ಎಫ್, ಪಿಎಂಜಿಎಸ್‌ವೈ ಯೋಜನೆಯಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ನೀಡಿದೆ. ಈಗಾಗಲೇ ಪಿಎಂಜಿಎಸ್‌ವೈ- ಪೇಸ್-3 ಯೋಜನೆಯಡಿ . 77.20 ಕೋಟಿ ಮಂಜೂರಾಗಿದೆ. ಟೆಂಡರ್ ಕರೆದಿದ್ದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹೃದಯ ಚಿಕಿತ್ಸೆ ಹಾಗೂ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ಪ್ರತಿ ವರ್ಷಕ್ಕೆ .30 ಲಕ್ಷ ಮಂಜೂರು ಮಾಡಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 7 ಜನರಿಗೆ .13.80 ಲಕ್ಷ ಮಂಜೂರಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಬಿಪಿಎಲ್, ಎಪಿಎಲ್ ಪಡಿತರ ಕಾರ್ಡ್ ಹೊಂದಿದವರಿಗೆ ವಿವಿಧ ಚಿಕಿತ್ಸೆಗಳನ್ನು ಆಯ್ದ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ರೈತನಿಗೆ ಪ್ರತಿವರ್ಷ 3 ಕಂತುಗಳಲ್ಲಿ . 6 ಸಾವಿರ ವರ್ಗಾವಣೆ ಮಾಡಲಾಗಿದೆ.
* ಬರ ಹಾಗೂ ನೆರೆಗೆ ಚಿಕ್ಕೋಡಿ ಕ್ಷೇತ್ರವೇ ನಲುಗಿದೆ, ಈ ವೇಳೆ ಸರ್ಕಾರ ಯಾವ ರೀತಿ ಸ್ಪಂದಿಸಿದೆ?
ಬರ ಹಾಗೂ ನೆರೆ ಪ್ರವಾಹವನ್ನು ಕೇಂದ್ರದ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ ಕುಟುಂಬಕ್ಕೆ .10 ಸಾವಿರ ಪರಿಹಾರ ನೀಡಿದೆ. ಪ್ರವಾಹದ ಸಮಯದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಸಂಪೂರ್ಣ ಕುಸಿದ ಮನೆಗಳಿಗೆ ಪುನರ್ ನಿರ್ಮಾಣಕ್ಕಾಗಿ .5ಲಕ್ಷ, ಭಾಗಶಃ .3 ಲಕ್ಷ ಕಡಿಮೆ ಪ್ರಮಾಣದ ಹಾನಿಗೆ . 50 ಸಾವಿರ ಪರಿಹಾರವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಚಿಕ್ಕೋಡಿ ಉಪವಿಭಾಗದ ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಬರ ಹಾಗೂ ನೆರೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
* ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ?
ಜಲಸಂಪನ್ಮೂಲ ಇಲಾಖೆಯಿಂದ ರಸ್ತೆಗಳ ಅಭಿವೃದ್ಧಿಗಾಗಿ ಪ್ರತಿ ಮತಕ್ಷೇತ್ರಕ್ಕೆ ತಲಾ .1.5 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ. ಜಲಸಂಪನ್ಮೂಲ ಇಲಾಖೆಯಿಂದ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ .3 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ಪ್ರತಿ ಮತಕ್ಷೇತ್ರಕ್ಕೆ ತಲಾ .1 ಕೋಟಿಯಂತೆ ಪ್ರಸ್ತಾವ ಮಂಜೂರಾತಿ ಹಂತದಲ್ಲಿದೆ. ಸಂಸದರ ನಿಧಿಯಡಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ .25 ಲಕ್ಷದಂತೆ ವಿವಿಧ ಸಾಂಸ್ಕೃತಿಕ ಭವನ, ಕುಡಿಯುವ ನೀರಿನ ಸೌಲಭ್ಯ, ವ್ಯಾಯಾಮ ಶಾಲೆ ಹಾಗೂ ಇನ್ನಿತರ ಮೂಲ ಸೌಲಭ್ಯಗಳನ್ನು ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಕೊರೋನಾ ತಡೆಗಾಗಿ ಗ್ರಾಪಂ, ಪಪಂ, ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಅಧಿಕಾರಿಗಳೊಂದಿಗೆ ಭೇಟಿಯಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸುವುದರ ಜತೆಗೆ 1 ಲಕ್ಷ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಲಾಗಿದೆ. ಜೊಲ್ಲೆ ಉದ್ಯೋಗ ಸಮೂಹದಿಂದ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಸೂಪರ್‌ವೈಸರ್, ಆಶಾ ಕಾರ್ಯಕರ್ತೆಯರಿಗೆ ಸುಮಾರು 7 ಸಾವಿರ ಛತ್ರಿಗಳನ್ನು ವಿತರಣೆ ಮಾಡಲಾಗಿದೆ.
* ನಿಮ್ಮ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಎಷ್ಟುಅನುದಾನ ತರಲಾಗಿದೆ?
ಜಲಸಂಪನ್ಮೂಲ ಇಲಾಖೆಯಿಂದ ರಸ್ತೆಗಳ ಅಭಿವೃದ್ಧಿಗಾಗಿ 10 ಕೋಟಿ ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗಾಗಿ .3 ಕೋಟಿ ಅನುದಾನ ತರಲಾಗಿದೆ. ಇನ್ನು ಪಿಎಂಜಿಎಸ್‌ವೈ- ಪೇಸ್-3 ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ .77.20 ಕೋಟಿ ಹಾಗೂ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ .5 ಕೋಟಿ ಅನುದಾನ ಮಂಜೂರು ಮಾಡಿಸಿಕೊಳ್ಳಲಾಗಿದೆ.
ಮೋದಿ ಸರ್ಕಾರಕ್ಕೆ ವರ್ಷ; ಪ್ರಭಾಕರ ಕೋರೆ ಮನದಾಳ
* ಹೊಸದಾಗಿ ಸಂಸದರಾಗಿರುವ ನಿಮ್ಮೊಂದಿಗೆ ಸರ್ಕಾರ ಯಾವ ರೀತಿ ಸಹಕಾರ ನೀಡುತ್ತಿದೆ?
ಕೇಂದ್ರ ಹಾಗೂ ರಾಜ್ಯದಲ್ಲಿರುವ ಸರ್ಕಾರಗಳು ಒಂದೇ ಪಕ್ಷಗಳಿರುವುದರಿಂದ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ತಾರತಮ್ಯವಾಗುತ್ತಿಲ್ಲ. ಉತ್ತಮ ಸಹಕಾರ ಸಿಗುತ್ತಿದೆ. ಸ್ವತಃ ಪ್ರಧಾನಿಗಳು ದೇಶದ ಎಲ್ಲಾ ಸಂಸದರೊಂದಿಗೆ ಉಭಯ ಕುಶಲೋಪರಿಗಾಗಿ ಕಾರ್ಯಾಗಾರಗಳನ್ನು ಏರ್ಪಡಿಸಿದ್ದರು.
* ಹೊಸ ಸಂಸದರಿಗೆ ಪ್ರಧಾನಿ ಮೋದಿ ಅವರ ಮಾರ್ಗದರ್ಶನ ಯಾವ ರೀತಿ ಇದೆ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಸ ಸಂಸದರಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದಾರೆ. ಸಂಸತ್ ಅಧಿವೇಶನ ಸಮಯದಲ್ಲಿ ಬಿಡುವಿನ ಅವಧಿಯಲ್ಲಿ 2-3 ದಿನ ಬೆಳಗ್ಗೆಯಿಂದ ಸಂಜೆವರೆಗೂ ಹಲವು ಕಾರ್ಯಾಗಾರಗಳನ್ನು ಮಾಡಿ ಮಾರ್ಗದರ್ಶನ ನೀಡಿದ್ದಾರೆ.
* ನಿರುದ್ಯೋಗ ಹೋಗಲಾಡಿಸಲು ಸರ್ಕಾರದ ಗಮನಕ್ಕೆ ತರಲಾಗಿದೆಯಾ? ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿದೆ?
ನಿರುದ್ಯೋಗ ಹೋಗಲಾಡಿಸಲು ಹಲವು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ಸುಕನಾಗಿದ್ದೇನೆ. ಈ ದಿಶೆಯಲ್ಲಿ ಕೇಂದ್ರದ ಹಲವು ಇಲಾಖೆಗಳ ಜೊತೆ ಸಮನ್ವಯತೆ ಸಾಧಿಸುತ್ತಿದ್ದೇನೆ. ನಿರುದ್ಯೋಗ ಹೋಗಲಾಡಿಸಲು ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ಒಂದು ಸಣ್ಣ ಕೈಗಾರಿಕೆ ಹಾಗೂ ಬ್ಯಾಂಕಿಂಗ್ ಕ್ಷೇತ್ರ ಇನ್ನೂ ಹತ್ತು ಹಲವು ಕ್ಷೇತ್ರಗಳ ಮೂಲಕ ಉದ್ಯೋಗಳನ್ನು ನೀಡುತ್ತಾ ಬರಲಾಗಿದೆ. ಜೊಲ್ಲೆ ಉದ್ಯೋಗ ಸಮೂಹದಿಂದ ಸುಮಾರು 2500 ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿರುದ್ಯೋಗಗಳನ್ನು ಹೋಗಲಾಡಿಸಲು ಹಲವು ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳನ್ನು ಪ್ರಾರಂಭಿಸಲು ಅನುಮತಿ ನಿರೀಕ್ಷೆಯಲ್ಲಿದ್ದೇನೆ.
* ಸಂಸದರಾಗಿ ಆಯ್ಕೆಯಾದ ಕೆಲವೇ ತಿಂಗಳಲ್ಲಿ ನಡೆದ ಅಥಣಿ ಮತ್ತು ಕಾಗವಾಡ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಹೈಕಮಾಂಡ್ ಯಾವ ಸೂಚನೆ ನೀಡಿತ್ತು?
ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯಾಗಿ ನಾನು ಸಂಘಟನೆಗೆ ಒತ್ತು ನೀಡಿ ಆ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ರಾಜ್ಯಮಟ್ಟದ ನಾಯಕರೊಂದಿಗೆ ಸೇರಿ ಉಪಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಎರಡೂ ಕ್ಷೇತ್ರಗಳ ಗೆಲುವಿಗೆ ಸಹಕಾರ ನೀಡಿದ್ದೇನೆ.
* ಹೊಸ ಯೋಜನೆಗಳ ಪ್ರಸ್ತಾವ ಸಲ್ಲಿಸಲಾಗಿದೆಯಾ?
ಪ್ರಮುಖವಾಗಿ ರೈಲ್ವೆ ಯೋಜನೆಗಳ ಕುರಿತು ಪ್ರಸ್ತಾವಗಳನ್ನು ಸಲ್ಲಿಸಿದ್ದೇನೆ. ಚಿಂಚಲಿ, ರಾಯಬಾಗ, ಘಟಪ್ರಬಾ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಪ್ರಸ್ತಾವ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ರೈಲು ಹಳಿಗಳ ಕೆಳಗೆ ಅಲ್ಲಲ್ಲಿ ಅಂಡರ್‌ಪಾಸ್‌ಗಳ ನಿರ್ಮಾಣ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ರಾಯಬಾಗ, ಉಗಾರ, ಕುಡಚಿ ನಿಲ್ದಾಣಗಳಲ್ಲಿ ಸೂಪರ್‌ಫಾಸ್ಟ್ ರೈಲು ನಿಲುಗಡೆಗೆ ಕೋರಲಾಗಿದೆ. ಕುಡಚಿ-ಬಾಗಲಕೋಟ, ಬೆಳಗಾವಿ-ನಿಪ್ಪಾಣಿ-ಕರಾಡ ಹೊಸ ಮಂಜೂರಾದ ಮಾರ್ಗಗಳಿಗೆ ಅನುದಾನ ಬಿಡುಗಡೆಗೆ ಹಾಗೂ ಕೇಂದ್ರ ರಸ್ತೆ ನಿಧಿ ಹಾಗೂ ಪಿಎಂಜಿಎಸ್‌ವೈ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಕೋರಲಾಗಿದೆ. ಚಿಕ್ಕೋಡಿ ಹಾಗೂ ಕಾಗವಾಡ ತಾಲೂಕಿನ ರೈತರ ಜಮೀನುಗಳ ಸವಳು-ಜವಳು ನಿರ್ಮೂಲನೆಗೆ ಅನುದಾನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾಡಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳ ರಸ್ತೆ ಸುಧಾರಣೆಗೆ ಮತ್ತು ಚಿಕ್ಕೋಡಿ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಕೋರಿ ಹಾಗೂ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ ಹಾಗೂ ಅಥಣಿ ತಾಲೂಕುಗಳ ರಸ್ತೆ ಅಭಿವೃದ್ಧಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ.
* ಮುಂಬರುವ 4 ವರ್ಷದಲ್ಲಿ ಚಿಕ್ಕೋಡಿ ಅಭಿವೃದ್ಧಿಗಾಗಿ ಸಂಸದರು ಯಾವ ಕಲ್ಪನೆ ಹೊಂದಿದ್ದಾರೆ?
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಒತ್ತು ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮತಕ್ಷೇತ್ರದ ಎಲ್ಲ ವರ್ಗಗಳ ಅಭ್ಯುದಯವನ್ನು ಸಾಧಿಸುವುದರ ಜತೆಗೆ ರೈತರ ಬಹುದಿನಗಳ ಬೇಡಿಕೆಗಳಾದ ಶ್ರೀ ಮಹಾಲಕ್ಷ್ಮಿ ಏತ ನೀರಾವರಿ ಹಾಗೂ ಕರಗಾಂವ ಏತ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ಮುಖ್ಯವಾಗಿ ಈ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬೆಳಗಾವಿ-ನಿಪ್ಪಾಣಿ-ಕರಾಡ ರೈಲ್ವೆ ಮಾರ್ಗವನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುವುದು.
* ಪ್ರಧಾನಿ ಮೋದಿ ಅವರು ನಿಮಗೆ ಮಾರ್ಗದರ್ಶನ ಮಾಡುತ್ತಾರಾ? ನೀವು ಯಾವುದಾರೂ ಯೋಜನೆ ಜಾರಿಗೆ ತರುವಂತೆ ಅವರಿಗೆ ಸಲಹೆ ನೀಡಿದ್ದೀರಾ?
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವು ರೂಪುರೇಷೆಗಳನ್ನು ಹಾಕಿಕೊಂಡಿದ್ದು, ಪ್ರಧಾನಿ ಮೋದಿ ಅವರ ಗಮನಕ್ಕೆ ತಂದು ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ಮುಖ್ಯವಾಗಿ ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಅನುದಾನ ತರಲಾಗುವುದು.
* ಕ್ಷೇತ್ರದಲ್ಲಿ ಈ ಯೋಜನೆ ಜಾರಿಗೆ ತರುವಂತೆ ಲೋಕಸಭಾ ಕಲಾಪದಲ್ಲಿ ಧ್ವನಿ ಎತ್ತಿದ್ದೀರಾ?
ವಿಶ್ವಗುರು ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣದ ಸಂಪೂರ್ಣ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೆ ಹಾಗೂ ವಿಜಯಪುರ ಸೈನಿಕ ಶಾಲೆಯ ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಪಿಂಚಣಿ ಹಾಗೂ ವೈದ್ಯಕೀಯ ಹಕ್ಕು ಬಾಕಿ ವೆಚ್ಚ ಮಂಜೂರಾತಿ ಕುರಿತು ಚರ್ಚಿಸಿದ್ದೇನೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕುರಿತು ಧ್ವನಿ ಎತ್ತಲಾಗಿದೆ. ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳುವುದರ ಜತೆಗೆ ಅಪಘಾತಗಳನ್ನು ತಡೆಯಲು ಹೊಸ ಹಾಗೂ ಆಧುನಿಕ ತಂತ್ರಜ್ಞಾನದ ಮಾದರಿಯ ರಸ್ತೆ ನಿರ್ಮಾಣದ ಚರ್ಚಿಸಲಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರವು ಗಡಿಭಾಗದಲ್ಲಿ ಬರುವುದರಿಂದ ಕೃಷಿ, ಕೈಗಾರಿಕೆ ಚಟುವಟಿಕೆಗಳ ಕೇಂದ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಅಪಾರ ಸಾಮರ್ಥ್ಯ ಹೊಂದಿರುತ್ತದೆ. ಕೃಷಿ ವಲಯದಲ್ಲಿ ಕಬ್ಬಿನ ಉದ್ಯಮ, ಶಿಕ್ಷಣ, ಸಹಕಾರಿ, ಆರೋಗ್ಯ ಹಾಗೂ ಜವಳಿ ಉದ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಅಗತ್ಯ ಸಹಕಾರ ಮತ್ತು ಅನುದಾನ ನೀಡಿದಲ್ಲಿ ನನ್ನ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸುವೆ.